ತಿ.ನರಸೀಪುರ: ಒಳ ಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಒಳ ಮೀಸಲಾತಿ ವರದಿಯು ಅವೈಜ್ಞಾನಿಕವಾಗಿದ್ದು, ಅದನ್ನು ಮರು ಪರಿಷ್ಕರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ‘ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳಮೀಸಲಾತಿ ರಕ್ಷಣಾ ಸಮಿತಿ’ ನೇತೃತ್ವದಲ್ಲಿ ಮುಖಂಡರು, ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಧರಣಿ ನಡೆಸಿದರು. ಆಲಗೂಡು ಶಿವಕುಮಾರ್, ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿನ ಅಂಕಿ ಅಂಶಗಳಲ್ಲಿ ನ್ಯೂನತೆ ಇದ್ದು ಅವೈಜ್ಞಾನಿಕ ವಾಗಿದೆ. ಬಲಗೈ ವಿಭಾಗದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿ, ಬಲಗೈ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿ ಗುಂಪಿಗೆ ಸೇರಿಸಿ ಸಮುದಾಯದ ಜನ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಆದಿಕರ್ನಾಟಕ, ಆದಿದ್ರಾವಿಡ, ಆದಿಆಂದ್ರ ಸಮೂಹಕ್ಕೆ ಶೇ 1 ಮೀಸಲಾತಿ ನಿಗದಿ ಪಡಿಸಿದೆ. ಮರು ಪರಿಷ್ಕರಣೆ ಮಾಡಿ ನಿಖರ ಅಂಕಿ ಅಂಶಗಳನ್ನು ನೀಡಬೇಕಿದೆ. ಗ್ರಾಮೀಣ ಭಾಗದಲ್ಲೂ ಜನ ಜಾಗೃತರಾಗಬೇಕಿದೆ ಎಂದರು.
ವಿಚಾರವಾದಿ ಕೆ. ಎನ್. ಪ್ರಭುಸ್ವಾಮಿ ಮಾತನಾಡಿ, ಒಳ ಮೀಸಲಾತಿಯನ್ನು ನಾವು ವಿರೋಧಿಸಲ್ಲ ಆದರೆ ಬಲಗೈ ಸಮುದಾಯಕ್ಕೆ ಸೇರ್ಪಡೆಯಾಗಬೇಕಾದ ಅನೇಕ ಜಾತಿಗಳನ್ನು ಎಡಗೈಗೆ ಸೇರಿಸಲಾಗಿದೆ. ಮತ್ತೆ ಕೆಲ ಸಮುದಾಯಗಳನ್ನು ಅಲೆಮಾರಿ ಸಮುದಾಯಗಳೆಂದು ನಮೂದಿಸಲಾಗಿದೆ. ಇದರಿಂದ ಅಂಕಿ ಅಂಶಗಳು ವ್ಯತ್ಯಾಸ ವಾಗಿದೆ. ಇದು ಸರಿಪಡಿಸಬೇಕಿದೆ.
ರಾಜ್ಯ ಛಲವಾದಿ ಮಹಾ ಸಭಾದ ಸಿದ್ದಯ್ಯ ನೇತೃತ್ವದಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಿ ಹಲವು ಅಂಶಗಳ ಬಗ್ಗೆ ಕ್ರಮಕ್ಕೆ ಕೋರಿತ್ತು. ಅದರೆ ಏಕ ಪಕ್ಷೀಯವಾಗಿ ಒಂದು ಸಮುದಾಯವನ್ನು ಓಲೈಸುವ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿ ಹುದ್ದೆಗೆ ಅರ್ಹತೆ ಇದ್ದರೂ ಅವಕಾಶ ವಂಚಿತರನ್ನಾಗಿ ಮಾಡಲಾಗಿದೆ. ಈಗ ಮೀಸಲಾತಿ ನೆಪದಲ್ಲಿ ಅನ್ಯಾಯ ವಾಗಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಎಸ್.ಎನ್.ಸಿದ್ಧಾರ್ಥ, ಕುಕ್ಕೂರು ರಾಜು, ಗಣೇಶ್ ಮಾತನಾಡಿದರು. ತಾಲ್ಲೂಕು ಆಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮುಖಂಡರಾದ ತುಂಬಲ ಮಂಜುನಾಥ್ ಕುಕ್ಕೂರು ಪ್ರಸನ್ನ, ತುಂಬಲ ಅಂದಾನಿ, ತುಂಬಲ ಪ್ರಕಾಶ್,
ಕುಕ್ಕೂರು ರಾಜು, ಮಹೇಶ್ ಸೋಸಲೆ ಪರಶಿವ ಮೂರ್ತಿ, ಡಿ. ಆರ್. ಮೂರ್ತಿ , ನಿಲಸೋಗೆ ಬಸವರಾಜು, ಮಹದೇವಮ್ಮ, ಸೋಮಶೇಖರ್, ಚಂದ್ರಮ್ಮ, ಮಿಥುನ್, ಸಿದ್ದರಾಜು, ಚಿದರಹಳ್ಳಿ ಮಹೇಶ್, ಉಕ್ಕಲಗೆರೆ ರಾಜು, ಕಲಿಯೂರು ಶಿವಣ್ಣ, ಚೌಹಳ್ಳಿ ಸಿದ್ದರಾಜು, ಕುಮಾರ್ , ಮುಖಂಡರು ಇದ್ದರು.
ಸಾಹಿತಿ ದೇವನೂರರ ಪತ್ರಕ್ಕೆ ಆಕ್ಷೇಪ
ದೇವನೂರ ಮಹದೇವ ಅವರು ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೆ ಸರ್ಕಾರಕ್ಕೆ ಪತ್ರ ಬರೆದಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಭುಸ್ವಾಮಿ ಸಮಾಜದ ಪರ ನಿಲ್ಲಬೇಕಾದ ಅವರು ಹೀಗೆ ಹೇಳಿದರೆ ಸಮುದಾಯದ ಪರ ನಿಲ್ಲುವವರಾರು ಎಂದ ಅವರು ಅವೈಜ್ಞಾನಿಕ ವರದಿ ಜಾರಿಗೊಳಿಸುವಂತೆ ಹೇಳಿರುವುದು ವಿಷಾದನೀಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.