ADVERTISEMENT

SSLCಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ: ಮುಖ್ಯಶಿಕ್ಷಕರಿಗೆ ನೋಟಿಸ್ !

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 6:21 IST
Last Updated 23 ಜೂನ್ 2025, 6:21 IST
<div class="paragraphs"><p>ಫಲಿತಾಂಶ&nbsp;&nbsp;</p></div>

ಫಲಿತಾಂಶ  

   

ಸಂಗ್ರಹ ಚಿತ್ರ

ಮೈಸೂರು: ಜಿಲ್ಲೆಯು 2025–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಕುಸಿತ ಕಂಡು, 15ನೇ ಸ್ಥಾನಕ್ಕೆ ಇಳಿದಿರುವುದನ್ನು ಶಾಲಾ ಶಿಕ್ಷಣ ಇಲಾಖೆಯು ತೀವ್ರ ಗಂಭೀರವಾಗಿ ಪರಿಗಣಿಸಿದೆ. ಶೇ 60ಕ್ಕಿಂತ ಕಡಿಮೆ ‘ಪಾಸಾಗಿರುವ’ ಶಾಲೆಗಳ ಮುಖ್ಯಸ್ಥರಾದ ಮುಖ್ಯಶಿಕ್ಷಕರನ್ನು ಗುರಿಯಾಗಿಸಿ, ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ‘ಕಾರಣ ಕೇಳಿ’ (ಶೋಕಾಸ್) ನೋಟಿಸ್ ಜಾರಿಗೊಳಿಸಿದೆ.

ADVERTISEMENT

ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ‍ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದಕ್ಕೆ ಆಕ್ಷೇಪವೂ ವ್ಯಕ್ತಪಡಿಸಿರುವ ‘ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ’, ನೋಟಿಸ್‌ ವಾಪಸ್ ಪಡೆಯುವಂತೆ ಒತ್ತಾಯಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಸುಧಾರಣೆ ಸಾಧ್ಯವಾಗಿಲ್ಲ. ಜಿಲ್ಲೆಗೆ ಕಳೆದ ಬಾರಿ 7ನೇ ಸ್ಥಾನ ದೊರೆತಿತ್ತು. ಟಾಪ್‌ 10ರೊಳಗಿನ ಸ್ಥಾನ ಉಳಿಸಿಕೊಳ್ಳುವಲ್ಲೂ ವಿಫಲವಾಗಿದೆ. ‘ಟಾಪ್‌ 5ರೊಳಗಿನ ಸ್ಥಾನ ಪಡೆಯಬೇಕು’ ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಜಿಲ್ಲೆಯು 2022ರಲ್ಲಿ 16 ಹಾಗೂ 2023ರಲ್ಲಿ 19ನೇ ಸ್ಥಾನ ಗಳಿಸಿತ್ತು. ಕಳೆದ ಬಾರಿ ಶೇ 87.19ರಷ್ಟು ಫಲಿತಾಂಶದೊಂದಿಗೆ 12 ಸ್ಥಾನ ಜಿಗಿದಿತ್ತು. ಈ ಬಾರಿ ಕಳಪೆ ಸಾಧನೆ ಮಾಡಿರುವುದು, ಮುಖ್ಯಶಿಕ್ಷಕರ ಮೇಲೆ ಕ್ರಮಕ್ಕೆ ಮುಂದಾಗಲು ಕಾರಣವಾಗಿದೆ.

ಈ ಮೂಲಕ, ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸಾಧನೆ ತೋರಬೇಕೆಂಬ ಸಂದೇಶವನ್ನು ಎಲ್ಲ ಪ್ರೌಢಶಾಲೆಗಳಿಗೂ ರವಾನಿಸಲಾಗಿದೆ.

ನೋಟಿಸ್‌ನಲ್ಲೇನಿದೆ?:

‘ನಿಮ್ಮ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಕಲಿಕಾ ಮಟ್ಟ ಉನ್ನತಗೊಳಿಸುವ ಕ್ರಮಗಳೊಂದಿಗೆ ಫಲಿತಾಂಶ ಉತ್ತಮಗೊಳಿಸಲು ನೀವು ಸಮರ್ಪಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲದಿರುವುದು ಫಲಿತಾಂಶದಿಂದ ಕಂಡುಬಂದಿದೆ. ನಿಮ್ಮ ಈ ಧೋರಣೆಯು ನಿರ್ಲಕ್ಷ್ಯ ಹಾಗೂ ಕರ್ತವ್ಯದಲ್ಲಿ ಲೋಪವನ್ನು ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ನಿರ್ಲಕ್ಷ್ಯದ ಕಾರಣದಿಂದಾಗಿ ನಿಮ್ಮ ಮೇಲೇಕೆ ಕ್ರಮ ಜರುಗಿಸಬಾರದು’ ಎಂದು ಕೇಳಿ ಇಲಾಖೆಯ ಆಯುಕ್ತ ತ್ರಿಲೋಕ್‌ಚಂದ್ರ ಕೆ.ವಿ. ಆಯಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ನೋಟಿಸ್ (ತಿಳಿವಳಿಕೆ) ಜಾರಿಗೊಳಿಸಿದ್ದಾರೆ.

