ADVERTISEMENT

ಮರೆಯಲಾಗದ ಸಂಗಾತಿ

ಎನ್.ನವೀನ್ ಕುಮಾರ್
Published 17 ಮೇ 2019, 19:47 IST
Last Updated 17 ಮೇ 2019, 19:47 IST
ಸಿ.ಸುಚಿತ್ರಾ
ಸಿ.ಸುಚಿತ್ರಾ   

ಮೊಬೈಲ್‌ ಅಥವಾ ಸ್ಮಾರ್ಟ್‌ಫೋನ್‌ ಬಿಟ್ಟಿರಲಾರದ ಸಂಗಾತಿ, ಜೀವನದ ಅವಿಭಾಜ್ಯ ಅಂಗ. ಸ್ಮಾರ್ಟ್‌ಫೋನ್‌ಗಳು ಅಬಾಲವೃದ್ಧರಾದಿಯಾಗಿ ಎಲ್ಲರ ಕೈಗಳಲ್ಲೂ ಇಣುಕುತ್ತವೆ, ಮಾತನಾಡುತ್ತವೆ. ಅಂಗೈಯಲ್ಲೇ ವಿಶ್ವವನ್ನು ತೋರಿಸುವ ಸ್ಮಾರ್ಟ್‌ಫೋನ್‌ಗಳಿಗೆ ಮಕ್ಕಳು ದಾಸರಾಗುತ್ತಿದ್ದಾರೆ. ಸ್ಮಾರ್ಟ್‌ಫೋನ್‌ಗಳನ್ನು ಲೀಲಾಜಾಲವಾಗಿ ಬಳಕೆ ಮಾಡಿ ಪೋಷಕರಿಗೆ ಅಚ್ಚರಿ ಹುಟ್ಟಿಸುತ್ತಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳೇ ಇದಕ್ಕೆ ಕಾರಣ. ಕಡಿಮೆ ಬೆಲೆಗೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಮೊಬೈಲ್‌, ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಜನರೂ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಆದರೆ, ಟೆಲಿಫೋನ್‌ಗಳ ಬಳಕೆ ಆರಂಭವಾದಾಗ ಇದ್ದ ಕುತೂಹಲ, ದೂರದ ಸಂಬಂಧಿಗಳಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದಾಗ ಸಿಗುತ್ತಿದ್ದ ಆನಂದ, ನೆಮ್ಮದಿ ಈಗ ಸಿಗಲಾರದು.

ವಿಜ್ಞಾನಿ ಅಲೆಗ್ಸಾಂಡರ್‌ ಗ್ರಾಹಂಬೆಲ್‌ 1876ರಲ್ಲಿ ಟೆಲಿಫೋನ್‌ ಕಂಡು ಹಿಡಿದರು. ಇದು ದೂರಸಂಪರ್ಕ ಕ್ಷೇತ್ರದ ಕ್ರಾಂತಿಕಾರಕ ಹೆಜ್ಜೆ. ವಿವಿಧ ನಮೂನೆಯ ಫೋನ್‌ಗಳನ್ನು ತಯಾರಿಸಲಾಯಿತು. ಇವುಗಳಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಫೋನ್‌ಗಳೆಂದರೆ ‘ರೋಟರಿ ಡಯಲ್‌’ಗಳು. ಡಯಲ್ ಮಾಡಬೇಕಾದರೆ ಆಯಾ ಸಂಖ್ಯೆಯನ್ನು ತಿರುಗಿಸಬೇಕಿತ್ತು. ಈ ‘ರೋಟರಿ ಡಯಲ್’ ಫೋನ್‌ಗಳು 1923ರಿಂದ ಬಳಕೆಗೆ ಬಂದವು. ಆನಂತರ, ಗುಂಡಿಗಳನ್ನು ಒತ್ತುವ ಮೂಲಕ ಕರೆ ಮಾಡುವ ಫೋನ್‌ಗಳು 1941ರಲ್ಲಿ ಚಾಲನೆಗೆ ಬಂದವು.

ಟೆಲಿಫೋನ್‌ ಹೊಂದಿರುವವರು ಶ್ರೀಮಂತರು, ಅತ್ಯಾಕರ್ಷಕ ‘ರೋಟರಿ ಡಯಲ್‌’ ಫೋನ್‌ಗಳನ್ನು ಇಟ್ಟಿರುವವರು ಆಗರ್ಭ ಶ್ರೀಮಂತರು ಎಂಬ ಕಲ್ಪನೆ ಇತ್ತು.

ADVERTISEMENT

ಇಡೀ ಊರಿಗೆ ಒಂದಿಬ್ಬರ ಮನೆಯಲ್ಲಿ ಫೋನ್‌ ಸಂಪರ್ಕ ಇರುತ್ತಿತ್ತು. ಯಾರಿಗಾದರೂ ಕರೆ ಮಾಡಬೇಕಿದ್ದರೆ ಅವರ ಮನೆಗೆ ಹಾಜರಾಗಬೇಕಿತ್ತು. ದೂರದ ಸಂಬಂಧಿಯಿಂದ ಬರುವ ವರ್ತಮಾನಕ್ಕಾಗಿ ಫೋನ್‌ ಹೊಂದಿದ್ದವರ ಮನೆ ಮುಂದೆ ಕಾಯುತ್ತಿದ್ದ ಪ್ರಸಂಗಗಳು ಎಷ್ಟೋ. ಕೆಲವೊಮ್ಮೆ ಮಾಲೀಕರ ಕಿರಿಕಿರಿಗೂ ಕಾರಣವಾಗುತ್ತಿತ್ತು.

