ADVERTISEMENT

ಆನ್‌ಲೈನ್‌ ಶಿಕ್ಷಣಕ್ಕೆ ‘ವಿದ್ಯಾಗಮ’ ಸೆಡ್ಡು

ಸರ್ಕಾರಿ ಶಾಲೆಯ ಮಕ್ಕಳಿಗೂ ಸಿಗುತ್ತಿದೆ ಶಿಕ್ಷಣ; ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ, ಪೋಷಕರ ಹರ್ಷ

ಕೆ.ಎಸ್.ಗಿರೀಶ್
Published 3 ಸೆಪ್ಟೆಂಬರ್ 2020, 8:34 IST
Last Updated 3 ಸೆಪ್ಟೆಂಬರ್ 2020, 8:34 IST
ರಾಮೇನಹಳ್ಳಿಯ (ಕೆ.ನಾಗನಹಳ್ಳಿ) ಅರಳಿಕಟ್ಟೆಯಲ್ಲಿ ಮಕ್ಕಳಿಗೆ ಪಾಠ ಹೇಳಿದ ಶಿಕ್ಷಕಿ ಭಾಗ್ಯಾ (ಎಡಚಿತ್ರ). ಮಕ್ಕಳಿಗೆ ಪಾಠ ಹೇಳಿದ ಮುಖ್ಯ ಶಿಕ್ಷಕ ಎಸ್‌.ಪಿ.ರಾಮಚಂದ್ರಪ್ಪ
ರಾಮೇನಹಳ್ಳಿಯ (ಕೆ.ನಾಗನಹಳ್ಳಿ) ಅರಳಿಕಟ್ಟೆಯಲ್ಲಿ ಮಕ್ಕಳಿಗೆ ಪಾಠ ಹೇಳಿದ ಶಿಕ್ಷಕಿ ಭಾಗ್ಯಾ (ಎಡಚಿತ್ರ). ಮಕ್ಕಳಿಗೆ ಪಾಠ ಹೇಳಿದ ಮುಖ್ಯ ಶಿಕ್ಷಕ ಎಸ್‌.ಪಿ.ರಾಮಚಂದ್ರಪ್ಪ   

ಮೈಸೂರು: ಖಾಸಗಿ ಶಾಲೆಗಳ ಆನ್‌ಲೈನ್‌ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳ ‘ವಿದ್ಯಾಗಮ ನಿರಂತರ ಕಲಿಕೆ’ ಯೋಜನೆ ಸೆಡ್ಡು ಹೊಡೆದಿದೆ. ಸರ್ಕಾರಿ ಶಾಲೆಯ ಮಕ್ಕಳೂ ಖಾಸಗಿ ಶಾಲೆಗಳ ಮಕ್ಕಳಿಗೆ ಸರಿಸಮನಾದ ಪಾಠ–ಪ್ರವಚನ ಕೇಳುವಂತೆ ಮಾಡುವಲ್ಲಿ ಇದು ಸಫಲವಾಗಿದೆ.

ಆಗಸ್ಟ್ 8ರಿಂದ ಜಾರಿಗೆ ಬಂದ ಈ ಯೋಜನೆಗೆ ಮಕ್ಕಳಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರೂ ಕಲಿಕೆಯಲ್ಲಿ ತಮ್ಮನ್ನು ತಾವು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದು, ಆನ್‌ಲೈನ್‌ ಶಿಕ್ಷಣ ಕೈಗೆಟುಕುತ್ತಿಲ್ಲ ಎಂಬ ಕೊರಗಿನಲ್ಲಿದ್ದ ಪೋಷಕರಿಗೂ ಈಗ ಸಮಾಧಾನ ತರಿಸಿದೆ.

