ADVERTISEMENT

ಸಾಲಿಗ್ರಾಮ: ತಾಲ್ಲೂಕು ಗಡಿ ನಿಗದಿ; ಜನತೆ ಹರ್ಷ

10 ತಾಲ್ಲೂಕು ಪಂಚಾಯಿತಿ ಕ್ಷೇತ್ರ, 4 ಜಿಲ್ಲಾ ಪಂಚಾಯಿತಿ ಕ್ಷೇತ್ರ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 4:33 IST
Last Updated 28 ಅಕ್ಟೋಬರ್ 2021, 4:33 IST
ಸಾಲಿಗ್ರಾಮ ಪಟ್ಟಣದ ಗಾಂಧಿ ವೃತ್ತ
ಸಾಲಿಗ್ರಾಮ ಪಟ್ಟಣದ ಗಾಂಧಿ ವೃತ್ತ   

ಸಾಲಿಗ್ರಾಮ: ಜಿಲ್ಲೆಯ 9ನೇ ತಾಲ್ಲೂಕು ಕೇಂದ್ರವಾಗಿ ಹೊರ ಹೊಮ್ಮಿರುವ ಸಾಲಿಗ್ರಾಮ ತಾಲ್ಲೂಕು ಕೇಂದ್ರಕ್ಕೆ 10 ತಾಲ್ಲೂಕು ಪಂಚಾಯಿತಿ ಕ್ಷೇತ್ರ ಹಾಗೂ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಸೇರ್ಪಡೆಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ಹೊಸ ತಾಲ್ಲೂಕಿನ ಗಡಿಯನ್ನು ನಿಗದಿ ಪಡಿಸಿದೆ.

‘ಹೊಸ ತಾಲ್ಲೂಕಿಗೆ ಕೆ.ಆರ್.ನಗರ ತಾಲ್ಲೂಕಿನಿಂದ ತಾ.ಪಂ ಮತ್ತು ಜಿ.ಪಂ ಕ್ಷೇತ್ರಗಳನ್ನು, ಮಿರ್ಲೆ, ಸಾಲಿಗ್ರಾಮ ಮತ್ತು ಚುಂಚನಕಟ್ಟೆ ಹೋಬಳಿಯ ಬಹುತೇಕ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ. ಹೊಸ ಅಗ್ರಹಾರ ಹೋಬಳಿಯ ಭೇರ್ಯ, ಬಟಿಗನಹಳ್ಳಿ, ಚಿಕ್ಕಭೇರ್ಯ, ಮುಂಜನಹಳ್ಳಿ, ಉದಯಗಿರಿ ಗೇರದಡ, ಗುಳುವಿನಅತ್ತಿಗುಪ್ಪೆ, ಅರಕೆರೆ, ಮಠದಕಾವಲ್ ಗ್ರಾಮಗಳನ್ನು ಮಿರ್ಲೆ ಹೋಬಳಿಗೆ ಸೇರ್ಪಡೆ ಮಾಡಿ ಹೊಸ ತಾಲ್ಲೂಕಿನ ಗಡಿ ವ್ಯಾಪ್ತಿಗೆ ಸೇರಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಚೇತನ್ ಈಚೆಗೆ ಅಧಿಸೂಚನೆ ಹೊರಡಿಸಿದ್ದಾರೆ.

ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಂತರ ಹೊಸ ತಾಲ್ಲೂಕು ಕೇಂದ್ರವಾದ ಸಾಲಿಗ್ರಾಮದಲ್ಲೇ ತಾಲ್ಲೂಕು ಪಂಚಾಯಿತಿ ಆಡಳಿತ ನಿರ್ವಹಣೆ ಮಾಡಲಿದೆ ಎಂದು ತಿಳಿದು ಬಂದಿದೆ. ಹೊಸ ತಾಲ್ಲೂಕಿಗೆ ತಾ.ಪಂ. ಮತ್ತು ಜಿ.ಪಂ. ಕ್ಷೇತ್ರಗಳನ್ನು ಬೇರ್ಪಡಿಸಿದ ಮೇಲೆ ಕೆ.ಆರ್.ನಗರ ತಾಲ್ಲೂಕಿಗೆ 11 ತಾ.ಪಂ ಹಾಗೂ 3 ಜಿ.ಪಂ ಕ್ಷೇತ್ರಗಳು ಉಳಿದುಕೊಂಡಿವೆ.

ADVERTISEMENT

‘ಹೊಸ ತಾಲ್ಲೂಕಿನ ಗಡಿ ರೇಖೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುವುದು ಸಂತೋಷದ ವಿಚಾರ. ಇದರ ಜತೆಗೆ ತಾಲ್ಲೂಕು ಆಡಳಿತಕ್ಕೆ ಅಗತ್ಯ ಇರುವ ಕಚೇರಿಗಳನ್ನು ರಾಜ್ಯ ಸರ್ಕಾರ ಶೀಘ್ರವೇ ಪ್ರಾರಂಭಿಸಬೇಕು’ ಎಂದು ಶಾಸಕ ಸಾ.ರಾ.ಮಹೇಶ್ ಮನವಿ ಮಾಡಿದರು.

‘ಮುಂದಿನ ದಿನಗಳಲ್ಲಿ ತಾಲ್ಲೂಕು ಆಡಳಿತ ಇಲ್ಲಿಂದಲೇ ಆಡಳಿತ ನಡೆಸುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ’ ಎಂದು ಸಾಲಿಗ್ರಾಮ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರೇವಣ್ಣ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.