ಗುಂಡಿ ಒತ್ತುವ ಫೋನ್‌ಗಳು ಹೆಚ್ಚು ಜನಪ್ರಿಯವಾದಂತೆ ಮಧ್ಯಮ ವರ್ಗದ ಕುಟುಂಬಗಳಲ್ಲೂ ಕಾಣಿಸಿಕೊಳ್ಳತೊಡಗಿದವು. ಫೋನಿನ ಸದ್ದು ರಿಂಗಣಿಸುತ್ತಿದ್ದಂತೆ ಮಕ್ಕಳು ಕುತೂಹಲದಿಂದ ನೋಡುತ್ತಿದ್ದರು. ಏನು ಮಾತನಾಡುತ್ತಿದ್ದಾರೆ ಎಂಬುದನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಕರೆಗಳ ದರ ದುಬಾರಿಯಾಗಿದ್ದರಿಂದ ಫೋನ್‌ ಬಳಕೆಯನ್ನು ಕಡಿಮೆ ಮಾಡುವುದು ಪೋಷಕರಿಗೆ ಅನಿವಾರ್ಯವಿರುತ್ತಿತ್ತು. ಈ ಕಾರಣಕ್ಕೆ ಫೋನ್‌ ಅನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕುತ್ತಿದ್ದರು. ನಂತರ, ನಂಬರ್‌ಗಳಿಗೆ ಮಾತ್ರ ಬೀಗ ಹಾಕುವ ವ್ಯವಸ್ಥೆ ಚಾಲ್ತಿಗೆ ಬಂದಿತು.

ಎಸ್‌ಟಿಡಿ ಬೂತ್‌ಗಳು ನಾಯಿಕೊಡೆಗಳಂತೆ ತಲೆಎತ್ತಿದ್ದವು. ಯಾರಿಗಾದರೂ ಫೋನ್‌ ಮಾಡಿದರೆ ಸೆಕೆಂಡ್‌ಗಳನ್ನು ತೋರಿಸುವ ಫಲಕದ ಕಡೆಗೇ ಮುಖ ಮಾಡಿ ಮಾತನಾಡುತ್ತಿದ್ದರು. ಒಂದೆರಡು ನಿಮಿಷಗಳಲ್ಲಿ ಕರೆಯನ್ನು ಕಡಿತ ಮಾಡುತ್ತಿದ್ದರು. ಆನಂತರದ ದಿನಗಳಲ್ಲಿ ಕಾಯಿನ್‌ ಬೂತ್‌ಗಳು ಚಾಲ್ತಿಗೆ ಬಂದವು. ಒಂದು ರೂಪಾಯಿ ಹಾಕಿ ಒಂದು ನಿಮಿಷ ಮಾತನಾಡಬಹುದಿತ್ತು. ಚಿಲ್ಲರೆ ಅಂಗಡಿ ಹಾಗೂ ಬಡಾವಣೆಯ ಅಲ್ಲಲ್ಲಿ ಇಂತಹ ಕಾಯಿನ್‌ ಬೂತ್‌ಗಳು ಕಾಣಸಿಗುತ್ತಿದ್ದವು. ಕೆಲವರು ಒಂದು ರೂಪಾಯಿಯ ಹತ್ತಾರು ನಾಣ್ಯಗಳನ್ನು ಇಟ್ಟುಕೊಂಡು ಮಾತನಾಡಲು ಶುರು ಮಾಡುತ್ತಿದ್ದರು. ಇದರಿಂದ ಬೇರೆಯವರು ಕರೆ ಮಾಡಲು ನಿಂತೇ ಇರಬೇಕಿತ್ತು. ಪ್ರೇಮಿಗಳು ನಿಮಿಷಗಟ್ಟಲೇ ಮಾತನಾಡುತ್ತಿದ್ದರು. ಇದರಿಂದ ಕೆಲವರಿಗೆ ಕಿರಿಕಿರಿಯೂ ಆಗುತ್ತಿತ್ತು.

ಮೊಬೈಲ್‌ ಹಾಗೂ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಂತೆ ದೂರವಾಣಿಗಳು ಮೂಲೆ ಸೇರಿವೆ. ಕುತೂಹಲದ ಕೇಂದ್ರವಾಗಿದ್ದ ಟೆಲಿಫೋನ್‌ಗಳ ಜಾಗದಲ್ಲಿ ಸ್ಮಾರ್ಟ್‌ಫೋನ್‌ಗಳು ಕುಳಿತಿವೆ. ಆದರೆ, ಸಂಬಂಧಗಳನ್ನು ಬೆಸೆಯುತ್ತಿದ್ದ, ನೋವು, ದುಃಖ, ದುಮ್ಮಾನಗಳನ್ನು ಹೇಳಿಕೊಳ್ಳುವ, ಸಾಂತ್ವನ ನೀಡುತ್ತಿದ್ದ ಟೆಲಿಫೋನ್‌ಗಳ ಸ್ಥಾನವನ್ನು ಸ್ಮಾರ್ಟ್‌ಫೋನ್‌ಗಳು ತುಂಬುತ್ತಿಲ್ಲ. ಸ್ಮಾರ್ಟ್‌ಫೋನ್‌ಗಳು ಮನುಷ್ಯ– ಮನುಷ್ಯನ ಮಧ್ಯೆ ಅಂತರ ಹೆಚ್ಚಿಸುತ್ತಿವೆ. ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸಿದರೂ ಕ್ಷಣಾರ್ಧದಲ್ಲಿ ಅದನ್ನು ಕಡಿತಗೊಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.