ADVERTISEMENT

ಮೈಸೂರು | ಮರ ಕಡಿದ ಪ್ರಕರಣ: ಲೋಕಾಯುಕ್ತಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 14:41 IST
Last Updated 23 ಏಪ್ರಿಲ್ 2025, 14:41 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

(ಸಾಂಕೇತಿಕ ಚಿತ್ರ)

ಮೈಸೂರು: ‘ನಗರದ ಎಸ್‌ಪಿ ಕಚೇರಿ ಬಳಿಯ ಹೈದರಾಲಿ ರಸ್ತೆಯಲ್ಲಿನ 40 ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಲೋಕಾಯುಕ್ತ ಕಚೇರಿಗೆ ಬುಧವಾರ ದೂರು ಸಲ್ಲಿಸಲಾಗಿದೆ’ ಎಂದು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ತಿಳಿಸಿದರು.

ADVERTISEMENT

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜು, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್‌ ಆಸೀಫ್, ನಜರ್‌ಬಾದ್ ಠಾಣೆ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ದೂರಿನಲ್ಲಿ ಕೋರಲಾಗಿದೆ’ ಎಂದು ತಿಳಿಸಿದರು.

‘ಮಾರ್ಚ್ 20ರಂದು ಪಾಲಿಕೆಯು ರಸ್ತೆಯನ್ನು 30 ಮೀಟರ್ ವಿಸ್ತರಿಸಬೇಕು ಎಂದು ಸಲ್ಲಿಸಿದ ಮನವಿ ಆಧಾರದ ಮೇಲೆ ಮಾರ್ಚ್‌ 25ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯು 40 ಮರಗಳ ಕಟಾವಿಗೆ ಆದೇಶ ಮಾಡಿದ್ದಾರೆ. ಈ ಕುರಿತು ನಾನು ಏ.11ರಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದೇನೆ’ ಎಂದರು.

‘ಈ ಮಧ್ಯೆ ಹೇಗಾದರೂ ಮರ ಕಡಿಯಬೇಕೆಂಬ ಉದ್ದೇಶದಿಂದ ಏ.13ರಂದು ಭಾನುವಾರದ ರಜಾ ದಿನದಂದು ಆಯುಕ್ತ ಶೇಖ್ ತನ್ವೀರ್‌ ಆಸಿಫ್ ಕಡೆಯವರು ಎಂದು ಹೇಳಿಕೊಳ್ಳುವ ಸೈಯದ್ ಮೊಹಮ್ಮದ್, ನಾಸಿರ್, ಶರೀಫ್ ಹಾಗೂ ಇತರ ವ್ಯಕ್ತಿಗಳು ಯಾವುದೇ ಕಾರ್ಯಾದೇಶ ಇಲ್ಲದೇ ರಾತ್ರೋರಾತ್ರಿ ಕಳ್ಳರಂತೆ 2 ಜೆಸಿಬಿ, 2 ಲಾರಿ, 1 ಗೂಡ್ಸ್ ಆಟೊ, 2 ಪೆಟ್ರೋಲ್ ಗರಗಸ ಬಳಸಿಕೊಂಡು ಮರಗಳನ್ನು ಕಟಾವು ಮಾಡಿ ಕಳ್ಳ ಸಾಗಣೆ ಮಾಡುತ್ತಿದ್ದರು. ಇವರನ್ನು ಮಾಲು ಸಮೇತ ಹಿಡಿದುಕೊಟ್ಟರೂ ಇನ್‌ಸ್ಪೆಕ್ಟರ್ ಮಹದೇವ ಸ್ವಾಮಿ ಕ್ರಮ ಕೈಗೊಳ್ಳುವ ಬದಲು ರಕ್ಷಣೆ ನೀಡಿ ಮಾಲು ಸಾಗಿಸಲು ನೆರವಾಗಿದ್ದಾರೆ. ಹೀಗಾಗಿ ಇವರೆಲ್ಲರ ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ವಿ.ರವಿಕುಮಾರ್, ಪರಿಸರವಾದಿ ಆದರ್ಶ್ ಅರಸು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.