ADVERTISEMENT

ತಂಬಾಕು ಉತ್ಪನ್ನ ಬಳಕೆಗಿಲ್ಲ ಕಡಿವಾಣ!

ತಂಬಾಕುರಹಿತ ದಿನ ಇಂದು; ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ‘ದಂಡಾಸ್ತ್ರ

ಎಂ.ಮಹೇಶ್
Published 31 ಮೇ 2025, 6:36 IST
Last Updated 31 ಮೇ 2025, 6:36 IST
ಮೈಸೂರಿನಲ್ಲಿ ಈಚೆಗೆ ದಾಳಿ ನಡೆಸಿದ ಅಧಿಕಾರಿಗಳು ಮತ್ತು ತಂಡ
ಮೈಸೂರಿನಲ್ಲಿ ಈಚೆಗೆ ದಾಳಿ ನಡೆಸಿದ ಅಧಿಕಾರಿಗಳು ಮತ್ತು ತಂಡ   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿ ನಡೆಸಿ ದಂಡ ವಿಧಿಸುವುದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹಾಗೂ ಎಚ್ಚರಿಕೆ ನೀಡುತ್ತಿರುವ ನಡುವೆಯೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವುದು ಕಡಿಮೆಯಾಗಿಲ್ಲ.

ಶಾಲಾ–ಕಾಲೇಜುಗಳ ಬಳಿಯೂ ಬೀಡಿ, ಸಿಗರೇಟು, ಗುಟ್ಕಾ ಮೊದಲಾದ ತಂಬಾಕು ಉತ್ಪನ್ನಗಳನ್ನು ಮಾರುವುದು ಕಂಡುಬರುತ್ತಿರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ.

ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆ–2003ರ ಸೆಕ್ಷನ್‌ 6ಬಿ ಪ್ರಕಾರ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ 100 ಗಜದ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟವಾಗದಂತೆ ಕ್ರಮ ವಹಿಸಬೇಕು. ನಾಮಫಲಕಗಳನ್ನು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಗಳ ಮುಖ್ಯದ್ವಾರದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಸಂಸ್ಥೆಗಳೆಂದು ಘೋಷಿಸಲು ಕ್ರಮ ವಹಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳನ್ನೂ ತಂಬಾಕು ಮುಕ್ತ ಕಚೇರಿ ಮಾಡಬೇಕು ಎಂಬ ಸರ್ಕಾರದ ಆದೇಶವು ಹಲವು ಕಡೆಗಳಲ್ಲಿ ಅನಷ್ಠಾನಕ್ಕೆ ಬಂದಿಲ್ಲ.

ADVERTISEMENT

ಕಾಯ್ದೆಯ ಪರಿಣಾಮಕಾರಿ ಅನುಷ್ಠಾನವು ಕಾಗದಕ್ಕಷ್ಟೇ ಸೀಮಿತವಾಗಿದೆ. ಕಾಯ್ದೆಯನ್ನು ಉಲ್ಲಂಘಿಸುವ ಬೆಳವಣಿಗೆಗಳು ಅಲ್ಲಲ್ಲಿ ನಿತ್ಯವೂ ಕಂಡುಬರುತ್ತಿದೆ.

ಎಚ್ಚರಿಕೆ ನಡುವೆಯೂ: ಅಧಿಕಾರಿಗಳು ಆಗಾಗ ದಾಳಿ ನಡೆಸಿ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ, ಮತ್ತದೇ ಸ್ಥಿತಿ ನಿರ್ಮಾಣವಾಗುತ್ತಿದೆ. ಕೋಟ್ಪಾ ಸೆಕ್ಷನ್–4ರ ಪ್ರಕಾರ, ಸಾರ್ವಜನಿಕ ಪ್ರದೇಶದಲ್ಲಿ ನಿಷೇಧಿಸಲಾಗಿದೆ. ಆದರೆ, ಇದು ಪಾಲನೆಯಾಗುತ್ತಿಲ್ಲ. ನಿಲ್ದಾಣಗಳು ಮೊದಲಾದ ಸಾರ್ವಜನಿಕ ಸ್ಥಳಗಳಲ್ಲೂ ತಂಬಾಕಿನ ಉತ್ಪನ್ನಗಳ ‘ಹೊಗೆ’ಯು ಧೂಮಪಾನ ಮಾಡದವರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತಿದೆ; ಕಿರಿಕಿರಿಯನ್ನೂ ಉಂಟು ಮಾಡುತ್ತಿದೆ.

