ADVERTISEMENT

‘ತಿಲ್ಲಾನ’ ವೈವಿಧ್ಯ ಅನಾವರಣ

27ನೇ ಜೆಎಸ್‌ಎಸ್‌ ಸಂಗೀತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 14:16 IST
Last Updated 5 ಡಿಸೆಂಬರ್ 2022, 14:16 IST
ಮೈಸೂರಿನಲ್ಲಿ ನಡೆಯುತ್ತಿರುವ 27ನೇ ಜೆಎಸ್‌ಎಸ್‌ ಸಂಗೀತ ಸಮ್ಮೇಳನದಲ್ಲಿ ಸೋಮವಾರ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್‌ ಅವರ ಶಿಷ್ಯ ವೃಂದ ಪ್ರಸ್ತುತಪಡಿಸಿದ ಕೊಳಲು ವಾದನದ ಮೋಡಿ –ಪ್ರಜಾವಾಣಿ ಚಿತ್ರ  
ಮೈಸೂರಿನಲ್ಲಿ ನಡೆಯುತ್ತಿರುವ 27ನೇ ಜೆಎಸ್‌ಎಸ್‌ ಸಂಗೀತ ಸಮ್ಮೇಳನದಲ್ಲಿ ಸೋಮವಾರ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್‌ ಅವರ ಶಿಷ್ಯ ವೃಂದ ಪ್ರಸ್ತುತಪಡಿಸಿದ ಕೊಳಲು ವಾದನದ ಮೋಡಿ –ಪ್ರಜಾವಾಣಿ ಚಿತ್ರ     

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತದ ವಾಗ್ಗೇಯಕಾರರು ಸೃಷ್ಟಿಸಿದ ‘ತಿಲ್ಲಾನ’ವನ್ನು ವಿದ್ವಾನ್‌ ಎನ್.ಆರ್‌.ಪ್ರಶಾಂತ್‌ ಹೇಳುತ್ತಿದ್ದರೆ, ಸಂಗೀತಪ್ರಿಯರು ತಲೆದೂಗುತ್ತ, ನಾದ–ಲಯಗಳಿಗೆ ತಾಳ ಹಾಕಿ ಚಪ್ಪರಿಸಿದರು.

ಸರಸ್ವತಿಪುರಂನ ನವಜ್ಯೋತಿ ಸಭಾಂಗಣದಲ್ಲಿ ನಡೆಯುತ್ತಿರುವ ಜೆಎಸ್‌ಎಸ್‌ ಸಂಗೀತ ಸಮ್ಮೇಳನದಲ್ಲಿನ ಸೋಮವಾರದ ವಿದ್ವತ್‌ ಗೋಷ್ಠಿಯು ಎಲ್ಲರ ಮನಸೂರೆಗೊಂಡಿತು. ಸ್ವಿಡ್ಜರ್ಲೆಂಡ್‌ನ ಪಿಯೊನೊ ವಾದ್ಯಕಾರ ಗಿಲ್ಸ್ ಗ್ರಿಮೈತ್ರೆ ಅವರು ನಿರೂಪಿಸಿದ ಶಾಸ್ತ್ರೀಯ– ಪಾಶ್ಚಾತ್ಯ ಸಂಗೀತದ ಸಮಾನ ಅಂಶಗಳು ಎಲ್ಲರನ್ನೂ ಅಚ್ಚರಿಗೊಳಿಸಿತು.

ವಿದ್ವಾನ್‌ ಎನ್.ಆರ್‌.ಪ್ರಶಾಂತ್‌ ಮಾತನಾಡಿ, ‘ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತಿಲ್ಲಾನಕ್ಕೆ ಮಹತ್ವದ ಸ್ಥಾನವಿದೆ. ಅದಿಲ್ಲದೇಭರತನಾಟ್ಯ ಹಾಗೂ ಗಾಯನ ಕಛೇರಿಯು ಸಮಾಪ್ತಿಯಾಗದು. ಸಂಗೀತಗಾರನ ಪ್ರತಿಭೆಯನ್ನು ಅದರಲ್ಲೇ ತಿಳಿಯಬಹುದು’ ಎಂದರು.

