ADVERTISEMENT

ಯುಗಾದಿ: ಹೊಂಗನಸಿಗೆ ನಾಂದಿ

ಪ್ಲವ ನಾಮ ಸಂವತ್ಸರ ಇಂದಿನಿಂದ; ಎಲ್ಲೆಡೆ ಒಳಿತಿಗಾಗಿ ಪ್ರಾರ್ಥನೆ

ಡಿ.ಬಿ, ನಾಗರಾಜ
Published 13 ಏಪ್ರಿಲ್ 2021, 3:51 IST
Last Updated 13 ಏಪ್ರಿಲ್ 2021, 3:51 IST
ಮೈಸೂರಿನ ಜೆ.ಕೆ. ಮೈದಾನದಲ್ಲಿ ಯುಗಾದಿ ಹಬ್ಬದ ಮುನ್ನಾ ದಿನವಾದ ಸೋಮವಾರ ಹೂವು ಖರೀದಿಸಿದ ಜನರು
ಮೈಸೂರಿನ ಜೆ.ಕೆ. ಮೈದಾನದಲ್ಲಿ ಯುಗಾದಿ ಹಬ್ಬದ ಮುನ್ನಾ ದಿನವಾದ ಸೋಮವಾರ ಹೂವು ಖರೀದಿಸಿದ ಜನರು   

ಮೈಸೂರು: ವಸಂತ ಋತುವಿನ ಆರಂಭ. ಚೈತ್ರ ಶುಕ್ಲ ಪಾಡ್ಯದ ದಿನವೇ ಚಾಂದ್ರಮಾನ ಯುಗಾದಿ. ಪಂಚಾಂಗದ ಪ್ರಕಾರ ಅಸಂಖ್ಯಾತ ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭದ ದಿನವಿದು. ಈ ಬಾರಿ ಮಂಗಳವಾರ (ಏ.13) ಆಚರಣೆಗೊಳ್ಳುತ್ತಿದೆ.

ಹೊಂಗನಸುಗಳಿಗೆ ಶ್ರೀಕಾರದ ಮುದ್ರೆಯೊತ್ತುವ ದಿನ. ಹೊಸ ವಾಹನ ಖರೀದಿಗೆ ಶುಭ ದಿನ. ಹೊಸ ಬಟ್ಟೆ ತೊಟ್ಟು, ಎಲ್ಲೆಲ್ಲೂ ಸಡಗರದಿಂದ ಸಂಚರಿಸುವ ದಿನವಿದು. ಕುಟುಂಬದವರು ಒಟ್ಟಾಗಿ ಆಚರಿಸುವ ಹಬ್ಬವಿದು. ಪ್ರಕೃತಿಯಲ್ಲಿನ ಬದಲಾವಣೆಯ ಸಂಕೇತವೇ ಯುಗಾದಿ. ಗಿಡ–ಮರಗಳು ಎಲೆಗಳನ್ನು ಉದುರಿಸಿಕೊಂಡು ಹೊಸ ಚಿಗುರು, ಹೂವಿನೊಂದಿಗೆ ರಾರಾಜಿಸುವ ರಮ್ಯ ಚೈತ್ರ ಕಾಲವಿದು.

