ಹುಣಸೂರು: ವಾರದಿಂದ ಸುರಿಯುತ್ತಿರುವ ಮಳೆಗೆ ವಾಣಿಜ್ಯ ಬೆಳೆ ತಂಬಾಕಿಗೆ ಹಾನಿಯಾಗಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ.
ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶದಲ್ಲಿ ನಾಟಿ ಮಾಡಿದ ಸಸಿ ನೀರಿನಲ್ಲಿ ಕೊಳೆಯುತ್ತಿದ್ದರೆ, ಕಟಾವಿಗೆ ಬಂದ ತಂಬಾಕು ಎಲೆ ಹಳದಿ ಬಣ್ಣಕೆ ತಿರುಗಿದೆ.
ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ 54.2 ಸೆಂ.ಮಿ ಮಳೆಯಾಗಿದ್ದು, ಹನಗೋಡು ಮತ್ತು ಗಾವಡಗೆರೆ ಹೋಬಳಿಯ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ತಂಬಾಕು ಅಂದಾಜು 1000– 1150 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ.
‘ಹನಗೊಡು ಹೋಬಳಿ ಕೊಳವಿಗೆ ನೇಗತ್ತೂರು, ನೇರಳಕುಪ್ಪೆ, ಹೆಜ್ಜೂರು ಸೇರಿದಂತೆ ನಾಗರಹೊಳೆ ಅರಣ್ಯದಂಚಿನ ಪ್ರದೇಶದಲ್ಲಿ ಮಳೆ ಅತಿಯಾಗಿದ್ದು, ಮಾರ್ಚ್ ತಿಂಗಳಲ್ಲಿ ಪಂಪ್ ನೀರು ಬಳಸಿ ತಂಬಾಕು ನಾಟಿ ಮಾಡಲಾಗಿತ್ತು. ಮೇ ಅಂತ್ಯದಲ್ಲಿ ಎಲೆ ಕಟಾವು ಮಾಡಬೇಕಿತ್ತು. ಅಷ್ಟರಲ್ಲಿ ಮುಂಗಾರು ಮಳೆ ಆರಂಭವಾಗಿ 5 ಎಕರೆ ಪ್ರದೇಶದಲ್ಲಿ ಬೆಳೆದು ಕೈಗೆ ಬಂದ ಫಸಲು ನಾಶವಾಗಿದೆ’ ಎಂದು ಕೊಳವಿ ಗ್ರಾಮದ ಬೆಳೆಗಾರ ನಾಗೇಶ್ ಅಳಲು ತೋಡಿಕೊಂಡರು.
‘ಎಕರೆಗೆ ₹1 ಲಕ್ಷದಂತೆ ವೆಚ್ಚ ಮಾಡಿ ತಂಬಾಕು ಬೆಳೆದಿದ್ದೆ, ಈ ಸಾಲಿನಲ್ಲಿ ಮುಂಗಾರು ಬೇಗ ಆರಂಭವಾಗಿ ನಷ್ಟವಾಗಿದೆ. ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಬೆಳೆ ವಿಮಾ ಯೋಜನೆ ಇಲ್ಲದೆ ಅತಂತ್ರ ಸ್ಥಿತಿ ಎದುರಾಗಿದೆ’ ಎಂದರು.
‘ಗಾವಡಗೆರೆ ಹೋಬಳಿ ಶಿರೇನಹಳ್ಳಿ ಭಾಗದಲ್ಲಿ ರೈತರ ಸಮಸ್ಯೆ ಹೇಳತೀರದು. 3 ಎಕರೆ ಪ್ರದೇಶದಲ್ಲಿ ಬೆಳೆದ ತಂಬಾಕು ಹಾನಿಯಾಗಿದ್ದು, ಈ ನಷ್ಟ ಭರಿಸುವುದಾದರೂ ಹೇಗೆ ? ಬ್ಯಾಂಕ್ ನಿಂದ ಒಮ್ಮೆ ಸಾಲ ನೀಡಿದವರಿಗೆ ಮತ್ತೊಮ್ಮೆ ಸಾಲ ನೀಡುವುದಿಲ್ಲ. ಖಾಸಗಿ ಲೇವಾದೇವಿ ಬಳಿ ಹಣಕ್ಕೆ ಕೈ ಚಾಚಬೇಕಾಗಿದೆ’ ಎನ್ನುವರು ಶಿರೇನಹಳ್ಳಿ ಗ್ರಾಮದ ರೈತ ಮಹೇಶ್.
