ಹಳೇಬೀಡು: ಸಮಾಜ ಕಲ್ಯಾಣ ಇಲಾಖೆಯಿಂದ ಸಮೀಪದ ನರಸೀಪುರ ಬೋವಿ ಕಾಲೋನಿಯಲ್ಲಿ ₹3.64 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಟ್ಟಡದ ಕಾಮಗಾರಿಯನ್ನು ಶಾಸಕ ಎಚ್.ಕೆ.ಸುರೇಶ್ ಭಾನುವಾರ ಪರಿಶೀಲಿಸಿದರು.
ಕಟ್ಟಡದ ಕಾಮಗಾರಿ ಅಪೂರ್ಣವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಅಂತಿಮ ಹಂತದ ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟದ ಕೆಲಸ ಕೈಗೊಳ್ಳಬೇಕು. ಡೈನಿಂಗ್ ಹಾಲ್, ಓದುವ ಕೊಠಡಿ, ಅಡುಗೆ ಮನೆ, ಮಕ್ಕಳು ವಿಶ್ರಾಂತಿ ಪಡೆಯುವ ಕೊಠಡಿಗಳು ಸುಸಜ್ಜಿತವಾಗಿರಬೇಕು. ಬಡ ಮಕ್ಕಳಿಗಾಗಿ ಕೊಟ್ಟಿರುವ ಸೌಲಭ್ಯ ಸದುಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.
‘ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಟ್ಟಡ ನೂರಾರು ವರ್ಷ ಬಾಳಿಕೆ ಬರುವಂತಿರಬೇಕು’ ಎಂದರು.
‘ನರಸೀಪುರ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಉನ್ನತ ವ್ಯಾಸಂಗದಲ್ಲಿ ಯಶಸ್ವಿಯಾಗಬೇಕು. ಉನ್ನತ ಸ್ಥಾನಮಾನ ಅಲಂಕರಿಸಿ ದೇಶಕ್ಕೆ ಅಗತ್ಯವಿರುವ ಉತ್ತಮ ಪ್ರಜೆಗಳಾಗಬೇಕು’ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮಶಿವಮೂರ್ತಿ, ನಿಲಯ ಪಾಲಕ ನಾಗೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.