ADVERTISEMENT

‘ಭಕ್ತಿಯಿಂದ ಕೊನೆಯಾಗದ ಅಸ್ಪೃಶ್ಯತೆ’

ವಿಮರ್ಶಕ ಡಾ.ಶಶಿಕುಮಾರ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:32 IST
Last Updated 17 ಸೆಪ್ಟೆಂಬರ್ 2021, 4:32 IST
ಡಾ.ಶಶಿಕುಮಾರ್‌
ಡಾ.ಶಶಿಕುಮಾರ್‌   

ಮೈಸೂರು:‘ಭಕ್ತಿಯಲ್ಲಿ ಜಾತಿ–ವರ್ಗಗಳು ಅಳಿಸಿ ಹೋಗಬೇಕು. ಭಕ್ತಿ ಪಂಥಗಳು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರೂ ಅಸ್ಪೃಶ್ಯತೆ ಇನ್ನೂ ನಶಿಸಿಲ್ಲ’ ಎಂದು ವಿಮರ್ಶಕ ಡಾ.ಶಶಿಕುಮಾರ್‌ ವಿಷಾದಿಸಿದರು.

ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ‘ಭಕ್ತಿಯ ಅನುವಾದಗಳು: ಆಧುನಿಕ ರಾಜಕೀಯ ವಾಗ್ವಾದಗಳ ನೆಲೆಯಲ್ಲಿ’ ಕುರಿತು ಅವರು ಮಾತನಾಡಿದರು.

‘ಭಕ್ತಿಗೆ ರಾಜಕೀಯ ಆಯಾಮವೂ ಇದೆ. ಜನಾಂಗೀಯತೆ ಹಾಗೂ ಗಂಡಾಳಿಕೆಗಳು ಭಕ್ತಿಯ ಮೂಲಕವೇ ಮುಂದುವರಿದಿರುವುದು ವಿಪರ್ಯಾಸ’ ಎಂದರು.

ADVERTISEMENT

‘ನಗರಗಳಲ್ಲಿ ಜಾತಿ– ವರ್ಗ– ಲಿಂಗಗಳು ಅಳಿಸಿಹೋಗಬೇಕು ಎಂದು ಅಂಬೇಡ್ಕರ್‌ ಬಯಸಿದ್ದರು. ಹೀಗಾಗಿಯೇ ಅವರು ಸಂತ ರವಿದಾಸರ ಬೇಗಂಪುರವನ್ನು ಇಷ್ಟಪಡುತ್ತಿದ್ದರು. ಅಲ್ಲಿ ಜಾತಿ, ಗುಡಿ– ಮಸೀದಿಗಳು ಇರಲಿಲ್ಲ. ಭಾರತದ ಎಲ್ಲ ನಗರಗಳು ಬೇಗಂಪುರವಾಗಬೇಕು’ ಎಂದರು.

‘ ಬ್ರಾಹ್ಮಣವಾದಿ ಚೌಕಟ್ಟಿನಲ್ಲಿಯೇ ಕನ್ನಡ ಸಾಹಿತ್ಯದ ಅಧ್ಯಯನ ನಡೆದಿದೆ. ಭಕ್ತಿಯನ್ನು ಅದೇ ಪರಿಭಾಷೆಯಲ್ಲಿ ನೋಡಲಾಗುತ್ತಿದೆ. ದಲಿತ ಕೇಂದ್ರಿತವಾಗಿ ಸಾಹಿತ್ಯ ಕಥನಗಳು ಹಾಗೂ ವಿಮರ್ಶಾ ನೋಟಗಳು ಬೆಳವಣಿಗೆಯಾದದ್ದೇ ಇತ್ತೀಚೆಗೆ. ಎಲ್ಲ ಭಕ್ತಿ ಪಂಥಗಳನ್ನು ದಲಿತ ಅಸ್ಮಿತೆಯ ಆಧಾರದಲ್ಲಿ ಅಧ್ಯಯನ ನಡೆಸಬೇಕು’ ಎಂದು ಪ್ರತಿಪಾದಿಸಿದರು.

ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮ ಶೆಟ್ಟಿ, ಹಿರಿಯ ಫೆಲೋ ಡಾ.ಸಣ್ಣಪಾಪಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.