ADVERTISEMENT

‘ಹಿಂದೂಸ್ತಾನಿ ಸಂಗೀತದಲ್ಲಿ ‘ತರನಾ’ವೆಂದು ಕರೆಯುವ ತಿಲ್ಲಾನ, ಖಯಾಲ್‌ನ ಮುಂದುವರಿದ ಭಾಗ. ಪಲ್ಲವಿ, ಅನುಪಲ್ಲವಿ, ಚರಣ ಹಾಗೂ ಸಾಹಿತ್ಯ ಚರಣ ಹಂತವನ್ನು ಹೊಂದಿರುತ್ತದೆ. ಸ್ವರ– ಜತಿ ಇಲ್ಲದೇ ತಿಲ್ಲಾನವನ್ನು ಊಹಿಸಲಾಗದು. ಗಾಯಕನಿಗೆ, ಸಂಗೀತ ಕಲಾವಿದನಿಗೆ ಧ್ವನಿ ಸಂಸ್ಕಾರವನ್ನು ನೀಡುತ್ತದೆ’ ಎಂದು ಅಭಿ‍ಪ್ರಾಯಪಟ್ಟರು.

‘ಕರ್ನಾಟಕ ಸಂಗೀತದ ಮೊದಲ ತಿಲ್ಲಾನವನ್ನು ಪುರಂದರ ದಾಸರ ‘ಆಡಿದನೋ ರಂಗ’ ಕೃತಿಯಲ್ಲಿ ಕಾಣಬಹುದು. ಭರತನಾಟ್ಯದಲ್ಲಿ ಅಭಿನಯಕ್ಕೆ ವಿಸ್ತಾರವನ್ನು ನೀಡುವ ತಿಲ್ಲಾನ,ಹರಿ ಕಥೆ, ಕಥಾ ಕಲಾಕ್ಷೇಪದಲ್ಲೂ ಬಳಕೆಯಾಗುತ್ತದೆ. ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌, ವೀಣೆ ಶೇಷಣ್ಣ, ಸ್ವಾತಿ ತಿರುನಾಳ್‌, ಮುತ್ತುಸ್ವಾಮಿ ದೀಕ್ಷಿತರ್, ಲಾಲ್ಗುಡಿ ಜಯರಾಮನ್‌, ವಾಸುದೇವಾಚಾರ್ಯ ಅವರ ಸಂಯೋಜನೆಗಳು ಜನಪ್ರಿಯತೆ ಪಡೆದಿವೆ’ ಎಂದರು.

ಗೋಷ್ಠಿಯ ಸಮನ್ವಯಕಾರ ಪ್ರೊ.ಜಿ.ಎಸ್‌.ರಾಮಾನುಜಂ ಮಾತನಾಡಿ, ‘ಸಂಗೀತ ಕಛೇರಿಯಲ್ಲಿ ಲಯ ವಾದ್ಯ ನುಡಿಸುವವರಿಗೆ ತಿಲ್ಲಾನವೇ ಸವಾಲು. ಗಾಯಕರ ಪ್ರತಿಭೆಗೆ ಮೆಟ್ಟಿಲನ್ನು ನಿರ್ಮಿಸಿಕೊಡುವುದಷ್ಟೇ ಸಹೃದಯರಿಗೆ ರುಚಿಸುವಂತೆವಾದ್ಯಕಾರರು ನುಡಿಸಬೇಕಾಗುತ್ತದೆ’ ಎಂದರು.

ಸ್ವಿಡ್ಜರ್ಲೆಂಡ್‌ನ ಪಿಯೊನೊ ವಾದ್ಯಕಾರ ಗಿಲ್ಸ್ ಗ್ರಿಮೈತ್ರೆ ಮಾತನಾಡಿ, ‘ಶಾಸ್ತ್ರೀಯ ಸಂಗೀತವ ಹಾಗೂಕುನ್ನಕೋಲ್‌ ಅನ್ನು ಕಳೆದ 6 ವರ್ಷಗಳಿಂದ ಕಲಿಯುತ್ತಿದ್ದೇನೆ. ಪಾಶ್ಚಾತ್ಯ ಹಾಗೂ ಕರ್ನಾಟಕ ಸಂಗೀತದಲ್ಲಿ ಹಲವು ಸಮಾನ ಅಂಶಗಳಿದ್ದು, ವೈಜ್ಞಾನಿಕವಾಗಿವೆ’ ಎಂದರು.

ವಿದ್ವಾನ್‌ ಎ.‍ಪಿ.ಕೃಷ್ಣಪ್ರಸಾದ್‌ ಶಿಷ್ಯರ ಕೊಳಲು ವಾದನ, ಶರತ್‌ ಆರ್‌. ರಾವ್‌ ಹಾಗೂ ರಾಮಕೃಷ್ಣನ್‌ ಮೂರ್ತಿ ಅವರ ಗಾಯನವು ಮೋಡಿ ಮಾಡಿತು.

ಸಮ್ಮೇಳನ ಅಧ್ಯಕ್ಷ ವಿದ್ವಾನ್ ವಿ.ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.