ADVERTISEMENT

ಮೈಸೂರು: ಹುಯಿಲಾಳು ಕೆರೆಗೆ ಕ್ರೀಡಾಂಗಣದ ಆಪತ್ತು!

ಅಚ್ಚುಕಟ್ಟಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಅಂಕಣ l ಪರಿಸರ ತಜ್ಞರ ವಿರೋಧ

ಮೋಹನ್‌ ಕುಮಾರ್‌ ಸಿ.
Published 28 ಮೇ 2025, 4:58 IST
Last Updated 28 ಮೇ 2025, 4:58 IST
ಮೈಸೂರಿನ ಕುಕ್ಕರಹಳ್ಳಿ ಕೆರೆಯ ನೀರಿನ ಮೂಲವಾದ ಪೂರ್ಣಯ್ಯ ನಾಲೆ ಆರಂಭವಾಗುವ ಹುಯಿಲಾಳು ಕೆರೆಯ ಸುಂದರ ನೋಟ –‍ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.
ಮೈಸೂರಿನ ಕುಕ್ಕರಹಳ್ಳಿ ಕೆರೆಯ ನೀರಿನ ಮೂಲವಾದ ಪೂರ್ಣಯ್ಯ ನಾಲೆ ಆರಂಭವಾಗುವ ಹುಯಿಲಾಳು ಕೆರೆಯ ಸುಂದರ ನೋಟ –‍ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.   
  • ಅಚ್ಚುಕಟ್ಟಿನಲ್ಲಿವೆ ಸುಂದರ ತೋಟಗಳು

  • ಪಾರ್ಕಿಂಗ್‌, ರಸ್ತೆ ನಿರ್ಮಾಣಕ್ಕೆ ಕೆರೆ ಭೂಮಿ?

  • ಹಸಿರು ವಲಯದಲ್ಲಿ ಯೋಜನೆಯಿಂದ ಒತ್ತಡ

    ADVERTISEMENT

ಮೈಸೂರು: ಹುಯಿಲಾಳು ಕೆರೆಯ ಅಚ್ಚುಕಟ್ಟಿನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಉದ್ದೇಶಿಸಿದ್ದು, ಅದಕ್ಕೆ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‌‌‌

ನಗರದ ಜಲನಿಧಿ ‘ಕುಕ್ಕರಹಳ್ಳಿ ಕೆರೆ’ಗೆ ನೀರು ಪೂರೈಸುವ ರಾಜಕಾಲುವೆ ‘ಪೂರ್ಣಯ್ಯ ನಾಲೆ’ ಆರಂಭವಾಗುವ ‘ದೊಡ್ಡರಾಯನ ಕಟ್ಟೆ’ ಎಂತಲೂ ಕರೆಯಲಾಗುವ ಹುಯಿಲಾಳು ಕೆರೆ ಏರಿಯ ಕೆಳಭಾಗದಲ್ಲಿನ ಸರ್ವೆ ನಂ. 312, 313ರಲ್ಲಿ 26.31 ಎಕರೆ ಭೂಮಿ ಕಾಯ್ದಿರಿಸಲಾಗಿದೆ.

‘ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್‌ ಪ್ಲಾನ್–2031ನಲ್ಲಿ ಸರ್ಕಾರಿ ಭೂಮಿಯನ್ನು ಹಸಿರು ವಲಯ ಎಂದೇ ಗುರುತಿಸಲಾಗಿದೆ. ಅಕ್ಕಪಕ್ಕದಲ್ಲಿ ತೋಟಗಳು ಇವೆ. ಉದ್ದೇಶಿತ ಕ್ರೀಡಾಂಗಣ ನಿರ್ಮಾಣದಿಂದ ಹಸಿರು ವಲಯ ಅಷ್ಟೇ ಅಲ್ಲ. ಭವಿಷ್ಯದಲ್ಲಿ ಕೆರೆಯನ್ನು ಇಲ್ಲವಾಗಿಸುವ ಹುನ್ನಾರ ಅಡಗಿದೆ’ ಎನ್ನುತ್ತಾರೆ ಮೈಸೂರು ಗ್ರಾಹಕ ‍ಪರಿಷತ್‌ನ ಭಾಮಿ ವಿ.ಶೆಣೈ.

‘ಕೆರೆಯು 36 ಎಕರೆಯಷ್ಟು ವಿಸ್ತೀರ್ಣವಾಗಿದ್ದು, ಹಸಿರು– ನೀಲಿ ವಲಯವನ್ನು ಉಳಿಸಿಕೊಳ್ಳಬೇಕು. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಕಡಕೊಳ ಕೈಗಾರಿಕಾ ‍ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಹೊಸ ಯೋಜನೆಗಳನ್ನು ತರಬಾರದು. ಮಾಸ್ಟರ್‌ ಪ್ಲಾನ್‌ನಲ್ಲಿನ ಹಸಿರು ವಲಯಗಳನ್ನು ಹಾಗೇ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಯಮ ಉಲ್ಲಂಘನೆಯಾಗುತ್ತದೆ’ ಎಂದರು. 

ಕೆರೆಯ ಬಫರ್ ವಲಯ ಕಾಪಾಡಬೇಕು: ‘ಕೆರೆಯ ಗರಿಷ್ಟ ನೀರಿನ ಮಟ್ಟದವರೆ‌ಗಿನ (ಎಚ್‌ಎಫ್‌ಎಲ್‌) ಜಾಗವೂ ಸೇರಿದಂತೆ ಬಫರ್ ವಲಯ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಕೆರೆಯ ಪರಿಸರಕ್ಕೆ ಧಕ್ಕೆ ಆಗುತ್ತದೆ. ಕೆಳಗಿನ ಭಾಗದಲ್ಲೂ ಅಭಿವೃದ್ಧಿ ಯೋಜನೆ ತರಬಾರದು’ ಎಂದು ಪರಿಸರ ತಜ್ಞ ಕೆ.ಮನು ‍ಪ್ರತಿಕ್ರಿಯಿಸಿದರು.