ಕಳಪೆ ಫಲಿತಾಂಶ ಪಡೆದ ಅನುದಾನಿತ ಪ್ರೌಢಶಾಲೆಗಳಿಗೆ ನೀಡುತ್ತಿರುವ ಅನುದಾನ ನಿಲ್ಲಿಸಲಾಗುವುದು. ವಿಷಯ ಶಿಕ್ಷಕರನ್ನು ಗುರುತಿಸಿ ಅಂಥವರ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಲಾಗುವುದು ಎಂದೂ ಇಲಾಖೆಯಿಂದ ತಿಳಿಸಲಾಗಿದೆ.

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಹೀಗಾಗಿ, ಇಲ್ಲಿನ ಮುಖ್ಯಶಿಕ್ಷಕರು ಹಾಗೂ ಸಂಯುಕ್ತ ಪಿಯು ಕಾಲೇಜಾಗಿದ್ದಲ್ಲಿ ಅದರ ಪ್ರಾಂಶುಪಾಲರಿಗೆ ಸಂಕಷ್ಟ ಎದುರಾಗಿದೆ. ಅವರ ಮೇಲೆ ಶಿಸ್ತುಕ್ರಮದ ತೂಗುಗತ್ತಿ ತೂಗುತ್ತಿದೆ. ಇಲಾಖೆಯ ಈ ಕ್ರಮವು ಸಂಘದ ಕೆಂಗಣ್ಣಿಗೆ ಗುರಿಯಾಗಿದೆ.

ಅವೈಜ್ಞಾನಿಕವಾಗಿದೆ ಎನ್ನುವ ಸಂಘ:

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅಧ್ಯಕ್ಷ ಜಿ.ಸಿ. ಶಂಕರ್, ‘ನೋಟಿಸ್ ಹಿಂಪಡೆಯಬೇಕು ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಅನುದಾನ ನಿಲ್ಲಿಸಲಾಗುವುದು ಎಂಬ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬಹುತೇಕ ಪ್ರೌಢಶಾಲೆಗಳಲ್ಲಿ ಶೇ 50ರಷ್ಟು ಶಿಕ್ಷಕರ ಕೊರತೆ ಇದೆ. ಅಲ್ಲೆಲ್ಲಾ ಅತಿಥಿ ಶಿಕ್ಷಕರ ಮೇಲೆ ನಿರ್ವಹಿಸಲಾಗುತ್ತಿದೆ. ಶಿಕ್ಷಕರು ವರ್ಗಾವಣೆಯಾದರೆ ಆ ಸ್ಥಾನಕ್ಕೆ ತುಂಬುವುದೇ ಇಲ್ಲ. ಪರೀಕ್ಷಾ ನಿಯಮ ಕಠಿಣ ಮಾಡಿದ್ದರಿಂದ ಆದನ್ನು ಪಾಲಿಸಬೇಕಾಯಿತು. ಹೀಗಿರುವಾಗ, ಫಲಿತಾಂಶ ಕುಸಿತಕ್ಕೆ ಮುಖ್ಯಶಿಕ್ಷಕರನ್ನು ಹೊಣೆ ಮಾಡಿರುವುದು ಸರಿಯಲ್ಲ. ನೋಟಿಸ್ ಜಾರಿಗೊಳಿಸಿರುವುದು ವೈಜ್ಞಾನಿಕವಾಗಿದೆ’ ಎಂದು ತಿಳಿಸಿದರು.

ಆಯಾ ಮುಖ್ಯಶಿಕ್ಷಕರು ಲಿಖಿತ ಸಮಜಾಯಿಷಿ ಕೊಡಬೇಕು ಇಲ್ಲದಿದ್ದಲ್ಲಿ ಹೇಳುವುದೇನೂ ಇಲ್ಲವೆಂದು ಶಿಸ್ತುಕ್ರಮ ಜರುಗಿಸಲಾಗುವುದು ತ್ರಿ
ಲೋಕ್‌ಚಂದ್ರ ಕೆ.ವಿ. ಆಯುಕ್ತ ಶಾಲಾ ಶಿಕ್ಷಣ ಇಲಾಖೆ
ಫಲಿತಾಂಶವನ್ನೇ ಮಾನದಂಡವನ್ನಾಗಿ ಪರಿಗಣಿಸಿ ಮುಖ್ಯಶಿಕ್ಷಕರಿಗೆ ಜಾರಿಗೊಳಿಸಿರುವ ನೋಟಿಸ್ ವಾಪಸ್ ಪಡೆದುಕೊಳ್ಳಬೇಕು
ಜಿ.ಸಿ. ಶಂಕರ್ ಅಧ್ಯಕ್ಷ ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಹಾಗೂ ಸಂಯುಕ್ತ ಪಿಯು ಕಾಲೇಜು ಪ್ರಾಂಶುಪಾಲರ ಸಂಘ

‘ಶಿಕ್ಷಕರ ಕೊರತೆ ಕಾರಣ’

‘ಗುಣಮಟ್ಟದ ಶಿಕ್ಷಣ ನೀಡಲು ಫಲಿತಾಂಶ ಉತ್ತಮಪಡಿಸಲು ಇಲಾಖೆಯ ಸುತ್ತೋಲೆ ಅನುಷ್ಠಾನಕ್ಕೆ ಮುಖ್ಯಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಿಕ್ಷಕರ ಹುದ್ದೆಗಳು ಕೊರತೆ ಇರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಜಿ.ಸಿ. ಶಂಕರ್‌ ಪ್ರ‌ತಿಕ್ರಿಯಿಸಿದರು. ‘ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಶಂಕರ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.