ADVERTISEMENT

ಜಾತಿ ಭೇದಕ್ಕೆ ವಿಶ್ವಮಾನವ ಸಂದೇಶ ಮದ್ದು

ವಿಶ್ವಮಾನವ ‍ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಕೆ.ವಿ.ನಾರಾಯಣ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 13:14 IST
Last Updated 29 ಡಿಸೆಂಬರ್ 2018, 13:14 IST
ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಹಾಗೂ ದೇಜಗೌ ಟ್ರಸ್ಟ್ ವತಿಯಿಂದ ಕುವೆಂಪು ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್‌.ನಾಗಣ್ಣ ಅವರಿಗೆ ‘ದಿ.ಎಚ್‌.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’, ಸಂಶೋಧಕ ಪ್ರೊ.ಎಂ.ಚಿದಾನಂದ ಮೂರ್ತಿ ಅವರಿಗೆ ‘ಕರ್ನಾಟಕ ರತ್ನ ನಾಡೋಜ ಡಾ.ದೇಜಗೌ ಪ್ರಶಸ್ತಿ’ ಹಾಗೂ ಸಾಹಿತಿ ಡಾ.ಕೆ.ವಿ.ನಾರಾಯಣ ಅವರಿಗೆ ‘ವಿಶ್ವಮಾನವ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಹಾಗೂ ದೇಜಗೌ ಟ್ರಸ್ಟ್ ವತಿಯಿಂದ ಕುವೆಂಪು ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್‌.ನಾಗಣ್ಣ ಅವರಿಗೆ ‘ದಿ.ಎಚ್‌.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’, ಸಂಶೋಧಕ ಪ್ರೊ.ಎಂ.ಚಿದಾನಂದ ಮೂರ್ತಿ ಅವರಿಗೆ ‘ಕರ್ನಾಟಕ ರತ್ನ ನಾಡೋಜ ಡಾ.ದೇಜಗೌ ಪ್ರಶಸ್ತಿ’ ಹಾಗೂ ಸಾಹಿತಿ ಡಾ.ಕೆ.ವಿ.ನಾರಾಯಣ ಅವರಿಗೆ ‘ವಿಶ್ವಮಾನವ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಮೈಸೂರು: ಕುವೆಂಪು ಅವರ ವಿಶ್ವಮಾನವ ಸಂದೇಶದಿಂದ ಜಾತಿ ಭೇದ, ಲಿಂಗ ತಾರತಮ್ಯಕ್ಕೆ ಮದ್ದು ಸಿಗಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಕೆ.ವಿ.ನಾರಾಯಣ ಅಭಿಪ್ರಾಯಪಟ್ಟರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಹಾಗೂ ದೇಜಗೌ ಟ್ರಸ್ಟ್ ವತಿಯಿಂದ ಕುವೆಂಪು ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ವಿಶ್ವಮಾನವ ಪ್ರಶಸ್ತಿ’ ಸ್ವೀಕರಿಸಿ, ಕುವೆಂಪು ಅವರನ್ನು ಕುರಿತು ಅವರು ಮಾತನಾಡಿದರು.

ಸಮಾಜದಲ್ಲಿ ದಿನೇ ದಿನೇ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಜಾತಿ ಭೇದ, ಹೆಣ್ಣು– ಗಂಡೆಂಬ ತಾರತಮ್ಯ, ಅಸ್ಪೃಶ್ಯತೆ ಹೆಚ್ಚುತ್ತಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತಿದ್ದು, ಪ್ರಗತಿಗೆ ಹಿನ್ನಡೆಯಾಗುವ ಅಪಾಯವಿದೆ. ಇದನ್ನು ಸರಿಪಡಿಸಬೇಕಾದರೆ ಕುವೆಂಪು ಸಂದೇಶಗಳು ಸಹಕಾರಿ. ಕುವೆಂಪು ಅವರು ಹೇಳಿರುವಂತೆ ಭ್ರಾತೃತ್ವ, ಸಮಾನತೆ, ಸರ್ವರ ಪ್ರಗತಿಗೆ ನಾವೆಲ್ಲ ಆದ್ಯತೆ ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಕುವೆಂಪು ಅವರನ್ನು ಹೊರರಾಷ್ಟ್ರಗಳಲ್ಲಿ ಆರಾಧಿಸುವವರು ಇದ್ದಾರೆ. ಕುವೆಂ‍ಪು ಅವರನ್ನು ಕುರಿತು ಗಂಭೀರ ಸಂಶೋಧನೆಗಳು ನಡೆದಿವೆ. ಅಷ್ಟೇ ಪ್ರಮಾಣದಲ್ಲಿ ನಮ್ಮಲ್ಲೂ ಸಂಶೋಧನೆಗಳು ನಡೆದಿವೆ. ಕುವೆಂಪು ಅವರು ಹೊರಗಿನವರಿಗೂ ನಮಗೂ ಎಂದಿಗೂ ಪ್ರಸ್ತುತ. ಹಾಗಾಗಿ, ನಮ್ಮಲ್ಲಿ ಕುವೆಂಪು ಕುರಿತು ಮತ್ತಷ್ಟು ಸಾಹಿತ್ಯ ಕೃಷಿ ನಡೆಯಬೇಕಿದೆ’ ಎಂದು ಅವರು ಸಲಹೆ ನೀಡಿದರು.

