ADVERTISEMENT

ಒಂದೇ ದಿನ ಮುಖ್ಯ ಪರೀಕ್ಷೆ: ಆತಂಕ

ಪರೀಕ್ಷಾ ದಿನಾಂಕ ಮುಂದೂಡುವಂತೆ ವಾಣಿಜ್ಯ ಪದವೀಧರರ ಒತ್ತಡ

ಡಿ.ಬಿ, ನಾಗರಾಜ
Published 19 ನವೆಂಬರ್ 2020, 21:22 IST
Last Updated 19 ನವೆಂಬರ್ 2020, 21:22 IST

ಮೈಸೂರು: ಕೇಂದ್ರದ ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್‌ಐ), ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಹಾಗೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಒಂದೇ ದಿನ ವಿವಿಧ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ಆಯೋಜಿಸಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲ ಮತ್ತು ಆತಂಕ ಮೂಡಿಸಿದೆ.

ಐಸಿಎಸ್‌ಐ ಡಿ.21ರಿಂದ 30ರವರೆಗೆ ಕಂಪನಿ ಸೆಕ್ರೆಟರಿ ಹುದ್ದೆಗಳಿಗೆ, ಎಸ್‌ಎಸ್‌ಸಿ ’ಸಿ’ ಮತ್ತು ‘ಡಿ’ ದರ್ಜೆಯ ಸ್ಟೆನೊಗ್ರಾಫರ್‌ ಹುದ್ದೆಗಳಿಗೆ ಡಿ.24ರಿಂದ 30ರವರೆಗೆ ಮುಖ್ಯ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿವೆ.

ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯ 54 ಸಹಾಯಕ ನಿಯಂತ್ರಕರ ಹುದ್ದೆಗಳಿಗಾಗಿ, ಡಿ.21ರಿಂದ 24ರವರೆಗೆ ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಕೂಡ ನ.8ರಂದು ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು, 950 ವಾಣಿಜ್ಯ ಪದವೀಧರ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ.

ADVERTISEMENT

ಸಿಎಸ್‌ ಪರೀಕ್ಷೆಯ ಜೊತೆಜೊತೆಗೆ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ ಮುಖ್ಯ ಪರೀಕ್ಷೆಗೂ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದು, ಯಾವ ಪರೀಕ್ಷೆಯನ್ನು ಎದುರಿಸಬೇಕು ಎಂಬುದು ಅವರ ಪ್ರಶ್ನೆಯಾಗಿದೆ.

‘ಪರೀಕ್ಷೆ ತಯಾರಿಗಾಗಿಯೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಯಲಪಾರಹಟ್ಟಿಯಿಂದ ಧಾರವಾಡಕ್ಕೆ ಬಂದಿದ್ದೇನೆ. ಒಂದೇ ಸಮಯದಲ್ಲಿ ಎರಡು ಪರೀಕ್ಷೆ ಬರೆಯಲು ಹೇಗೆ ಸಾಧ್ಯ? ಮೂರು ವರ್ಷದ ಬಳಿಕ ಲೆಕ್ಕ ಪರಿಶೋಧನಾ ಇಲಾಖೆಯು ಹುದ್ದೆ ಭರ್ತಿಗೆ ಮುಂದಾಗಿದೆ. ಇದೀಗ ಅವಕಾಶ ತಪ್ಪಿದರೆ, ಮತ್ತೆಷ್ಟು ವರ್ಷ ಕಾಯಬೇಕೋ?’ ಎಂದು ನಾಗರಾಜ ಗಸ್ತಿ ಆತಂಕ ವ್ಯಕ್ತಪಡಿಸಿದರು.

‘ಮೂರು ವರ್ಷದಿಂದ ತಯಾರಿ ನಡೆಸಿದ್ದೆವು. ಕೆಪಿಎಸ್‌ಸಿ ಕೂಡ ಪ್ರತ್ಯೇಕ ದಿನಗಳಲ್ಲಿ ಪರೀಕ್ಷೆ ನಡೆಸಿದರೆ, ನಮಗೆ ಒಂದು ಅವಕಾಶವನ್ನು ಹೆಚ್ಚಿಗೆ ಕೊಟ್ಟಂತಾಗುತ್ತದೆ’ ಎನ್ನುತ್ತಾರೆ ಮೈಸೂರಿನ ಉದ್ಯೋಗಾಕಾಂಕ್ಷಿ ಸಿ.ಉಮೇಶ್‌.

‘ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳು ಏಕಕಾಲಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ, ಕೆಪಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಆದರೆ, ಕೆಎಎಸ್‌ ಮುಖ್ಯಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿದೆ. ಗುರುವಾರ ಕೆಪಿಎಸ್‌ಸಿಯ 9 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿದೆ. ಕೆಲವು ಔಟ್ ಆಫ್‌ ಸರ್ವಿಸ್‌ ಎಂದರೆ, ಇನ್ನೊಂದೆರಡು ಸದಾ ಬ್ಯುಸಿ ಬರುತ್ತಿದ್ದವು. ತಾಂತ್ರಿಕ ವಿಭಾಗದ ದೂರವಾಣಿ ಸಂಪರ್ಕ ಲಭ್ಯವಾಯ್ತು. ಅವರು ಸಹಾಯವಾಣಿ ಸಂಪರ್ಕಿಸುವಂತೆ ಸೂಚಿಸಿದರು. ಆದರೆ ಸಹಾಯವಾಣಿಯ ಸಹಾಯ ನನಗೆ ಸಿಗಲೇ ಇಲ್ಲ’ ಎಂದು ಬೆಂಗಳೂರಿನಲ್ಲಿ ಕೋಚಿಂಗ್ ಪಡೆದು, ಅಲ್ಲಿಯೇ ಪರೀಕ್ಷೆಗಾಗಿ ಓದುತ್ತಿರುವ ಕೋಲಾರದ ಎಂ.ಎಸ್.ಪವಿತ್ರಾ ‘ಪ್ರಜಾವಾಣಿ’ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು.

ಸಿಎಸ್‌ ಹಾಗೂ ಸಹಾಯಕ ನಿಯಂತ್ರಕರು ಎರಡೂ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಸಜ್ಜಾಗಿರುವ ಶಿವಮೊಗ್ಗದ ರವೀಶ್‌ ಕೂಡ ಇದೇ ಸ್ಥಿತಿಯಲ್ಲಿದ್ದು, ಕೆಎಎಸ್‌, ಐಎಎಸ್‌ ಪರೀಕ್ಷೆ ಬರೆಯುವವರಿಗೆ ಮಾತ್ರ ಒಂದು ತಿಂಗಳು ಅವಕಾಶ ಕೊಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಪರೀಕ್ಷಾರ್ಥಿಗಳಲ್ಲಿನ ಗೊಂದಲದ ಕುರಿತಂತೆ ಅಧಿಕಾರಿಗಳ ಪ್ರತಿಕ್ರಿಯೆಗಾಗಿ, ಕೆಪಿಎಸ್‌ಸಿ ಕಚೇರಿಯ ಸ್ಥಿರ ದೂರವಾಣಿ ಹಾಗೂ ಸಹಾಯವಾಣಿಗೆ ಕರೆ ಮಾಡಲಾಯಿತು. ಯಾರೊಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.