ADVERTISEMENT

ಲೂಟಿ ಹೊಡೆಯುತ್ತಿರುವ ಬಿಜೆಪಿ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ಆರೋಪ

ಕೆ.ಆರ್‌.ನಗರದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 19:35 IST
Last Updated 28 ಜುಲೈ 2022, 19:35 IST
ಕೆ.ಆರ್.ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಬಸವಪ್ರಿಯ ಸ್ವಾಮೀಜಿ, ಸಾ.ರಾ. ಮಹೇಶ್‌, ಜ್ಞಾನಪ್ರಕಾಶ ಸ್ವಾಮೀಜಿ, ಅಚ್ಯುತಾನಂದ, ಸಿ.ಎನ್.ಮಂಜೇಗೌಡ ಇದ್ದಾರೆ
ಕೆ.ಆರ್.ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಬಸವಪ್ರಿಯ ಸ್ವಾಮೀಜಿ, ಸಾ.ರಾ. ಮಹೇಶ್‌, ಜ್ಞಾನಪ್ರಕಾಶ ಸ್ವಾಮೀಜಿ, ಅಚ್ಯುತಾನಂದ, ಸಿ.ಎನ್.ಮಂಜೇಗೌಡ ಇದ್ದಾರೆ   

ಕೆ.ಆರ್.ನಗರ: ‘ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಬ್ಬರೂ ಲೂಟಿ ಹೊಡೆಯುತ್ತಿ ದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿನ ಆದಿಶಕ್ತಿ ತೋಪಮ್ಮನವರ ದೇವಸ್ಥಾನದ ಬಳಿ ಗುರುವಾರ ನಡೆದ ಅಂಬೇಡ್ಕರ್ ಸಮುದಾಯ ಭವನದ ಶಂಕುಸ್ಥಾಪನೆ ಮತ್ತು 131ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉಪಕರಣ ಖರೀದಿಗೆ ತೋಟಗಾರಿಕೆ ಇಲಾಖೆ ಸಹಾಯಧನ ನೀಡಲು ಪ್ರತಿ ವರ್ಷ ₹500 ಕೋಟಿ ಅನುದಾನ ನೀಡಲಾಗುತ್ತದೆ. ಸಹಾಯಧನ ಬಿಡುಗಡೆಗೆ ರೈತರಿಂದ ಶೇ 8.50ರಷ್ಟು ಲಂಚ ಪಡೆಯಲಾಗುತ್ತಿದೆ ಎಂದು ವಿಷಯ ತಿಳಿದು ಆಘಾತವಾಯಿತು’ ಎಂದು ಹೇಳಿದರು.

ADVERTISEMENT

‘ಧರ್ಮದ ಹೆಸರಿನಲ್ಲಿ, ಸಂಘರ್ಷದ ಮೂಲಕ ಸಮಾಜದ ಶಾಂತಿಯನ್ನು ಹಾಳು ಮಾಡಲಾಗುತ್ತಿದೆ. ಅಮಾಯಕ ಮಕ್ಕಳ ಬಲಿದಾನದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಇಬ್ಬರು ಯುವಕರು ಬೇರೆ– ಬೇರೆ ಕೋಮಿಗೆ ಸೇರಿದವರು. ಜನ್ಮ ಕೊಟ್ಟ ತಂದೆ–ತಾಯಿ, ಮದುವೆಯಾದ ಮಹಿಳೆ ಈಗ ಬೀದಿಗೆ ಬಿದ್ದಿದ್ದಾರೆ. ಹಿಂದುತ್ವದ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳು, ಮೇಲ್ವರ್ಗದ ಮಕ್ಕಳು ಬಲಿಯಾಗುವುದಿಲ್ಲ. ಬಡ, ಮಧ್ಯಮ ವರ್ಗದ ವ್ಯಕ್ತಿಗಳೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ಒಂದು ವರ್ಗದ ಮಠ ಮಾನ್ಯಗಳು ಸರ್ಕಾರದಿಂದ ಕೋಟ್ಯಂತರ ಬೆಲೆ ಬಾಳುವ ಭೂಮಿ, ಅನುದಾನ ಪಡೆದು ಆಶೀರ್ವಾದ ಮಾಡುತ್ತಿವೆ. ಮತ್ತೊಂದೆಡೆ ಯಾವುದೇ ಮುಲಾಜಿಗೆ ಒಳಗಾಗದೇ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವಂತಹ, ಸಮಾಜವನ್ನು ತಿದ್ದುವ ಕೆಲಸವನ್ನು ಜ್ಞಾನಪ್ರಕಾಶ ಸ್ವಾಮೀಜಿ ಅಂತಹವರು ಮಾಡುತ್ತಿದ್ದಾರೆ. ಇಂತಹ ಸ್ವಾಮೀಜಿಗಳು ಸಮಾಜಕ್ಕೆ ಅಗತ್ಯವಿದೆ’ ಎಂದರು.

