ADVERTISEMENT

ಇಬ್ಬರು ಕಳ್ಳರ ಬಂಧನ; 12 ಬೈಕ್ ವಶ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 10:15 IST
Last Updated 12 ಸೆಪ್ಟೆಂಬರ್ 2019, 10:15 IST

ಮೈಸೂರು: ವಿಜಯನಗರ ಠಾಣೆ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ₹ 21.45 ಲಕ್ಷ ಮೌಲ್ಯದ 12 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಹಿನಕಲ್ ನಿವಾಸಿ ಎ.ಸ್ಟ್ಯಾನ್ಲಿ ಹಾಗೂ ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ನಿವಾಸಿ ಕೆ.ಕೆ.ಧನುಷ್ ಎಂಬವರೇ ಬಂಧಿತ ಆರೋಪಿಗಳು.

ಇವರು 2 ದಿನಗಳ ಹಿಂದೆ ಹೂಟಗಳ್ಳಿಯ ಸಿಗ್ನಲ್ ಲೈಟ್ ಬಳಿ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಗೊತ್ತಾಗಿವೆ. ಐಷಾರಾಮಿ ಜೀವನಕ್ಕಾಗಿ ಇವರು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇನ್‌ಸ್ಪೆಕ್ಟರ್ ಎಸ್.ಡಿ.ಸುರೇಶ್‍ಕುಮಾರ್, ಸಿಬ್ಬಂದಿಯಾದ ಟಿ.ಜಯಪ್ಪ, ಶಂಕರ್, ಈಶ್ವರ್, ಎಂ.ಅಶ್ವಥ್ಥಕುಮಾರ್, ಮುರಳೀಧರ್, ಮಹದೇವ, ತಿಲಕ್‍ಕುಮಾರ್, ಉಮೇಶ್, ಶ್ರೀನಿವಾಸ್ ಕಾರ್ಯಾಚರಣೆ ತಂಡದಲ್ಲಿದ್ದರು.

ನೀರಿಗೆ ಬಿದ್ದ ಯುವಕ, ಯುವತಿ ನಾಪತ್ತೆ

ಮೈಸೂರು: ಇಲ್ಲಿನ ಸಾಗರಕಟ್ಟೆಯ ಸೇತುವೆ ಬಳಿ ಯುವಕ ಮತ್ತು ಯುವತಿ ಇಬ್ಬರೂ ನೀರಿಗೆ ಬಿದ್ದಿದ್ದು, ನಾಪತ್ತೆಯಾಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆದಿದೆ.

ವಿಜಯನಗರದ ನಿವಾಸಿ ಶಿವಕುಮಾರ್ (24) ಮತ್ತು ಹೂಟಗಳ್ಳಿಯ ರಂಜಿತಾ (21) ನೀರಿಗೆ ಬಿದ್ದವರು ಎಂದು ಗುರುತಿಸಲಾಗಿದೆ.

ಶಿವಕುಮಾರ್ ಕಾರಿನಲ್ಲಿ ಬಂದರೆ, ರಂಜಿತಾ ಸ್ಕೂಟರ್‌ನಲ್ಲಿ ಬಂದಿದ್ದಾರೆ. ಮಾತನಾಡುತ್ತ ಕುಳಿತಿದ್ದ ಇಬ್ಬರೂ ಏಕಾಏಕಿ ಜಗಳ ಆರಂಭಿಸಿದ್ದಾರೆ. ನಂತರ, ಮೊದಲು ರಂಜಿತಾ ನೀರಿಗೆ ಹಾರಿದ್ದಾರೆ. ಬಳಿಕ ಶಿವಕುಮಾರ್ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಇವರ ಪತ್ತೆಗೆ ಶೋಧ ಕಾರ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.