ADVERTISEMENT

ಮತದಾನ ಜಾಗೃತಿಗೆ ಕಸರತ್ತು

ಮೃಗಾಲಯದಲ್ಲಿ ಸೆಲ್ಫಿ ಮೂಲಕ ಜಾಗೃತಿ, ‘ವೋಟ್ ಇಂಡಿಯಾ’ ಜಾಗೃತಿ ಹಾಡು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 17:34 IST
Last Updated 7 ಏಪ್ರಿಲ್ 2019, 17:34 IST
ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಭಾನುವಾರ ಚಾಮರಾಜೇಂದ್ರ ಮೃಗಾಲಯದಲ್ಲಿ ಮತದಾನದ ಜಾಗೃತಿಗಾಗಿ ನಿರ್ಮಿಸಲಾದ ‘ಕಾರ್ಟೂನ್‌ಗಳ ಸೆಲ್ಫೀ ಪಾಯಿಂಟ್‌’ಗಳನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಉದ್ಘಾಟಿಸಿದರು.
ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಭಾನುವಾರ ಚಾಮರಾಜೇಂದ್ರ ಮೃಗಾಲಯದಲ್ಲಿ ಮತದಾನದ ಜಾಗೃತಿಗಾಗಿ ನಿರ್ಮಿಸಲಾದ ‘ಕಾರ್ಟೂನ್‌ಗಳ ಸೆಲ್ಫೀ ಪಾಯಿಂಟ್‌’ಗಳನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಉದ್ಘಾಟಿಸಿದರು.   

ಮೈಸೂರು: ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ವಿವಿಧ ಬಗೆಯಕಸರತ್ತು ನಡೆಸಿದೆ. ಒಂದೆಡೆ ಭಾನುವಾರ ಚಾಮರಾಜೇಂದ್ರ ಮೃಗಾಲಯದಲ್ಲಿ ಕಾರ್ಟೂನ್‌ಗಳ ಸೆಲ್ಫೀ ಪಾಯಿಂಟ್‌ಗಳನ್ನು ನಿರ್ಮಿಸಿದರೆ, ಮತ್ತೊಂದೆಡೆ ಜಿಲ್ಲಾ ಸ್ವೀಪ್ ಸಮಿತಿ ‘ವೋಟ್ ಇಂಡಿಯಾ’ ಎಂಬ ವಿಡಿಯೊ ಹಾಡನ್ನು ಶನಿವಾರ ಅರಮನೆ ವೇದಿಕೆಯಲ್ಲಿ ಬಿಡುಗಡೆ ಮಾಡಿದೆ.

ಇಲ್ಲಿ ವಿವಿಧ ವಿನ್ಯಾಸಗಳ ಕಾರ್ಟೂನ್‌ಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಮುಖ ಇಡುವುದಕ್ಕೆ ಜಾಗಗಳಿವೆ. ಇಲ್ಲಿ ಮಕ್ಕಳು ಮುಖ ಇಟ್ಟರೆ ಕಾರ್ಟೂನ್‌ಗಳ ಮಧ್ಯೆ ಮುಖ ಕಾಣಿಸುತ್ತದೆ. ಇಂತಹ ಕಾರ್ಟೂನ್‌ಗಳು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಇವುಗಳಲ್ಲಿ ಮುಖ ಹಾಕುವ ತಮ್ಮ ಮಕ್ಕಳ ಚಿತ್ರಗಳನ್ನು ಪೋಷಕರು ಮೊಬೈಲ್‌ಗಳಲ್ಲಿ ಸೆರೆ ಹಿಡಿಯತ್ತಾರೆ.

ಈ ಕಾರ್ಟೂನ್‌ಗಳ ಸುತ್ತಮುತ್ತ ಮತದಾನ ಜಾಗೃತಿ ಕುರಿತ ಬರಹಗಳನ್ನು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ. ಚಿತ್ರ ತೆಗೆಯುವಾಗ ಇದನ್ನು ಓದುವ ಪೋಷಕರಲ್ಲಿ ಮತದಾನ ಮಾಡುವ ಸಂಬಂಧ ಅರಿವು ಮೂಡುತ್ತದೆ ಎಂಬುದು ಜಿಲ್ಲಾಡಳಿತದ ಲೆಕ್ಕಾಚಾರ.

