ADVERTISEMENT

ತಿ.ನರಸೀಪುರ: ವಿಜ್ಞಾನಿಗಳಿಂದ ಜೋಳದ ಹೊಲ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:29 IST
Last Updated 1 ಜುಲೈ 2025, 15:29 IST
ತಿ.ನರಸೀಪುರ ತಾಲ್ಲೂಕಿನ ಬೂದಹಳ್ಳಿ ಗ್ರಾಮದ ಮುಸುಕಿನ‌ಜೋಳ ಬೆಳೆಯುತ್ತಿರುವ ರೈತರ ಜಮೀನುಗಳಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು  ಪರಿಶೀಲಿಸಿದರು
ತಿ.ನರಸೀಪುರ ತಾಲ್ಲೂಕಿನ ಬೂದಹಳ್ಳಿ ಗ್ರಾಮದ ಮುಸುಕಿನ‌ಜೋಳ ಬೆಳೆಯುತ್ತಿರುವ ರೈತರ ಜಮೀನುಗಳಲ್ಲಿ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು  ಪರಿಶೀಲಿಸಿದರು   

ತಿ.ನರಸೀಪುರ: ಸೋಸಲೆ ಹೋಬಳಿಯ ಬೂದಹಳ್ಳಿ, ಕೋಣಗಳ್ಳಿ, ನೆರಗ್ಯಾತನಹಳ್ಳಿ ನಾಗಲಗೆರೆ ಗ್ರಾಮಗಳಲ್ಲಿ  ಮುಸುಕಿನ ಜೋಳ ಬಿತ್ತನೆ ಮಾಡಿದ ರೈತರ ಜಮೀನುಗಳಿಗೆ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಕೆಲವು ಗ್ರಾಮಗಳಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಕೃಷಿ ಇಲಾಖೆ ವಿತರಿಸಿದ್ದ ಖಾಸಗಿ ಕಂಪೆನಿಯ ಮುಸುಕಿನ ಜೋಳದ ಬೀಜ ಮೊಳಕೆಯೊಡೆಯದ ಬಗ್ಗೆ ರೈತರು ದೂರಿದ್ದರು. ಮಂಡ್ಯದ ವಿ.ಸಿ. ಫಾರ್ಮ್‌ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು  ಅಲ್ಲಿ ಪರಿಶೀಲನೆ ನಡೆಸಿ, ಮೊಳಕೆ ಒಡೆಯದ ಹೊಲದಿಂದ ಮಣ್ಣಿನ ಮಾದರಿಯನ್ನು ಸಂಗ್ರಹಿಸಿದರು.

ಬೂದಹಳ್ಳಿ ಸೇರಿದಂತೆ ಹಲವಾರು ರೈತರ ಜಮೀನುಗಳಲ್ಲಿರುವ ಮುಸುಕಿನ ಜೋಳದ ಬೆಳೆ ಪರೀಕ್ಷಿಸಿದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕಿ ಕೆ.ಎಸ್.ಸುಹಾಸಿನಿ ಮಾತನಾಡಿ, ‘ಮುಸುಕಿನ ಜೋಳದ ಬಿತ್ತನೆ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಸೈನಿಕ ಹುಳುವಿನ ಬಾಧೆ ಕಂಡುಬಂದಿದೆ. ಈ ಹುಳುವಿನ ಹತೋಟಿಗಾಗಿ ಡೆಲಿಗೇಟ್ ಕೀಟ ನಾಶಕವನ್ನು ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ನಂತೆ ಬೆರೆಸಿ ಅದನ್ನು ಗಿಡಗಳ ಸುಳಿಗೆ ಬೀಳುವಂತೆ ಸಿಂಪರಣೆ ಮಾಡಬೇಕು ಎಂದು ರೈತರಿಗೆ ತಿಳಿಸಿದ್ದೇವೆ. ಹಲವೆಡೆ ಗಿಡಗಳ ಸಂಖ್ಯೆ ಕಡಿಮೆ ಇರುವುದು ಸಹ ಕಂಡುಬಂದಿದ್ದು, ರೈತರು ಬಿತ್ತನೆ ಮಾಡಿ ಉಳಿದಿರುವ ಬಿತ್ತನೆ ಬೀಜಗಳನ್ನು ಪರೀಕ್ಷೆಗಾಗಿ ತೆಗೆದುಕೊಂಡು ಪರೀಕ್ಷೆಯ ಫಲಿತಾಂಶ ಬಂದ ನಂತರ ವರದಿ ಸಲ್ಲಿಸುವುದಾಗಿ ತಿಳಿಸಿದರು.

ವಿ.ಸಿ.ಫಾರ್ಮ್‌  ಮುಸುಕಿನ ಜೋಳ ತಳಿ ವಿಜ್ಞಾನಿ ಮಹದೇವು, ಬೇಸಾಯ ಶಾಸ್ತ್ರಜ್ಞ ಸುನಿಲ್ ಕುಮಾರ್, ಮೈಸೂರು ವಿಭಾಗದ ಉಪ ಕೃಷಿ ನಿರ್ದೇಶಕ ಧನಂಜಯ, ಸೋಸಲೆ ಹೋಬಳಿ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ಬಿ.ಪಿ. ರಾಘವೇಂದ್ರ , ಸಿಬ್ಬಂದಿ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.