ಮೈಸೂರು: ‘ಉಡಾನ್–3’ ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‌ಗೆ ಜುಲೈ 19ರಂದು ವಿಮಾನಯಾನ ಸಂಪರ್ಕ ಆರಂಭವಾಗಲಿದೆ.
ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಕಡಿಮೆ ದರದಲ್ಲಿ ಈ ಸೇವೆ ಒದಗಿಸಲಿದೆ. ಎಟಿಆರ್ 72 ಆಸನ ಗಳ ವಿಮಾನ ಕಾರ್ಯಾಚರಣೆ ನಡೆಸಲಿದೆ.
ವಿಶೇಷವೆಂದರೆ ಒಂದೇ ವಿಮಾನ ದಿನವಿಡೀ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಈ ವಿಮಾನವು ಹೈದರಾಬಾದ್‌ನಿಂದ ಬೆಳಿಗ್ಗೆ 6.05ಕ್ಕೆ ಹೊರಟು ಮೈಸೂರಿಗೆ 7.50ಕ್ಕೆ ಬರಲಿದೆ. ಮೈಸೂರಿನಿಂದ ಬೆಳಿಗ್ಗೆ 8.15ಕ್ಕೆ ಹೊರಟು 9.45ಕ್ಕೆ ಕೊಚ್ಚಿ ತಲುಪುತ್ತದೆ. ಕೊಚ್ಚಿಯಿಂದ ಬೆಳಿಗ್ಗೆ 10.10ಕ್ಕೆ ಹೊರಟು 11.40ಕ್ಕೆ ಮೈಸೂರಿಗೆ ಬರಲಿದೆ.
ಮೈಸೂರಿನಿಂದ ಮಧ್ಯಾಹ್ನ 12.10ಕ್ಕೆ ನಿರ್ಗಮಿಸಿ 1.05ಕ್ಕೆ ಬೆಂಗಳೂ ರಿಗೆ ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 1.50ಕ್ಕೆ ಹೊರಟು 2.50ಕ್ಕೆ ಮೈಸೂರಿಗೆ ಬರಲಿದೆ.
ಮೈಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಸಂಜೆ 4.50ಕ್ಕೆ ಗೋವಾಕ್ಕೆ ಬಂದಿಳಿಯಲಿದೆ. ಗೋವಾದಿಂದ ಸಂಜೆ 5.20ಕ್ಕೆ ನಿರ್ಗಮಿಸಿ ಮೈಸೂರಿಗೆ 6.50ಕ್ಕೆ ಬರಲಿದೆ. ಮೈಸೂರಿನಿಂದ ರಾತ್ರಿ 7.20ಕ್ಕೆ ಹೊರಟು 9.05ಕ್ಕೆ ಹೈದರಾಬಾದ್ ತಲುಪುತ್ತದೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಜನವರಿಯಲ್ಲಿ ಅನುಮತಿ ನೀಡಿತ್ತು. ಸಂಸದ ಪ್ರತಾಪಸಿಂಹ ಅವರು ವಿವಿಧ ವಿಮಾನಯಾನ ಕಂಪನಿಗಳ ಮುಖ್ಯಸ್ಥರು ಹಾಗೂ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಇದರೊಂದಿಗೆ ಪ್ರವಾಸಿಗಳ ಸ್ವರ್ಗ ಕೇರಳ, ಗೋವಾ ಹಾಗೂ ಮುತ್ತಿನ ನಗರಿ ಹೈದರಾಬಾದ್‌ನೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ವಾಯುಯಾನ ಸಂಪರ್ಕ ಏರ್ಪಡಲಿದೆ.
ಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಯೋಜನೆಯಡಿ ಈಗಾಗಲೇ 72 ಆಸನಗಳ ಟ್ರೂಜೆಟ್ ವಿಮಾನ ಚೆನ್ನೈ– ಮೈಸೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹುತೇಕ ಸೀಟುಗಳು ಭರ್ತಿಯಾಗುತ್ತಿವೆ.
‘ಉಡಾನ್–3’ ಯೋಜನೆಯಡಿ ಮೈಸೂರಿನಿಂದ ಬೆಳಗಾವಿ ಹಾಗೂ ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಪರ್ಕ ಸದ್ಯದಲ್ಲೇ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.