ADVERTISEMENT

ಗ್ರಾಮ ಸ್ನೇಹಿಯಲ್ಲದ ಯುನೆಸ್ಕೊ ಮಾನ್ಯತೆ ಸೋಮನಾಥಪುರಕ್ಕೆ ಬೇಡ: ಶಾಸಕ ಎಂ.ಅಶ್ವಿನ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 9:31 IST
Last Updated 6 ಜುಲೈ 2022, 9:31 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆ.   

ಮೈಸೂರು: ‘ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶ್ವರ ದೇವಾಲಯವನ್ನು ಯುನೆಸ್ಕೊ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಪಟ್ಟಿಯಲ್ಲಿ ಸೇರ್ಪಡೆಯ ಮಾನ್ಯತೆಗೆ ಒಳಪಡಿಸುವುದು ಗ್ರಾಮ ಸ್ನೇಹಿಯಾಗಿದ್ದರೆ ಮಾತ್ರ ಅನುಮತಿ ಕೊಡಬೇಕು; ಇಲ್ಲದಿದ್ದರೆ ಬೇಡ’ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್‌ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅನುದಾನ ಬರುತ್ತದೆಂದು ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಅವರನ್ನು ಒಕ್ಕಲೆಬ್ಬಿಸುವಂತಹ ಯೋಜನೆಗಳಿಗೆ ಅವಕಾಶ ಬೇಡ’ ಎಂದು ಕೋರಿದರು.

‘ಸೋಮನಾಥಪುರದಲ್ಲಿ ಯಾವ ಜಾಗ ಯಾವ ಇಲಾಖೆಗೆ ಸೇರಿದ್ದು ಎನ್ನುವುದನ್ನು ಮೊದಲು ಗುರುತಿಸಬೇಕು. ದೇಗುಲಕ್ಕೆ ಯುನೆಸ್ಕೊ ಮಾನ್ಯತೆಗಾಗಿ, ಆ ನಿಯಮಗಳಿಗೆ ಒಳಪಟ್ಟು ಜನರನ್ನು ಒಕ್ಕಲೆಬ್ಬಿಸಲಾಗದು’ ಎಂದರು.

ADVERTISEMENT

ಕಾಂಪೌಂಡ್‌ನಿಂದ ಪರಿಗಣಿಸಬಾರದು:‘ಹಾಗೇನಾದರೂ ಮಾಡುವುದೇ ಆದಲ್ಲಿ ವ್ಯಾಪ್ತಿಯಲ್ಲಿ ದೇಗುಲ ಸ್ಥಳದಿಂದ 100 ಮೀಟರ್‌ಗೆ ಅನ್ವಯಿಸಬೇಕು. ಕಾಂಪೌಂಡ್‌ ಬಳಿಯಿಂದ 100 ಮೀಟರ್‌ ಎಂದು ಪರಿಗಣಿಸಿದರೆ ಮನೆಗಳಿಗೆ ತೊಂದರೆ ಆಗುತ್ತದೆ. ನಿರ್ಮಾಣ ಚಟುವಟಿಕೆ ಮಾಡಲಾಗುವುದಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ (ಎಎಸ್ಐ) ಹಸ್ತಾಂತರಿಸದ ಬಳಿಕ ತೊಂದರೆ ಆಗುತ್ತದೆ. ಜನರು ಮನೆ ಕಟ್ಟಲು ಆಗುವುದಿಲ್ಲ’ ಎಂದು ತಿಳಿಸಿದರು.

‘ಯುನೆಸ್ಕೋಗೆ ಕೊಟ್ಟ ನಂತರ ಆ ವ್ಯಾಪ್ತಿಯಲ್ಲಿ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಈಗ ಸಿಗುವ ಬಿಡಿಗಾಸಿಗೋಸ್ಕರ ಮುಂದಿನ‌ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಮನೆ ದುರಸ್ತಿಗೂ ಕಷ್ಟವಾಗುತ್ತದೆ. ಈ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಂಪಿಯ ನಿದರ್ಶನ ನಮ್ಮ ಕಣ್ಮುಂದೆ ಇದೆಯಲ್ಲ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

‘ಯುನೆಸ್ಕೊ ಪಟ್ಟಿಯಲ್ಲಿ ಹೆಸರು ಗಳಿಸುವುದರಿಂದ ಪ್ರವಾಸೋದ್ಯಮ ವೃದ್ಧಿಸಲಿದೆ’ ಎಂದು ಎಸ್ಪಿ ಆರ್. ಚೇತನ್‌ ತಿಳಿಸಿದರು.

‘ಪ್ರವಾಸೋದ್ಯಮಕ್ಕಾಗಿ ಅಲ್ಲಿನ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಅನುದಾನಕ್ಕಾಗಿ ಜನರನ್ನು ಹೊರ ಕಳುಹಿಸಲಾಗದು’ ಎಂದು ಅಶ್ವಿನ್ ಪ್ರತಿಕ್ರಿಯಿಸಿದರು.

‘ಪಾರಂಪರಿಕವಾದ ದೇವಸ್ಥಾನದ ಸುತ್ತ ಅಭಿವೃದ್ಧಿ ಕಾಮಗಾರಗಳಿಗೆ ನಿಷೇಧ ಈಗಲೂ‌ ಇಲ್ಲ; ನಿರ್ಬಂಧವಷ್ಟೆ ಇದೆ. ಯುನೆಸ್ಕೊ ಪಟ್ಟಿಗೆ ಸೇರಿಸುವ ನಿರ್ಧಾರವು ನಮ್ಮ ಹಂತದಲ್ಲಿ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಡೆಯುತ್ತದೆ. ಯುನೆಸ್ಕೊ ತಂಡದ ಭೇಟಿ ಹಿನ್ನೆಲೆಯಲ್ಲಿ ಈಗ ಅಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದರು.

₹ 3.40 ಕೋಟಿ ವೆಚ್ಚದಲ್ಲಿ:‘ಸೋಮನಾಥಪುರ ದೇಗುಲವನ್ನು ಯುನೆಸ್ಕೊ ಪಟ್ಟಿಗೆ ಸೇರಿಸುವ ಸಂಬಂಧ ಈಗಾಗಲೇ ಪ್ರಸ್ತಾವ ಸಲ್ಲಿಕೆಯಾಗಿದೆ. ಪರಿಶೀಲನೆಗಾಗಿ ಯುನೆಸ್ಕೊ ತಂಡವು ಆಗಸ್ಟ್‌ನಲ್ಲಿ ಬರುತ್ತಿದೆ. ಹೀಗಾಗಿ, ಅಲ್ಲಿ ₹ 3.40 ಕೋಟಿ ವೆಚ್ಚದಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ’ ಎಂದು ಜಿ.ಪಂ. ಸಿಇಒ ಬಿ.ಆರ್. ಪೂರ್ಣಿಮಾ ತಿಳಿಸಿದರು. ಅಭಿವೃದ್ಧಿ ಯೋಜನೆಗಳ ಪ್ರಸ್ತಾವಕ್ಕೆ ಸಭೆ ಅನುಮೋದನೆ ನೀಡಿತು.

‘ಸೋಮನಾಥಪುರ ಸಂಪರ್ಕಿಸುವ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು’ ಎಂದು ಅಶ್ವಿನ್ ಒತ್ತಾಯಿಸಿದರು.

ಜಿಲ್ಲೆಗೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಹುದ್ದೆ ಕೊಡಬೇಕು. ಪ್ರವಾಸೋದ್ಯಮ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.