ADVERTISEMENT

ತನ್ವೀರ್ ಸೇಠ್ ಕಿವಿ ಭಾಗದ ಮರುಜೋಡಣೆ ವಿಫಲ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 20:15 IST
Last Updated 21 ನವೆಂಬರ್ 2019, 20:15 IST
ತನ್ವೀರ್ ಸೇಠ್‌
ತನ್ವೀರ್ ಸೇಠ್‌   

ಮೈಸೂರು: ಹಲ್ಲೆಗೀಡಾಗಿ ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರ ತುಂಡರಿಸಿದ್ದ ಕಿವಿಯ ಕೆಳ ಭಾಗದ ಮರುಜೋಡಣೆ ವಿಫಲವಾಗಿದೆ.

‘ಮರುಜೋಡಣೆ ಮಾಡಿದ್ದ ಭಾಗವು ದೇಹಕ್ಕೆ ಹೊಂದಿಕೊಳ್ಳದೇ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ, ಗುರುವಾರ ಬೆಳಿಗ್ಗೆ ಮತ್ತೆ ಶಸ್ತ್ರಚಿಕಿತ್ಸೆ ನಡೆಸಿ, ಮರುಜೋಡಿಸಿದ್ದ ಭಾಗವನ್ನು ತೆಗೆದು ಹಾಕಲಾಗಿದೆ. ಆದರೆ, ಇದನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಬಹುದು’ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು‌.

‘ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಒಂದು ನರಕ್ಕೆ ಹಾನಿಯಾಗಿರುವುದರಿಂದ ಮಾತನಾಡುವಾಗ, ನಗುವಾಗ ತುಟಿ ಸ್ವಲ್ಪ ಓರೆಯಾಗುತ್ತಿದೆ. ಜತೆಗೆ, ಧ್ವನಿ ಬದಲಾವಣೆಯಾಗಿದೆ. ಮುಂದಿನ ಮೂರು ವಾರಗಳ ನಂತರ ಈ ನ್ಯೂನತೆ ಸರಿಹೋಗುವ ಸಾಧ್ಯತೆ ಇದೆ’ಎಂದು ತಜ್ಞ ವೈದ್ಯ ದತ್ತಾತ್ರಿ ತಿಳಿಸಿದರು.

ADVERTISEMENT

‘ಸಂಜೆ ಅವರನ್ನು ವಾರ್ಡ್‌ಗೆ ಸ್ಥಳಾಂತರ ಮಾಡಲಾಗುವುದು. ಇನ್ನೂ ಒಂದು ವಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುವುದು. ಹಲವು ವಾರಗಳ ವಿಶ್ರಾಂತಿಯ ಅಗತ್ಯವಿದೆ’ ಎಂದರು.

ತನ್ವೀರ್‌ ಸೇಠ್‌ ಮೇಲೆ ಹಲ್ಲೆ ಮಾಡಿದವರು ಯಾವುದೇ ಸಂಘಟನೆಗೆ ಸೇರಿರಲಿ, ಅವರು ಯಾರೇ ಆಗಿರಲಿ, ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ತನಿಖಾ ಹಂತದಲ್ಲಿ ಯಾವುದೇ ಸಂಘಟನೆಯ ಹೆಸರನ್ನು ಹೇಳಬಾರದು. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.