ADVERTISEMENT

ಟೆಂಟ್‌ ಮುಕ್ತ ಕರ್ನಾಟಕ; ಅನುದಾನ ಮಂಜೂರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 11:21 IST
Last Updated 28 ಅಕ್ಟೋಬರ್ 2021, 11:21 IST

ಮೈಸೂರು: ಅಲೆಮಾರಿ ಜನಾಂಗಕ್ಕೆ ಶಾಶ್ವತ ನೆಲೆ ಕಲ್ಪಿಸಲಿಕ್ಕಾಗಿ ರೂಪಿಸಲಾದ ‘ಟೆಂಟ್ ಮುಕ್ತ ಕರ್ನಾಟಕ’ ಯೋಜನೆಗೆ ಗ್ರಹಣ ಹಿಡಿದಿದ್ದು, ಬಿಡುಗಡೆಗೊಂಡ ಅನುದಾನವನ್ನು ಮಂಜೂರು ಮಾಡಬೇಕು ಎಂದು ಎಸ್‌ಸಿ–ಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಗುರುವಾರ ಇಲ್ಲಿ ಆಗ್ರಹಿಸಿತು.

ಇಂದಿಗೂ ಅಲೆಮಾರಿ ಸಮುದಾಯದ ಜನರು ಬಟ್ಟೆ, ಕೌದಿ, ಟೆಂಟು, ಜೋಪಡಿ, ಗುಡಾರ, ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಶಾಶ್ವತ ನೆಲೆ ಕಲ್ಪಿಸಲು ಎಸ್‌ಸಿಪಿ/ಟಿಎಸ್‌ಪಿ ಅನುದಾನದಲ್ಲಿ, ಎಸ್‌ಸಿ–ಎಸ್‌ಟಿ ಅಲೆಮಾರಿ ವಸತಿ ಯೋಜನೆಯಡಿ ಟೆಂಟು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ₹ 250 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಆದರೆ ರಾಜೀವ್ ಗಾಂಧಿ ನಿಗಮ, ಅಲೆಮಾರಿ ಜನಾಂಗ ವಿರೋಧಿ ನೀತಿ ಅನುಸರಿಸುತ್ತಿದೆ. ಇದುವರೆಗೂ ಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ. ಶೀಘ್ರವೇ ಅನುದಾನ ಮಂಜೂರು ಮಾಡಿ, ಅಲೆಮಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ನಗರದಲ್ಲಿ ನಡೆದ ಪ‍ತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕೊತ್ತಗೆರೆ ಒತ್ತಾಯಿಸಿದರು.

ADVERTISEMENT

ಎಸ್‌ಸಿ–ಎಸ್‌ಟಿ ಅಲೆಮಾರಿ ಅಭಿವೃದ್ಧಿ ಕೋಶವನ್ನು 74 ವಿಮುಕ್ತ ಅಲೆಮಾರಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಗಂಡ ವಿಮುಕ್ತ ಅಲೆಮಾರಿ ಅಭಿವೃದ್ಧಿ ನಿಗಮವನ್ನಾಗಿ ಪರಿವರ್ತಿಸಿ, ₹ 250 ಕೋಟಿ ಅನುದಾನ ನಿಗದಿಪಡಿಸಬೇಕು.

ರಾಜ್ಯದ ಎಲ್ಲೆಡೆ ವಿಳಾಸವಿಲ್ಲದೇ ಟೆಂಟು, ಹಟ್ಟಿ, ಹಾಡಿ, ಪೋಡಿಯ ಗುಡಿಸಲುಗಳಲ್ಲಿರುವ ಅಲೆಮಾರಿಗಳಿಗೆ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತ, ಕಂದಾಯ ಇಲಾಖೆ ಮೀನ–ಮೇಷ ಎಣಿಸುತ್ತಿದ್ದು, ಈ ಎಲ್ಲ ಅಡೆತಡೆ ನಿವಾರಿಸಿ ಅವರಿಗೆಲ್ಲರಿಗೂ ಪ್ರಮಾಣ ಪತ್ರ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.

ಮಹಾಸಭಾದ ಉಪಾಧ್ಯಕ್ಷ ಡಾ.ಕೃಷ್ಣಮೂರ್ತಿ ಮಾತನಾಡಿ ‘ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲ ನಿವಾಸಿ ಬುಡಕಟ್ಟು ಅಧ್ಯಯನ ಕೇಂದ್ರ ಮುಚ್ಚಿರುವುದು ಖಂಡನೀಯ. ಇದು ಆದಿವಾಸಿಗಳ ವಿರೋಧಿ ನೀತಿ. ಕೇಂದ್ರವನ್ನು ಪುನರಾರಂಭಿಸಿ, ₹ 5 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಖಜಾಂಚಿ ಸಿದ್ದಪ್ಪಾಜಿ ಕೆ.ಪಿ. ಕೊಳ್ಳೇಗಾಲ ಮಾತನಾಡಿದರು. ಜಂಟಿ ಕಾರ್ಯದರ್ಶಿ ಮಂಜುನಾಥ್ ದಾಯತ್ಕರ್, ಜಿಲ್ಲಾ ಅಧ್ಯಕ್ಷ ಅಂಬರೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.