‘₹10 ಕೋಟಿ ಮೊತ್ತದಲ್ಲಿ ಸಂಸತ್ ಭವನದ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಹೆಚ್ಚೆಂದರೆ ₹3 ಕೋಟಿವರೆಗೆ ಅನುದಾನ ಸಿಗಬಹುದು. ಅಚ್ಯುತಾನಂದ ಮತ್ತು ಶಾಸಕ ಸಾ.ರಾ.ಮಹೇಶ್ ತಲಾ ₹1 ಕೋಟಿ ಕೊಟ್ಟರೂ ಇನ್ನೂ ಹಣದ ಅಗತ್ಯ ಬೀಳುತ್ತದೆ. ಪರಿಶಿಷ್ಟ ಜಾತಿ ಸಮುದಾಯದಲ್ಲಿ ಬಡವರಿದ್ದಾರೆ. ಅವರಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ ಹಣ ವಸೂಲಿ ಮಾಡಬಾರದು. ಸಮುದಾಯ ಭವನ ಮುಗಿಯುವ ಹಂತ ಬರುವುದರೊಳಗೆ ನಾನು ಮತ್ತು ಶಾಸಕ ಸಾ.ರಾ.ಮಹೇಶ್ ಅಧಿಕಾರದಲ್ಲಿ ಇರುತ್ತೇವೆ. ಆಗ ರಾಜ್ಯದಲ್ಲೇ ಮಾದರಿ ಸಮುದಾಯ ಭವನವನ್ನಾಗಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಜೆಡಿಎಸ್‌ ಮುಖಂಡ ಅಚ್ಯುತಾನಂದ ಅವರು ನಾನು ಹೇಳಿದ ಹಾಗೆ ಕೇಳಿದರೆ ಅವರನ್ನು ಶಾಸಕರನ್ನಾಗಿಸುವೆ’ ಎಂದು ಹೇಳಿದರು.

ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕ ಸಾ.ರಾ.ಮಹೇಶ್, ಮುಖಂಡ ಅಚ್ಯುತಾನಂದ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನವನಗರ ಅರ್ಬನ್ ಕೋ– ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಸುಬ್ಬಯ್ಯ, ಪುರಸಭೆ ಸದಸ್ಯರಾದ ಸರೋಜಾ ಮಹದೇವ್, ಕೆ.ಪಿ.ಪ್ರಭುಶಂಕರ್, ಪರಿಶಿಷ್ಟ ಜಾತಿ, ವರ್ಗ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಹನಸೋಗೆ ನಾಗರಾಜು, ಮುಖಂಡರಾದ ಸಿದ್ದಪ್ಪ, ಹೇಮಾವತಿ ಅಶೋಕ್, ಹಂಗರಬಾಯನಹಳ್ಳಿ ಎಂ.ತಮ್ಮಣ್ಣ, ಗೊರಗುಂಡಿ ಶ್ರೀನಿವಾಸಪ್ರಸಾದ್, ಸುರೇಶ್, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ನರಸಿಂಹನಾಯಕ, ಹಂಪಾಪುರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.