ಅವೈಜ್ಞಾನಿಕ ಯೋಜನೆ: ‘ಹುಯಿಲಾಳು ಕೆರೆಯ ನೀರು ರಾಜಕಾಲುವೆಯಲ್ಲಿ ಹರಿಯದೇ ತೋಟಗಳಿಗೆ ನುಗ್ಗುತ್ತಿದೆ. ಪ್ರತಿ ವರ್ಷ ಪ್ರವಾಹ ಕಾಡುತ್ತಿದೆ. ಕ್ರೀಡಾಂಗಣದ ಜಾಗವೂ ತೋಟಗಳ ಪಶ್ಚಿಮ ಭಾಗದಲ್ಲಿದ್ದು, ಇಲ್ಲಿ ಅಂಗಳ ನಿರ್ಮಿಸುವುದು ಅವೈಜ್ಞಾನಿಕ. ಕೆರೆಯ 50 ಮೀಟರ್‌ನ ಬಫರ್ ವಲಯದಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ’ ಎಂದು ಯು.ಎನ್‌.ರವಿಕುಮಾರ್ ಪ್ರತಿಕ್ರಿಯಿಸಿದರು.

‘ಬೆಂಗಳೂರಿನಂತೆಯೇ ಮೈಸೂರಿನಲ್ಲೂ ಕೆರೆಗಳನ್ನು ಇಲ್ಲವಾಗಿಸಿ ಅಭಿವೃದ್ಧಿ ಮಾಡಿದರೆ, ನಗರವು ಮಳೆಗಾಲದ ದುರಂತಕ್ಕೆ ಸಿದ್ಧವಾಗುತ್ತಿದೆ ಎಂದೇ ಅರ್ಥ’ ಎಂದು ಕಳವಳ ವ್ಯಕ್ತಪಡಿಸಿದರು.  

ಹುಯಿಲಾಳು ಕೆರೆ (ಗೂಗಲ್ ಚಿತ್ರ)

ತೋಟಗಳಿಗೂ ತೊಂದರೆ..

ಕೆರೆ ಕೆಳಭಾಗದಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ಸುಂದರ ಹಸಿರು ತೋಟಗಳ ಪರಿಸರಕ್ಕೂ ತೊಂದರೆ ಆಗುವ ಆತಂಕ ವ್ಯಕ್ತವಾಗಿದೆ. ಪಾರ್ಕಿಂಗ್ ರಸ್ತೆ ಮೊದಲಾದವುಗಳಿಗೆ ಈ ಹಸಿರು ವಲಯ ಬಲಿಯಾಗಲಿದೆ. ನಿವೃತ್ತ ಮೇಜರ್ ಜನರಲ್‌ ದಿವಂಗತ ಸಿ.ಕೆ.ಕರುಂಬಯ್ಯ ಲೇಖಕ ದೇವನೂರ ಮಹದೇವ ಪ್ರಗತಿಪರ ಕೃಷಿಕ ಟಿ.ಜಿ.ಎಸ್‌.ಅವಿನಾಶ್‌ ಅವರ ತೋಟಗಳು ಇಲ್ಲಿವೆ. ಈಗಾಗಲೇ ಹುಯಿಲಾಳು ಕೆರೆಯಿಂದ ಮಾದಗಳ್ಳಿ ಕೆರೆಗೆ ನೀರು ಹರಿಯುವ ಪೂರ್ಣಯ್ಯ ನಾಲೆಯನ್ನು ರಸ್ತೆಯಾಗಿಸಿದ್ದು ರಿಯಲ್ ಎಸ್ಟೇಟ್‌ನವರಿಂದಲೂ ಒತ್ತುವರಿ ಆಗಿದೆ. ಜಿಲ್ಲಾಡಳಿತ ತೆರವಿಗೆ ಮುಂದಾಗಿಲ್ಲ.

‘ತಪ್ಪಿಲ್ಲ ಪ್ರವಾಹ’

‘2022ರ ಆಗಸ್ಟ್ ಹಾಗೂ ನವೆಂಬರ್‌ನಲ್ಲಿ ಮೂರ್ನಾಲ್ಕು ದಿನ ನಾವು ತೋಟದ ಮನೆಯಿಂದೀಚೆಗೆ ಬರಲೂ ಆಗಿರಲಿಲ್ಲ. ಪೂರ್ಣಯ್ಯ ನಾಲೆಯ ಏರಿಯನ್ನು ಒಡೆದು ನಾಶ ಮಾಡಲಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆಗಳಲ್ಲಿ ನಾಲೆಯ ನೀರು ಮಾದಗಳ್ಳಿ ಕೆರೆಗೆ ಹೋಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ದೇಚೂ ಕರುಂಬಯ್ಯ ಹೇಳಿದರು. ‘ಆಗಿನ ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ತಡೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಲವು ಭಾಗವಷ್ಟೇ ಕೆಲಸ ಮುಗಿಸಿ ಅಧಿಕಾರಿಗಳು ಮರಳಿದರು. ಆದರೆ ನಾಲೆಯ ಒತ್ತುವರಿ ತೆರವನ್ನು ಸಂಪೂರ್ಣಗೊಳಿಸಿಲ್ಲ. ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.