ನಸುಕಿನಲ್ಲೇ ಅಭ್ಯಂಜನ ಸ್ನಾನಗೈದು, ದೇವರಿಗೆ ನಮಿಸಿ, ಭೂರಿ ಭೋಜನ ಸವಿಯುವ ಸಮಯವಿದು. ಮುಸ್ಸಂಜೆಯ ಬಾನಂಗಳದಲ್ಲಿ ಪಡುವಣದಲ್ಲಿ ಗೋಚರಿಸುವ ಚಂದ್ರನನ್ನು ಕಣ್ತುಂಬಿಕೊಂಡು, ಆತನಿಗೊಂದು ವಿಶೇಷ ಪೂಜೆಗೈದು, ಬೇವು–ಬೆಲ್ಲದ ಮಿಶ್ರಣವನ್ನು ಪರಸ್ಪರ ಹಂಚಿಕೊಂಡು ಒಳಿತನ್ನು ಕೋರುವ ಕ್ಷಣವಿದು. ಹಿರಿಯರ ಪಾದಗಳಿಗೆ ನಮಿಸಿ ಆಶೀರ್ವಾದ ಪಡೆಯುವ ತಲೆತಲಾಂತರದ ಸಂಪ್ರದಾಯ ಪಾಲನೆಗೆ ಕಿರಿಯರು ಕಾತರದಿಂದ ಕಾಯುವ ಗಳಿಗೆಯಿದು.

ADVERTISEMENT

ಜಗತ್ತಿಗೆ ಹೆಚ್ಚು ಕಹಿ ಉಣಿಸಿದ ಶಾರ್ವರಿ ಸಂವತ್ಸರಕ್ಕೆ ಈಗಾಗಲೇ ತೆರೆ ಬಿದ್ದಿದೆ. ಸಹಸ್ರ, ಸಹಸ್ರ ಕನಸುಗಳೊಂದಿಗೆ ಪ್ಲವ ಸಂವತ್ಸರದ ಸ್ವಾಗತಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ಈ ಸಂವತ್ಸವರದಲ್ಲಾದರೂ ಹಿಂದಿನ ಸಂವತ್ಸರವಿಡಿ ಕಾಡಿದ ಕೋವಿಡ್‌–19ಗೆ ಮುಕ್ತಿ ಸಿಗಲಿ, ಬದುಕು ಹಿಂದಿನಂತೆ ಸಹಜ ಸ್ಥಿತಿಗೆ ಮರಳಲಿ ಎಂಬುದೇ ಎಲ್ಲರ ಒಕ್ಕೊರಲಪ್ರಾರ್ಥನೆಯಾಗಿದೆ.

ವಿಕಾರಿ ಸಂವತ್ಸರದ ಕೊನೆ ಕಾಲಘಟ್ಟದಲ್ಲಿ ಅಬ್ಬರಿಸಲಾರಂಭಿಸಿದ ಮಹಾಮಾರಿ ಕೊರೊನಾ ವೈರಸ್ ಸೋಂಕು ಶಾರ್ವರಿ ಸಂವತ್ಸರದುದ್ದಕ್ಕೂ ಕಾಡಿತು. ಲಕ್ಷ, ಲಕ್ಷ ಸಂಖ್ಯೆಯ ಜನರು ಜೀವ ತೆತ್ತರು. ಮೈಸೂರು ಜಿಲ್ಲೆಯಲ್ಲೂ ಕೋವಿಡ್‌ ಸಾವಿನ ಸಂಖ್ಯೆ ಸಹಸ್ರ ದಾಟಿದೆ. ಕೋವಿಡ್‌ ಪೀಡಿತರಾಗುವುದು ಇದೀಗ ಎರಡನೇ ಅಲೆಯ ಅಬ್ಬರದಲ್ಲೂ ಹೆಚ್ಚಿದ್ದು, ಯುಗಾದಿಯ ಸಂಭ್ರಮವನ್ನು ಕಳೆಗುಂದಿಸಿದೆ.

ತ್ರಿವೇಣಿ ಸಂಗಮದಲ್ಲಿಲ್ಲ ಪುಣ್ಯ ಸ್ನಾನ

ಯುಗಾದಿ ಹಬ್ಬದಂದು ತಿ.ನರಸೀಪುರದ ತ್ರಿವೇಣಿ ಸಂಗಮ, ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯ ಸನಿಹ ಹಾಗೂ ಮೈಸೂರು ಜಿಲ್ಲೆಯ ವಿವಿಧೆಡೆ ಹರಿಯುವ ಕಪಿಲೆ, ಕಾವೇರಿಯಲ್ಲಿ ಪುಣ್ಯಸ್ನಾನ ಮಾಡುವುದು ತಲೆ ತಲಾಂತರದಿಂದಲೂ ಅಸಂಖ್ಯಾತ ಜನರ ಸಂಪ್ರದಾಯ.