ಈ ಕುರಿತು ಮಾತನಾಡಿದ ರಾಮೇನಹಳ್ಳಿಯ (ಕೆ.ನಾಗನಹಳ್ಳಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಆರ್‌.ಭಾಗ್ಯಾ, ‘ಮಕ್ಕಳಿಗೆ ದೇವಸ್ಥಾನದ ಆವರಣದಲ್ಲಿ, ಅರಳಿಕಟ್ಟೆಯ ಬಳಿ, ಅವರವರ ಮನೆಯ ಪಡಸಾಲೆಗಳ ಮೇಲೆಯೇ ಕಲಿಸಲಾಗುತ್ತಿದೆ. ಶಾಲಾ ಕೊಠಡಿಯಲ್ಲಿರುವುದಕ್ಕಿಂತ ಹೆಚ್ಚು ಆಸಕ್ತಿಯಿಂದ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ’ ಎಂದುತಿಳಿಸಿದರು.

ADVERTISEMENT

‌ಶಾಲಾ ಕೊಠಡಿಯಲ್ಲಿ ಮಕ್ಕಳಿಗೆ ಒಂದು ವಿಧದ ಜೈಲಿನಂತಹ ವಾತಾವರಣ ಇರುತ್ತದೆ. ಆದರೆ, ಬಯಲಿನಲ್ಲಿ ಮುಕ್ತವಾದ ವಾತಾವರಣ ಇರುವುದರಿಂದ ಅದರಲ್ಲೂ ಪರಿಸರದ ಮಧ್ಯೆ ಕಲಿಯುವುದು ಒಂದು ಬಗೆಯ ವಿಶಿಷ್ಟ ಅನುಭವವನ್ನು ಅವರಿಗೆ ತಂದಿದೆ. ಹೀಗಾಗಿ, ಮಕ್ಕಳು ಹೆಚ್ಚು ಉತ್ಸಾಹದಿಂದ ಒಂದು ದಿನವೂ ತಪ್ಪದೇ ಕಲಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.

‘ನಮ್ಮ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 26 ಮಕ್ಕಳು ಇದ್ದಾರೆ. ಇವರಿಗೆ ಮಾತ್ರವಲ್ಲ ನೆಂಟರ ಮನೆಗೆ ಬಂದ ಬೇರೆ ಊರಿನ ಮಕ್ಕಳಿಗೂ ನಾವು ಕಲಿಸುತ್ತಿದ್ದೇವೆ. ಇಂತಹ 8 ಮಕ್ಕಳು ಕಲಿಕೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಭಾಗ್ಯಾ ಹೇಳಿದರು.

ಶಿಕ್ಷಕರು ತಮ್ಮಲ್ಲಿರುವ ಸ್ಮಾರ್ಟ್‌ ಫೋನ್‌ ಮೂಲಕವೇ ಪಠ್ಯಕ್ಕೆ ಸಂಬಂಧಿಸಿದ ವಿವಿಧ ವಿಡಿಯೊಗಳನ್ನು ತೋರಿಸುತ್ತಾರೆ. ಇದು ತಮ್ಮಲ್ಲಿ ಸ್ಮಾರ್ಟ್‌ಫೋನ್ ಇಲ್ಲ ಎನ್ನುವ ಕೊರಗನ್ನು ನೀಗಿಸುತ್ತದೆ. ಪೋಷಕರೂ ಇದರಿಂದ ಖುಷಿಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಎಸ್‌.ಪಿ.ರಾಮಚಂದ್ರಪ್ಪ ತಿಳಿಸಿದರು.

ಬಹಳಷ್ಟು ಶಿಕ್ಷಕರು ಬಸ್ಸಿನಲ್ಲೇ ಹೋಗುವುದರಿಂದ ಬಯಲಿನಲ್ಲಿಯೇ ಕಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಕೊರೊನಾ ಸೋಂಕಿನ ಭೀತಿ ಇದ್ದೇ ಇದೆ. ಇದರ ಮಧ್ಯೆಯೂ ಮಕ್ಕಳು ಕಲಿಕೆಯಲ್ಲಿ ತೊಡಗಿಕೊಂಡಿರುವುದು ಸಮಾಧಾನಕರ ವಿಷಯವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.