ADVERTISEMENT

ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನL ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:43 IST
Last Updated 4 ನವೆಂಬರ್ 2025, 4:43 IST
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಿ.ದೇವರಾಜ ಅರಸು ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅನಾವರಣಗೊಳಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಿ.ದೇವರಾಜ ಅರಸು ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಅನಾವರಣಗೊಳಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಅಸಮಾನತೆ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆಯನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಅಸಮಾನತೆ ನಿವಾರಣೆ ಹಾಗೂ ಅವಕಾಶ ವಂಚಿತರಿಗೆ ಅವಕಾಶ ಒದಗಿಸಿಕೊಡುವುದು ಪ್ರತಿ ರಾಜಕಾರಣಿಯ ಜವಾಬ್ದಾರಿ ಮತ್ತು ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಅರಸು ಕೆಲಸ ಮಾಡಿದ್ದರು. ಅತ್ಯಂತ ಕೆಳಮಟ್ಟದಲ್ಲಿರುವ ಜನ ಸಮುದಾಯಗಳ ಪ್ರತಿನಿಧಿಗಳನ್ನು ವಿಧಾನಸೌಧದ ಮೆಟ್ಟಿಲು ಹತ್ತುವಂತೆ ಮಾಡಿದರು’ ಎಂದು ಸ್ಮರಿಸಿದರು. 

ADVERTISEMENT

ದೊಡ್ಡ ಮಟ್ಟದಲ್ಲಿ ನಡೆಯಬೇಕಿತ್ತು: ‘ಅವರು ಸಾಮಾಜಿಕ ನ್ಯಾಯದ ಹರಿಕಾರರೂ ಆಗಿದ್ದರು. ಅವರ ಪ್ರತಿಮೆ ಅನಾವರಣ ಸಮಾರಂಭ ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ನಾನು ಮೈಸೂರಿಗೆ ಬರುತ್ತಿದ್ದೇನೆಂದು ತರಾತುರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಸ್ವಂತ ಜಿಲ್ಲೆಯಲ್ಲಿ ಅವರ ಪ್ರತಿಮೆ ಇರಬೇಕು ಎಂಬುದು ಬಹಳ ಜನರ ಆಸೆಯಾಗಿತ್ತು. ಈ ಕೆಲಸ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಜನರ ಆಶಯಕ್ಕೆ ಸ್ಪಂದಿಸಿ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ’ ಎಂದು ಹೇಳಿದರು.

‘ಒಂದೇ ಜಿಲ್ಲೆಯವರಾದವರೂ ಅವರು ಮತ್ತು ನಾನು ಬೇರೆ ಬೇರೆ ಪಕ್ಷದಲ್ಲಿದ್ದೆವು. ಅವರ ಸಾಮಾಜಿಕ ನ್ಯಾಯದ ಕಳಕಳಿ ಮಾದರಿಯಾಗಿದೆ’ ಎಂದರು.

ಅವಕಾಶ ಒದಗಿಸಿದ ಅರಸು: ‘ಸಂಪತ್ತು, ಅಧಿಕಾರ, ಜ್ಞಾನ ಯಾರ ಸ್ವತ್ತೂ ಅಲ್ಲ. ಆದರೆ, ಅವಕಾಶಗಳನ್ನು ಒದಗಿಸಿಕೊಡಬೇಕು. ಹೀಗೆ ಅವಕಾಶ ಕಲ್ಪಿಸುವ ಕೆಲಸವನ್ನು ಅರಸು ಮಾಡಿದ್ದರು. ಸಮ ಸಮಾಜದ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾದುದು. ದೀರ್ಘ ಕಾಲದವರೆಗೆ ಮುಖ್ಯಮಂತ್ರಿಯಾಗಿದ್ದ ಅವರು, ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸವನ್ನು ಮಾಡಿದರು’ ಎಂದು ಸ್ಮರಿಸಿದರು.