‘ಕರ್ನಾಟಕ ರತ್ನ ನಾಡೋಜ ದೇಜಗೌ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿ, ಕನ್ನಡದ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಯಾಗಿ ಬೆಳೆಸುವ ಅವಕಾಶಗಳು ನಮ್ಮ ಮುಂದೆ ಇದ್ದವು. ಆದರೆ, ಕೆಲಸ ಗಂಭೀರವಾಗಿ ಆಗಲಿಲ್ಲ. ನಾವು ನಮ್ಮ ಇತಿಹಾಸವನ್ನು ಮರೆಯಕೂಡದು. ಇತಿಹಾಸವನ್ನು ಅರಿಯದವನು ಇಂದು ಬದುಕಲಾರ, ನಾಳೆಯನ್ನು ಕಟ್ಟಲಾರ. ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯಬೇಕಾದರೆ, ಅವರಿಗೆ ಸಹಕಾರಿಯಾಗಿದ್ದು ಕದಂಬರು. ಅವರು ಕನ್ನಡ ನಾಡನ್ನು ಕಟ್ಟಿ ಬೆಳೆಸಿದ ಬಗೆಯಿಂದಾಗಿ. ಇವನ್ನೆಲ್ಲ ಯುವಜನತೆ ತಿಳಿದುಕೊಳ್ಳಬೇಕು. ಕನ್ನಡಿಗರ ಇತಿಹಾಸವನ್ನು ಮರೆಯಕೂಡದು’ ಎಂದು ಹೇಳಿದರು.

‘ನನಗೆ ಪ್ರಶಸ್ತಿ ಜತೆಗೆ ಬಂದಿರುವ ಹಣದಿಂದ ನಾನು ರಚಿಸಿರುವ ‘ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆ’ ಕೃತಿಯ 1 ಸಾವಿರ ಪ್ರತಿಗಳನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟಿಗೆ ನೀಡುತ್ತೇನೆ. ಈ ಕೃತಿಯಲ್ಲಿ ಕನ್ನಡ ನಾಡನ್ನು ಕುರಿತು ಐತಿಹಾಸಿಕ ದಾಖಲೆಗಳಿವೆ. ಅವನ್ನು ಅರ್ಥಮಾಡಿಕೊಳ್ಳುವ, ಸಂಶೋಧನೆಯನ್ನು ಮುಂದುವರೆಸುವ ಅವಕಾಶ ಯುವಜನರಿಗೆ ಸಿಗಲಿ ಎನ್ನುವುದು ನನ್ನ ಆಶಯ’ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತ ಎಸ್.ನಾಗಣ್ಣ ಅವರಿಗೆ ‘ದಿ.ಎಚ್‌.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ‘ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ’ಯನ್ನು ಮೀರಾ ಶಿವಲಿಂಗಯ್ಯ ಅವರ ಅನುಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.

ಟ್ರಸ್ಟ್‌ ಅಧ್ಯಕ್ಷ ಪ್ರೊ.ಜೆ.ಶಶಿಧರಪ್ರಸಾದ್ ಅವರು ಅಧ್ಯಕ್ಷತೆವಹಿಸಿದ್ದರು. ಕುವೆಂಪು ವಿದ್ಯಾವರ್ಧಕ ಪರಿಷತ್ತಿನ ಅಧ್ಯಕ್ಷ ಡಿ.ಕೆ.ರಾಜೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಎಲ್.ನಾಗೇಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.