ಮೈಸೂರು: ‘ಹದಿಹರೆಯದ ಭಾವನೆಗಳನ್ನು ನಿಯಂತ್ರಿಸಿ, ಧನಾತ್ಮಕ ಮಾರ್ಗದಲ್ಲಿ ಮುನ್ನಡೆದಾಗ ಯಶಸ್ಸು ಸಾಧ್ಯ’ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗವು ಮಾನವ ಅಭಿವೃದ್ಧಿ ಮತ್ತು ಕಲ್ಯಾಣ ಸಂಘ, ಭಾರತೀಯ ಗೃಹ ವಿಜ್ಞಾನ ಸಂಘದ ಸಹಯೋಗದಲ್ಲಿ ‘ಹದಿಹರೆಯದ ಅಪಾಯ ಮತ್ತು ಕವಲು ದಾರಿಯಲ್ಲಿ ಜೀವನ ಕೌಶಲ’ ವಿಷಯದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಬಾಲ್ಯ ಕಳೆದು ಪ್ರೌಢಾವಸ್ಥೆಯನ್ನು ತಲುಪುವ ನಡುವೆ ಬರುವ ಹದಿಹರೆಯದಲ್ಲಿ ದೈಹಿಕ ಹಾಗೂ ಯೋಚನಾ ಲಹರಿ ಬದಲಾವಣೆಯಾಗಿರುತ್ತದೆ. ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಈ ವಯಸ್ಸಿನವರನ್ನು ಸೆಳೆಯುವ ಅನೇಕ ನಕಾರಾತ್ಮಕ ವಿಚಾರಗಳೂ ಇವೆ. ವಿಪರೀತ ಕುತೂಹಲ ಹಾಗೂ ಧೈರ್ಯದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಉತ್ತಮ ವಾತಾವರಣದಲ್ಲಿ ಇದ್ದಾಗ ಮಕ್ಕಳು ಹಾದಿ ತಪ್ಪದಿರಲು ಸಾಧ್ಯ’ ಎಂದು ಹೇಳಿದರು.
‘ಹದಿಹರೆಯದವರಲ್ಲಿ ಮೊಬೈಲ್, ಟಿವಿಯ ಗೀಳು ಹೆಚ್ಚಾಗಿದೆ. ದಿನದಲ್ಲಿ ಹೆಚ್ಚಿನ ಸಮಯವನ್ನು ಅದರೊಂದಿಗೆ ಕಳೆಯುತ್ತಿರುವುದರಿಂದ ಬೌದ್ಧಿಕ ಬೆಳವಣಿಗೆಯಾಗುತ್ತಿಲ್ಲ. ಈ ವಯಸ್ಸಿನಲ್ಲಿ ಮೆದುಳಿಗೆ ವ್ಯಾಯಾಮ ನೀಡುವುದು ಅವಶ್ಯ. ರಾತ್ರಿ ಬೇಗನೆ ಮಲಗಿ, ಮುಂಜಾನೆ ಎದ್ದು ವ್ಯಾಯಾಮ ಮಾಡುವುದು, ಪುಸ್ತಕ ಓದುವುದರೊಂದಿಗೆ ಜ್ಞಾನದ ಹರಿವು ಹೆಚ್ಚುತ್ತದೆ. ಅದರೊಂದಿಗೆ ಮೆದುಳು ಸಕ್ರಿಯವಾಗಿದ್ದು, ದಿನವಿಡೀ ಹರ್ಷದಿಂದ ಇರುವಂತೆ ಮಾಡುತ್ತದೆ’ ಎಂದು ವಿವರಿಸಿದರು.
ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎಂ.ಕೋಮಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.