ADVERTISEMENT

ಹೋಟೆಲ್ ಮತ್ತು ಕ್ಷೌರದಂಗಡಿಗಳಲ್ಲಿ ಅಸ್ಪೃಶ್ಯತೆ ಆಚರಣೆ: ಕ್ರಮಕ್ಕೆ ಆಗ್ರಹ

ಮದ್ಯ ಅಕ್ರಮ ಮಾರಾಟ ತಡೆಗೆ ಸೀಗೂರು ವಿಜಯ್ ಕುಮಾರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:47 IST
Last Updated 3 ಸೆಪ್ಟೆಂಬರ್ 2021, 3:47 IST
ಪಿರಿಯಾಪಟ್ಟಣದ ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ಪಿ.ಜಗದೀಶ್ ಮಾತನಾಡಿದರು. ಪಿಎಸ್‌ಐ ಸದಾಶಿವ ತಿಪ್ಪರಡ್ಡಿ ಇದ್ದಾರೆ
ಪಿರಿಯಾಪಟ್ಟಣದ ರೋಟರಿ ಭವನದಲ್ಲಿ ನಡೆದ ಸಭೆಯಲ್ಲಿ ಪಿ.ಜಗದೀಶ್ ಮಾತನಾಡಿದರು. ಪಿಎಸ್‌ಐ ಸದಾಶಿವ ತಿಪ್ಪರಡ್ಡಿ ಇದ್ದಾರೆ   

ಪಿರಿಯಾಪಟ್ಟಣ: ‘ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಹೋಟೆಲ್ ಮತ್ತು ಕ್ಷೌರದಂಗಡಿಗಳಲ್ಲಿ ಅಸ್ಪೃಶ್ಯತೆ ಆಚರಣೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ಸದಸ್ಯ ಸೀಗೂರು ವಿಜಯ್ ಕುಮಾರ್ ಆಗ್ರಹಿಸಿದರು.

ಪಟ್ಟಣದ ರೋಟರಿ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ನಡೆದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

‘ಅಸ್ಪೃಶ್ಯತೆ ಆಚರಣೆ ಬಗ್ಗೆ ಗ್ರಾಮಸ್ಥರು ದೂರುತ್ತಿದ್ದಾರೆ. ಸಂಬಂಧಪಟ್ಟ ಹೋಟೆಲ್ ಮಾಲೀಕರು ಮತ್ತು ಕ್ಷೌರದಂಗಡಿ ಮಾಲೀಕರನ್ನು ಕರೆಸಿ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ತಾಲ್ಲೂಕಿನ ಕಾಡಂಚಿನ ಗ್ರಾಮಗಳು, ಗಿರಿಜನ ಹಾಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚಾಗಿದೆ. ಇದರಿಂದ ಕೂಲಿಕಾರ್ಮಿಕ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ದಸಂಸ ಮುಖಂಡ ಆರ್.ಎಸ್.ದೊಡ್ಡಣ್ಣ ಮಾತನಾಡಿ, ‘ರಾವಂದೂರು ಗ್ರಾಮದಲ್ಲಿ ದಲಿತರ ನಿವೇಶನವನ್ನು ಸವರ್ಣೀಯರು ಖಾತೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಭೂ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಜಗದೀಶ್ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ಹಾಗೂ ಅಸ್ಪೃಶ್ಯತೆ ಆಚರಣೆ ಕುರಿತು ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಸಭೆಯಲ್ಲಿ ಪಿಎಸ್‌ಐ ಸದಾಶಿವ ತಿಪ್ಪರಡ್ಡಿ, ತಾ.ಪಂ ಮಾಜಿ ಸದಸ್ಯ ಎಸ್.ರಾಮು, ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ರವಿ, ಮುಖಂಡರಾದ ಪಿ.ಮಹದೇವ್, ಶಿವಣ್ಣ, ಮಲ್ಲಣ್ಣ, ಗಿರೀಶ್, ವೆಂಕಟೇಶ್, ಪಿ.ಪಿ.ಮಹದೇವ್, ನರಸಿಂಹ ಪುಟ್ಟಯ್ಯ, ತಿಮ್ಮನಾಯ್ಕ, ಸಣ್ಣಪ್ಪನಾಯಕ, ಬಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.