ADVERTISEMENT

ಈ ಕಾರ್ಟೂನ್‌ಗಳಲ್ಲಿನ ‘ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡೋಣ’, ‘ ಆಮಿಷಗಳನ್ನು ನಿರಾಕರಿಸಿ ನಿಮ್ಮಿಷ್ಟದಂತೆ ಹಕ್ಕು ಚಲಾಯಿಸಿ’ ಎಂಬ ಬರಹಗಳು ಹೆಚ್ಚು ಗಮನ ಸೆಳೆಯುತ್ತವೆ.

ಈ ಕಾರ್ಟೂನ್ ‘ಸೆಲ್ಫೀ ಪಾಯಿಂಟ್‌’ನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ‘ಚಾಮುಂಡಿಬೆಟ್ಟ ಹಾಗೂ ಅರಮನೆಯಲ್ಲಿಯೂ ‘ಕಾರ್ಟೂನ್ ಸೆಲ್ಫಿ ಪಾಯಿಂಟ್’ ತೆರೆಯಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ‘ಸ್ವೀಪ್’ ಸಮಿತಿ ಕಾರ್ಯದರ್ಶಿ ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಕಾಶ್, ಸಹಾಯಕ ಸಾಂಖ್ಯಿಕ ಅಧಿಕಾರಿ ಪ್ರವೀಣ್ ಇದ್ದರು.

‘ವೋಟ್ ಇಂಡಿಯಾ’ ಹಾಡು:

ಮೈಸೂರು ಜಿಲ್ಲಾ ‘ಸ್ವೀಪ್’ ಸಮಿತಿ ‘ವೋಟ್ ಇಂಡಿಯಾ’ ಹಾಡನ್ನು ಶನಿವಾರ ಅರಮನೆ ವೇದಿಕೆಯಲ್ಲಿ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಬಿಡುಗಡೆಗೊಳಿಸಿದರು.

‘ಸ್ವೀಪ್’ ಸಮಿತಿ ಕಾರ್ಯಕ್ರಮದ ‘ಐಕಾನ್’ ಆಗಿರುವ ಗಾಯಕ ಶ್ರೀಹರ್ಷ ಅವರು ರಚಿಸಿ, ನಿರ್ದೇಶಿಸಿರುವ ಈ ವಿಡಿಯೊ ಗೀತೆಯಲ್ಲಿ ‘ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು’ ಎಂಬ ಸಂದೇಶ ಇದೆ.

ಹೊಸ ರೀತಿಯಲ್ಲಿ ಜನರನ್ನು ಈ ಹಾಡು ತಲುಪಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರನ್ನು ತಲುಪಲಿದೆ. ಸರಳವಾದ ನೃತ್ಯವನ್ನು ಒಳಗೊಂಡಿದೆ ಎಂದು ಜ್ಯೋತಿ ತಿಳಿಸಿದರು.

ಈ ಗೀತೆಯ ನಂತರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಗೂ ಜ್ಯೋತಿ ಅವರ ಸಂದೇಶಗಳು ಸಹ ಪ್ರಸಾರವಾಗುತ್ತದೆ.

ಯುವ ಸಮೂಹ ಹಾಗೂ ವಿದ್ಯಾರ್ಥಿಗಳು ‘ವೋಟ್ ಇಂಡಿಯಾ’ ಹಾಡನ್ನು ಅದೇ ರಾಗದಲ್ಲಿ ವಿವಿಧ ರೀತಿಯ ಮೊಬೈಲ್ ಆ್ಯಪ್‌ಗಳಾದ ‘ಟಿಕ್ ಟಾಕ್’ , ‘ಲೈಕ್ ಆ್ಯಪ್’ ಹಾಗೂ ‘ಡಬ್ಸ್ ಸ್ಮ್ಯಾಸ್’ ಗಳಲ್ಲಿ ಪ್ರಯೋಗಗಳನ್ನು ಮಾಡಬಹುದು. ಇದರಿಂದ ಹೆಚ್ಚು ಜನರನ್ನು ತಲುಪುವ ಗುರಿ ಹೊಂದಲಾಗಿದೆ.

Facebook page: DEOSVEEPMYSURU ಲಿಂಕ್- https://www.facebook.com/2253786581506211/posts/2268460403372162?sfns=cl ಹಾಗೂ YouTube Channel - *HARSHADHWANI* ಬಳಸುವ ಮೂಲಕ ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.