ADVERTISEMENT

ತಿ.ನರಸೀಪುರ | 'ಬೆಂಕಿ ಅವಘಡಗಳ ಬಗ್ಗೆ ತಕ್ಷಣ ನಿಖರ ಮಾಹಿತಿ ನೀಡಿ'

ಚೌಹಳ್ಳಿ‌ಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ– ಜಾಗೃತಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:18 IST
Last Updated 15 ಏಪ್ರಿಲ್ 2025, 14:18 IST

ತಿ.ನರಸೀಪುರ: ‘ಬೆಂಕಿ ಅವಘಡ ದೊಡ್ಡ ಪ್ರಮಾಣದಲ್ಲಿರಲಿ ಅಥವಾ  ಸಣ್ಣದೇ ಆಗಿರಲಿ, ತಕ್ಷಣ ಸಮೀಪದ ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಬೇಕು’ ಎಂದು ಪಟ್ಟಣದ ಅಗ್ನಿಶಾಮಕ ಅಧಿಕಾರಿ ಸಿ.ತಮ್ಮಣ್ಣ ಸಲಹೆ ಮಾಡಿದರು.

ಏ.14 ರಿಂದ 20 ರವರೆಗೆ ನಡೆಯುತ್ತಿರುವ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ತಾಲ್ಲೂಕಿನ ಚೌಹಳ್ಳಿ ಗ್ರಾಮಸ್ಥರಿಗೆ ಕರಪತ್ರಗಳನ್ನು ಹಂಚಿ, ಬೆಂಕಿ ಅವಘಡಗಳ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ನಗರ, ಗ್ರಾಮೀಣ ಪ್ರದೇಶಗಳಲ್ಲಿ ಬೆಂಕಿ ಅವಘಡ ಸಂಭವಿಸಿದಲ್ಲಿ ಸಾರ್ವಜನಿಕರು ಗಾಬರಿಯಾಗದೆ, ಸರಿಯಾದ ವಿಳಾಸ, ಹೆಸರು, ದೂರವಾಣಿ ಸಂಖ್ಯೆ, ಯಾವ ರೀತಿಯ ಬೆಂಕಿ ಮತ್ತು  ಸಂರ್ಕಿಸುವ  ಮಾರ್ಗದ ಬಗ್ಗೆ  ನಿಖರ ಮಾಹಿತಿ ನೀಡಿದರೆ ಹತ್ತಿರದ ಅಗ್ನಿಶಾಮಕ ಠಾಣೆಯಿಂದ ಶೀಘ್ರ ಘಟನಾ ಸ್ಥಳಕ್ಕೆ ಬರಲು ಅನುಕೂಲವಾಗುತ್ತದೆ ಎಂದರು.

ADVERTISEMENT

‘ಅಗ್ನಿಶಾಮಕ ವಾಹನಗಳು ರಸ್ತೆಯಲ್ಲಿ ಬರುವಾಗ ಪಾದಚಾರಿಗಳು, ಸೈಕಲ್ ಸವಾರರು, ವಾಹನ ಚಾಲಕರು ತಕ್ಷಣ ದಾರಿ ಬಿಟ್ಟುಕೊಟ್ಟು ಹೆಚ್ಚಿನ ಅನಾಹುತ ತಪ್ಪಿಸಲು ನೆರವಾಗುವುದು. ಯಾವುದೇ ವಿದ್ಯುತ್ ಸಂಬಂಧಿಸಿದ ಬೆಂಕಿಯಾದಾಗ ನೀರನ್ನು ಬಳಸಬಾರದು. ಕಟ್ಟಡದ ಮೈನ್‌ಸ್ವಿಚ್  ಆಫ್ ಮಾಡಬೇಕು ಹಾಗೂ ಮರಳನ್ನು ಎರಚಬೇಕು’ ಎಂದು ತಿಳಿಸಿದರು.

‘ಮನೆ, ಹುಲ್ಲಿನ ಬಣವೆ,  ಮರದ ರಾಶಿಗಳಿಗೆ ಬೆಂಕಿ ಸೋಕಿದಾಗ ಸಾಕಷ್ಟು ನೀರು ಮತ್ತು ಮರಳನ್ನು ಸುರಿಯಬಾರದು. ಉರಿಯುತ್ತಿರುವ ಸ್ಟವ್‌ಗೆ ಸೀಮೆಎಣ್ಣೆ ತುಂಬಬಾರದು. ಅಡುಗೆ ಅನಿಲ‌ ಬಳಸುವ ವೇಳೆ
ಪ್ರತಿ ಉಪಯೋಗದ ನಂತರ  ಬರ್ನರ್ ಹಾಗೂ ರೆಗ್ಯುಲೇಟರ್ ವಾಲ್ವ್‌ ಅನ್ನು ಸರಿಯಾಗಿ ಮುಚ್ಚಿರಿ.  ಪ್ರತಿದಿನ ರಾತ್ರಿ ಮಲುಗುವ ಮುನ್ನ ರೆಗ್ಯುಲೇಟರ್ ವಾಲ್ವ್‌ ಮುಚ್ಚಿರುವುದನ್ನು ಖಾತರಿಪಡಿಸಬೇಕು.   ಸೋರಿಕೆ ಕಂಡು‌ ಬಂದಲ್ಲಿ ಸಿಲಿಂಡರ್‌ ರೆಗುಲೇಟರ್ ಆಫ್ ಮಾಡಿ, ವಿದ್ಯುತ್ ಬಳಕೆಯಲ್ಲಿ ಜಾಗೃತಿ ವಹಿಸಬೇಕು’ ಎಂದು ಮಾಹಿತಿ ನೀಡಿದರು.ಅಗ್ನಿ ದುರಂತ ಮತ್ತು ಅಗ್ನಿ ಅವಘಡಗಳ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು.

 ಠಾಣೆಯ ಮುಂಬೈ ಬಂದರಿನಲ್ಲಿ ಅಗ್ನಿ ದುರಂತದಿಂದ ಮೃತಪಟ್ಟವರ ಸ್ಮರಣಾರ್ಥ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಠಾಣೆಯ ಸಿಬ್ಬಂದಿ  ಯೋಗೀಶ್ ಎಚ್.ಎಸ್, ನಾಗರಾಜು ಎಂ. ಪ್ರಸಾದ್ ಎಸ್., ಸಂತೋಷ್ ಹೊನ್ನುಂಗರ, ರಾಜು ಕೆಂಚಪ್ಪ ಸನದಿ, ಕಿಶೋರ್ ಜೆ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.