ವಿಜ್ಞಾನಿಗಳ ಸಲಹೆ: ‘ಮುಂಗಾರು ಮಳೆ ನಿರೀಕ್ಷೆಗೂ ಮೀರಿದಷ್ಟು ಬಂದ ಕಾರಣ ತಾಲ್ಲೂಕಿನಲ್ಲಿ ತಗ್ಗು ಪ್ರದೇಶದಲ್ಲಿ ಬೆಳೆದ ತಂಬಾಕು, ಶೀತದಿಂದ ಸಸಿ ಉಸಿರಾಟಕ್ಕೆ ತೊಂದರೆ ಆಗಿ ಬೇರು ಕೊಳೆಯುವ ಸಾಧ್ಯೆತೆ ಹೆಚ್ಚು. ರೈತರು ಆತಂಕ ಪಡದೆ ಸಿ.ಟಿ.ಆರ್.ಐ. ಕೇಂದ್ರ ವಿಜ್ಞಾನಿಗಳು ನೀಡುವ ಸಲಹೆ ತಪ್ಪದೆ ಪಾಲಿಸಬೇಕು’ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್ ಹೇಳುವರು.
ಕ್ರಮ ವಹಿಸುವ ಬಗೆ: ನಿಂತ ನೀರು ಬಸಿಯಲು ಕ್ರಮ ವಹಿಸಬೇಕು. ಬಸಿಯುವಿಕೆ ಕ್ರಮದಿಂದ ಬೆಳೆಗೆ ನೀಡಿದ್ದ ರಸಗೊಬ್ಬರ ಹರಿದು ಹೋಗುವುದರಿಂದ ಮೇಲು ಗೊಬ್ಬರವಾಗಿ ಇಫ್ಕೊ ಕಂಪನಿಯ ನ್ಯಾನೊ ಡಿಎಪಿ ಗೊಬ್ಬರ ಪ್ರತಿ 15 ಲೀ ನೀರಿಗೆ 45 ಮಿ. ಮಿಶ್ರಣ ಮಾಡಿ ಸಿಂಪಡಿಸಬೇಕು.
ಯೂರಿಯಾ ಗೊಬ್ಬರ ಬಳಸದಿರಿ’
‘ಯೂರಿಯಾ ಗೊಬ್ಬರ ನೀಡದಂತೆ ಎಚ್ಚರ ವಹಿಸಬೇಕು. ಕಳೆದ ಸಾಲಿನಲ್ಲಿ ಮಳೆ ಹೆಚ್ಚಾಗಿ ಬಂದ ಕಾರಣಕ್ಕೆ ರೈತರು ಹಳದಿ ಬಣ್ಣಕ್ಕೆ ಬಂದ ತಂಬಾಕಿಗೆ ಯೂರಿಯಾ ನೀಡಲಾಗಿ ಆ ಸಮಯಕ್ಕೆ ಹಸಿರು ಕಾಣಿಸಿಕೊಂಡರು ನಂತರದಲ್ಲಿ ಸೊಪ್ಪು ಹದಗೊಳಿಸುವ ಹಂತದಲ್ಲಿ ಕಪ್ಪು ಅಥವಾ ತರಗು ಪ್ರಮಾಣ ಹೆಚ್ಚಾಗಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಯೂರಿಯಾ ಬಳಸಬಾರದು’ ಎಂದು ಸಿಟಿಆರ್‌ಐ ಹಿರಿಯ ವಿಜ್ಞಾನಿ ರಾಮಕೃಷ್ಣನ್ ಹೇಳಿದರು. ಯೂರಿಯಾ ಗೊಬ್ಬರದ ಬದಲಿಗೆ ಪೊಟ್ಯಾಶಿಯಂ ನೈಟ್ರೇಟ್ (13–0–45) ಗೊಬ್ಬರ 150 ರಿಂದ 200 ಗ್ರಾಂ ಪ್ರತಿ 15 ಲೀ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಸಸಿ ಚೇತರಿಕೆ ಕಂಡು ಹದಗೊಳಿಸುವ ಹಂತದಲ್ಲಿ ತಂಬಾಕು ಎಲೆ ಕಪ್ಪು (ತರಗು) ಬಣ್ಣಕ್ಕೆ ಬರುವುದಿಲ್ಲ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.