ಹಿಂದಿನ ವರ್ಷದಂತೆಯೇ ಈ ಬಾರಿಯೂ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ನಿಷೇಧಿಸಲಾಗಿದೆ. ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಹಾಗೂ ವಿವಿಧೆಡೆ ಹರಿಯುವ ನದಿಯಲ್ಲಿ ಜನರು ಮಿಂದೇಳಲಿದ್ದಾರೆ. ದೇಗುಲದ ಬಾಗಿಲು ತೆರೆಯಲಿದ್ದು, ವಿಶೇಷ ಪೂಜೆ ನಡೆಯಲಿವೆ. ಯುಗಾದಿಯ ಶುಭ ಲಗ್ನದಲ್ಲಿ ಗಂಗಾ ಸ್ನಾನ ಮಾಡಿಸಲಿಕ್ಕಾಗಿಯೇ, ಮೈಸೂರು ಜಿಲ್ಲೆಯೂ ಸೇರಿದಂತೆ ನೆರೆಯ ಜಿಲ್ಲೆಗಳ ವಿವಿಧ ಗ್ರಾಮಗಳಿಂದ ತಿ.ನರಸೀಪುರದ ತ್ರಿವೇಣಿ ಸಂಗಮಕ್ಕೆ ದೇವರ ಕೂಟ, ಕಂಡಾಯ, ದೇವರ ಮೂರ್ತಿ, ವಿಗ್ರಹಗಳನ್ನು ಹೊತ್ತು ತಂದು, ಗಂಗಾ ಸ್ನಾನ ಮಾಡಿಸುತ್ತಿದ್ದ ಪರಂಪರೆಗೂ ಈ ಬಾರಿಯೂ ಇತಿಶ್ರೀ ಬಿದ್ದಿದೆ.

ವ್ಯಾಪಾರ ಅಷ್ಟಕ್ಕಷ್ಟೇ!

ಮೈಸೂರಿನ ವಿವಿಧ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನವಾದ ಸೋಮವಾರ ಸಂಜೆಯೂ ಸಹ ವಹಿವಾಟು ಬಿರುಸುಗೊಳ್ಳಲಿಲ್ಲ. ಇದು ವ್ಯಾಪಾರಿ ವಲಯದಲ್ಲಿ ತೀವ್ರ ನಿರಾಸೆ ಮೂಡಿಸಿತು.

‘ಕೋವಿಡ್‌ ತಡೆಗಟ್ಟಲಿಕ್ಕಾಗಿ ದೇವರಾಜ ಮಾರುಕಟ್ಟೆಯನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಿದ್ದು ಸಾಕಷ್ಟು ಹೊಡೆತ ನೀಡಿದೆ. ರಾತ್ರಿಯಾದರೂ ಹೂವು, ಹಣ್ಣು ಮಾರಾಟವಾಗಲಿಲ್ಲ. ಬೃಹತ್‌ ಪ್ರಮಾಣದಲ್ಲಿ ಉಳಿದಿದೆ. ಏನ್ಮಾಡಬೇಕು ಎಂಬುದೇ ತೋಚದಾಗಿದೆ?’ ಎಂದು ವ್ಯಾಪಾರಿ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಯಲ್ಲಿದ್ದವರು ಧ್ವನಿಗೂಡಿಸಿದರು. ‘ಹಿಂಗೆ ಮಾಡಿ ನಮ್ಮ ಹೊಟ್ಟೆ ಮೇಲೆ ಪ್ರತಿ ಬಾರಿಯೂ ಹೊಡೆಯುತ್ತಿದ್ದಾರೆ’ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.