‘ಈವರೆಗೂ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ. ಸ್ವಾತಂತ್ರ್ಯದ ಆಶಯಗಳು ಈಡೇರಿಲ್ಲ. ಬಹುಸಂಖ್ಯಾತ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದರಿಂದ ಅಸಮಾನತೆ ಸೃಷ್ಟಿಯಾಗಿದೆ’ ಎಂದು ವಿಷಾದಿಸಿದರು.

‘ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಆಗಿದ್ದು ಅರಸು ಅವರ ಕಾಲದಲ್ಲಿ. ಇದರ ಸುವರ್ಣ ಸಂಭ್ರಮ ಮಾಡಿದ್ದು ನಮ್ಮ ಸರ್ಕಾರ ಎಂದು ಸ್ಮರಿಸಿದರು.

ವಾಲ್ಮೀಕಿ ಪ್ರತಿಮೆ: ‘ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲಿದ್ದೇವೆ. ಇದರ ಕಾಮಗಾರಿ ಆರಂಭವಾಗಿದೆ. ಕಲ್ಲಹಳ್ಳಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್ ಮಾತನಾಡಿ, ‘ಪ್ರತಿಮೆ ಅನಾವರಣ ಸೆಪ್ಟೆಂಬರ್‌ನಲ್ಲೇ ನಡೆಯಬೇಕಿತ್ತು. ತರಾತುರಿಯಲ್ಲಿ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಹೇಳಿದ್ದರು. ಈಗಲೂ ಇನ್ನಷ್ಟು ಅದ್ದೂರಿಯಾಗಿ ಆಗಬೇಕಿತ್ತು ಎಂಬ ಭಾವನೆಯೂ ಇದೆ’ ಎಂದರು.

‘ಒಟ್ಟು ₹ 1.15 ಕೋಟಿ ವೆಚ್ಚದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅರಸು ಹುಟ್ಟೂರು ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಅವರ ಹೆಸರಿನಲ್ಲಿ ಪ್ರತ್ಯೇಕ ಜಿಲ್ಲೆ ರಚಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್‌, ಸಿ.ಪುಟ್ಟರಂಗಶೆಟ್ಟಿ, ವಿಧಾನಪರಿಷತ್‌ ಸದಸ್ಯರಾದ ಎ.ಎಚ್‌. ವಿಶ್ವನಾಥ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಶಿವಕುಮಾರ್, ಸಿ.ಎನ್. ಮಂಜೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ದೇವರಾಜ ಅರಸು ಪುತ್ರಿ ಭಾರತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕಾಂಗ್ರೆಸ್‌ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಪಾಲ್ಗೊಂಡಿದ್ದರು. 

ಅಭಿಮಾನಿಗಳ ವಿರುದ್ಧ ಸಿದ್ದರಾಮಯ್ಯ ಗರಂ

‘ಅಂದು ದೇವರಾಜ ಅರಸು ಈಗ ಸಿದ್ದರಾಮಯ್ಯ’ ಎಂದು ಕೆಲವು ಅಭಿಮಾನಿಗಳು ಘೋಷಣೆ ಕೂಗಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ‘ಅರಸು ಅರಸುನೆ. ಸಿದ್ದರಾಮಯ್ಯ ಸಿದ್ದರಾಮಯ್ಯನೆ. ನನಗೂ– ಅವರಿಗೂ ಹೋಲಿಕೆ ಮಾಡಬೇಕಾಗಿಲ್ಲ’ ಎಂದು ತಿಳಿಸಿದರು.

ಹೆಚ್ಚು ಜನರು ಬಾರಲಿಲ್ಲ!

ಅರಸು ಪ್ರತಿಮೆ ಅನಾವರಣಗೊಳಿಸುವಂತೆ ವಿಧಾನಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್ ಹಾಗೂ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು ನೇತೃತ್ವದಲ್ಲಿ ಈಚೆಗೆ ಪ್ರತಿಭಟನೆ ನಡೆದಿತ್ತು. ಅನಾವರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿರಲಿಲ್ಲ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.