ಕೋಟ್ಪಾ ಸೆಕ್ಷನ್–6ಎ ಪ್ರಕಾರ, 18 ವರ್ಷ ಒಳಗಿನವರಿಗೆ (ಮಕ್ಕಳಿಗೆ) ತಂಬಾಕುಯುಕ್ತ ಪದಾರ್ಥಗಳ ಮಾರಾಟ ನಿಷೇಧಿಸಲಾಗಿದೆ. ಇದು ಕೂಡ ಜಾರಿಯಾಗುತ್ತಿಲ್ಲ. ಶಿಕ್ಷಣ ಸಂಸ್ಥೆಗಳ ಬಳಿಯಲ್ಲೇ ತಂಬಾಕು ಉತ್ಪನ್ನಗಳನ್ನು ರಾಜಾರೋಷವಾಗಿ ಮಾರುತ್ತಿರುವುದು ಸಾಮಾನ್ಯವಾಗಿದೆ ಎನ್ನುವ ಆರೋಪಗಳು ವ್ಯಾಪಕವಾಗಿವೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕೋಟ್ಪಾ ಕಾಯ್ದೆಯಡಿ ಆಗಾಗ ದಾಳಿ ನಡೆಸಲಾಗುತ್ತಿದೆ. ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ 2021–22ರಲ್ಲಿ ₹2.62 ಲಕ್ಷ, 2022–23ರಲ್ಲಿ ₹ 2,05,220, 2023–24ರಲ್ಲಿ ₹5,58,140, 2024–25ರಲ್ಲಿ ₹ 3,92,220 ದಂಡ ವಿಧಿಸಲಾಗಿದೆ. ಅಂದರೆ, 4 ವರ್ಷಗಳಲ್ಲಿ ಒಟ್ಟು 12,569 ಪ್ರಕರಣಗಳನ್ನು ದಾಖಲಿಸಿ ‘ದಂಡಾಸ್ತ್ರ’ ಪ್ರಯೋಗಿಸುತ್ತಿದ್ದರೂ ಕಾಯ್ದೆಯನ್ನು ಉಲ್ಲಂಘಿಸುತ್ತಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಈ ಬೆಳವಣಿಗೆಯು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ದೊಡ್ಡ ಸವಾಲನ್ನು ಎಸೆಯುತ್ತಿದೆ.  

.

‘ಸ್ಟಾಪ್‌ ಟೊಬ್ಯಾಕೊ

’ ಮೊಬೈಲ್‌ ಆ್ಯಪ್‌ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಲು ಹಾಗೂ ಕೋಟ್ಪಾ ಕಾಯ್ದೆ ಉಲ್ಲಂಘನೆ ಕಂಡುಬಂದಿಲ್ಲ ದೂರು ಸಲ್ಲಿಸಲು ಆರೋಗ್ಯ ಇಲಾಖೆಯು ‘ಸ್ಟಾಪ್‌ ಟೊಬ್ಯಾಕೊ ಆ್ಯಪ್‌’ ಅಭಿವೃದ್ಧಿಪಡಿಸಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ದೂರು ಸಲ್ಲಿಸಬಹುದು. ಸಾರ್ವಜನಿಕರು ಇದನ್ನು ಬಳಸಿ ದೂರು ನೀಡುತ್ತಿದ್ದಾರೆ. ಅದನ್ನು ನಾವು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಶಿವಕುಮಾರ್ ತಿಳಿಸಿದರು. ಕೋಟ್ಪಾ ಕಾಯ್ದೆ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಫೋಟೊ ತೆಗೆದು ಆ್ಯಪ್‌ ಮೂಲಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ. ಈ ಮೂಲಕ ದಾಖಲಾಗುವ ದೂರುಗಳನ್ನು ಇಲಾಖೆಯು ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ಕಳುಹಿಸುತ್ತದೆ. ಜಿಲ್ಲಾ ಹಾಗೂ ತಾಲ್ಲೂಕು ತನಿಖಾ ತಂಡಗಳು ಕಾನೂನು ಕ್ರಮ ತೆಗೆದುಕೊಂಡು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುತ್ತವೆ. ‘ಕೋಟ್ಪಾ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ’ ಎಂದು ಶಿವಕುಮಾರ್ ತಿಳಿಸಿದರು. 

4 ವರ್ಷಗಳಲ್ಲಿ 8575 ಕೇಸ್

ಸಾರ್ವಜನಿಕ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದಕ್ಕೆ ಕಡಿವಾಣವೇ ಇಲ್ಲದಂತಾಗಿದೆ. 4 ವರ್ಷಗಳಲ್ಲಿ 8575 ಪ್ರಕರಣಗಳು ವರದಿಯಾಗಿರುವುದೇ ಇದಕ್ಕೆ ನಿದರ್ಶನವಾಗಿದೆ. ಮಕ್ಕಳಿಗೆ ತಂಬಾಕು ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದಂತೆ 3840 ಪ್ರಕರಣಗಳು ಕಂಡುಬಂದಿವೆ. ಶಿಕ್ಷಣ ಸಂಸ್ಥೆಯ ಸಮೀಪದಲ್ಲೇ ಮಾರಿದವರ ವಿರುದ್ಧ 154 ಪ್ರಕರಣಗಳನ್ನು ದಾಖಲಿಸಲಾಗಿದ್ದು ₹25700 ದಂಡ ವಿಧಿಸಲಾಗಿದೆ. ‘ಆಕರ್ಷಕ ಉತ್ಪನ್ನಗಳು ಕರಾಳ ಉದ್ದೇಶಗಳು (ತಂಬಾಕು ಮತ್ತು ನಿಕೋಟಿನ್ ಉದ್ಯಮಗಳ ಮುಖವಾಡವನ್ನು ಬಿಚ್ಚಿಡುವುದು)’ ಈ ವರ್ಷದ ತಂಬಾಕುರಹಿತ ದಿನದ ಧ್ಯೇಯವಾಕ್ಯವಾಗಿದ್ದು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜದಲ್ಲಿನ ಪ್ರತಿಯೊಬ್ಬರೂ ಇದಕ್ಕೆ ಕೈಜೋಡಿಸಿದರೆ ಉತ್ತಮ ಸಮಾಜ ನಿರ್ಮಾಣದ ಉದ್ದೇಶ ಈಡೇರುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.