ಹುಣಸೂರು: ನಾಗರಹೊಳೆ ಅರಣ್ಯದಿಂದ ಹೊರ ಬಂದಿದ್ದ ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಮಂಗಳವಾರ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಜಂಟಿಯಾಗಿ ಆರಂಭಿಸಿದರು.
ಮತ್ತಿಗೋಡು ಆನೆ ಶಿಬಿರದಿಂದ ಭೀಮಾ ಮತ್ತು ಅಭಿ ಹುಲಿ ಕೂಂಬಿಂಗ್ ಆಪರೇಷನ್‌ನಲ್ಲಿ ಭಾಗವಹಿಸಿದ್ದು, ಇವರೊಂದಿಗೆ ಎಲಿಫೆಂಟ್ ಟಾಸ್ಕ್ ಫೋರ್ಸ್ ಘಟಕದ ಸಿಬ್ಬಂದಿ ಮತ್ತು ಪ್ರಾದೇಶಿಕ ಅರಣ್ಯ ಸಿಬ್ಬಂದಿ ಸೇರಿದಂತೆ ಆನೆ ಮಾವುತ, ಕಾವಾಡಿಗಳು 5 ಜನರು ಒಳಗೊಂಡಂತೆ 25 ಜನರ ತಂಡ ಹೈರಿಗೆ ಗ್ರಾಮದ ತಮ್ಮೇಗೌಡರ ಹೊಲದಿಂದ ಹುಲಿ ಬಂದ ಜಾಡು ಹಿಡಿದು ಹುಡುಕಾಟ ಆರಂಭಿಸಿದರು.
ಕಾರ್ಯಾಚರಣೆಯನ್ನು ಡಿಸಿಎಫ್ ಮೊಹಮ್ಮದ್ ಫಯಾಜ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಂದಕುಮಾರ್ ನೇತೃತ್ವದಲ್ಲಿ ನಡೆದಿದ್ದು, ಸಂಜೆ ಹೊತ್ತು ಮುಳುಗುವವರೆಗೂ ಹುಲಿ ಹೆಜ್ಜೆ ಇರುವ ಸ್ಥಳಗಳತ್ತ ಸಿಬ್ಬಂದಿ ತೆರಳಿದರು.
ಹೆಜ್ಜೆ ಗುರುತು: ಸೋಮವಾರ ಹೊಲಗಳಲ್ಲಿ ಓಡಾಡಿದ ಹುಲಿ ಹೆಜ್ಜೆ ಗುರುತು ಆಧರಿಸಿ ಇಲಾಖೆ ಕಾರ್ಯಾಚರಣೆ ನಡೆಸಿತಾದರೂ ಎಲ್ಲಿಯೂ ಇರುವ ಸುಳಿವು ಸಿಕ್ಕಿಲ್ಲ ಎಂದು ವಲಯ ಅರಣ್ಯಾಧಿಕಾರಿ ನಂದಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುತ್ತುರಾಯನಹೊಸಹಳ್ಳಿ ಅರಣ್ಯ ಪ್ರವೇಶಿದ ಸುತ್ತಮುತ್ತಲು ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಿ ಪ್ರಾದೇಶಿಕ ಇಲಾಖೆ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಹುಡುಕಿ ನಾಗರಹೊಳೆ ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆಸಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಲಿದ್ದೇವೆ’ ಎಂದು ತಿಳಿಸಿದರು.
ಸ್ಥಳೀಯ ಜಮೀನಿನ ಮಾಲಿಕ ರಾಜು ‘ಪ್ರಜಾವಾಣಿ’ಗೆ ಮಾತನಾಡಿ, ‘ಪ್ರಥಮ ಬಾರಿಗೆ ಈ ಭಾಗದಲ್ಲಿ ಹುಲಿ ನೋಡುತ್ತಿದ್ದೇವೆ. ಅರಣ್ಯದಂಚಿನ ಗ್ರಾಮಗಳಲ್ಲಿ ನಿರಂತರ ಪ್ರಾಣಿಗಳ ಹಾವಳಿ ಇರುವುದು ತಿಳಿದಿದೆ. ಹೈರಿಗೆ ಕೆರೆ ಭಾಗಕ್ಕೂ ಮುತ್ತುರಾಯನಹೊಸಹಳ್ಳಿ ಅರಣ್ಯ ಪ್ರದೇಶಕ್ಕೂ ಭಾರಿ ದೂರವಿದ್ದು, ಈ ಭಾಗಕ್ಕೆ ಹುಲಿ ಬಂದಿರುವುದು ಆಶ್ಚರ್ಯವಾಗಿದೆ. ಹೊಲದಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ನಮಗೆ ಈಗ ಜೀವ ಭಯ ಆರಂಭವಾಗಿದೆ. ಮುಸುಕಿನಜೋಳ ಮತ್ತು ಹೊಗೆಸೊಪ್ಪು ಬೆಳೆಯಲು ಸಿದ್ದತೆ ಮಾಡುತ್ತಿದ್ದು, ಹೊಗೆ ಸಸಿಗಳಿಗೆ ನೀರು ಹಾಕಲು ಮಹಿಳೆಯರು ಬಂದು ಹೋಗುತ್ತಾರೆ. ಹುಲಿ ಬಂದಿರುವ ಸುದ್ದಿ ಹರಡಿ ಹೊಲಕ್ಕೆ ಕೃಷಿ ಕಾರ್ಮಿಕರು ಬರುವುದು ಹಿಂದೇಟು ಹಾಕುವ ಆತಂಕ ಎದುರಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.