ADVERTISEMENT

ಮೈಸೂರು: ಕೆರೆ ಒತ್ತುವರಿ ತೆರವಿಗೆ ತಾಕೀತು

ಕ್ರಮ ವಹಿಸದಿದ್ದಲ್ಲಿ ಅಧಿಕಾರಿಗಳ ಮೇಲೆ ಶಿಸ್ತುಕ್ರಮ: ಎಡಿಸಿ ಶಿವರಾಜು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 14:56 IST
Last Updated 21 ಫೆಬ್ರುವರಿ 2025, 14:56 IST
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ‘ಜಿಲ್ಲಾ ಸರ್ಕಾರಿ ಕೆರೆ ಸಂರಕ್ಷಣಾ ಕಾರ್ಯಪಡೆ’ಯ ಕೆರೆ ಸಂರಕ್ಷಣೆ ಕುರಿತ ಸಭೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ‍ಪಿ.ಶಿವರಾಜು ನಡೆಸಿದರು. ಯು.ಎನ್‌.ರವಿಕುಮಾರ್, ಎಂ.ಕೃಷ್ಣರಾಜು ಹಾಗೂ ಇತರರು ಪಾಲ್ಗೊಂಡಿದ್ದರು
ಮೈಸೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ‘ಜಿಲ್ಲಾ ಸರ್ಕಾರಿ ಕೆರೆ ಸಂರಕ್ಷಣಾ ಕಾರ್ಯಪಡೆ’ಯ ಕೆರೆ ಸಂರಕ್ಷಣೆ ಕುರಿತ ಸಭೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ‍ಪಿ.ಶಿವರಾಜು ನಡೆಸಿದರು. ಯು.ಎನ್‌.ರವಿಕುಮಾರ್, ಎಂ.ಕೃಷ್ಣರಾಜು ಹಾಗೂ ಇತರರು ಪಾಲ್ಗೊಂಡಿದ್ದರು   

ಮೈಸೂರು: ‘ಜಿಲ್ಲೆಯ ಎಲ್ಲ ಕೆರೆಗಳ ಒತ್ತುವರಿ ಶೀಘ್ರದಲ್ಲೇ ತೆರವು ಮಾಡಬೇಕು. ಮಾರ್ಚ್ ಒಳಗೆ ಸರ್ವೆ ಅಳತೆ ಮಾಡಿಸಬೇಕು. ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ‘ಜಿಲ್ಲಾ ಸರ್ಕಾರಿ ಕೆರೆ ಸಂರಕ್ಷಣಾ ಕಾರ್ಯಪಡೆ’ಯ ಕೆರೆ ಸಂರಕ್ಷಣೆ ಕುರಿತ ಸಭೆಯಲ್ಲಿ ಮಾತನಾಡಿದರು. 

‘ಜಿಲ್ಲೆಯಲ್ಲಿ ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಪೌರಾಡಳಿತ, ಸಣ್ಣ ನೀರಾವರಿ ಇಲಾಖೆಗಳ ವ್ಯಾಪ್ತಿಯಲ್ಲಿ 2,991 ಕೆರೆಗಳಿದ್ದು, 2,568 ಕೆರೆಗಳ ಅಳತೆಯಷ್ಟೇ ಮಾಡಲಾಗಿದೆ. ಉಳಿದ 423 ಕೆರೆಗಳ ಸರ್ವೆ ಮಾಡಿಸಬೇಕು’ ಎಂದು ಭೂದಾಖಲೆಗಳ ಉಪನಿರ್ದೇಶಕರಿಗೆ ಸೂಚನೆ ನೀಡಿದರು. 

ADVERTISEMENT

‘1,229 ಕೆರೆಗಳು ಒತ್ತುವರಿಯಾಗಿದ್ದು, 805 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. 424 ಕೆರೆಗಳ ಆಕ್ರಮಿಸಿಕೊಂಡಿರುವವರನ್ನು ಕಾರ್ಯಯೋಜನೆ ರೂಪಿಸಿಕೊಂಡು ತೆರವು ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಕಲುಷಿತ ನೀರು ತಡೆಗೆ ಕ್ರಮವಹಿಸಿ: ‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ನೀರಿನ ವರ್ಗೀಕರಣ ಗಮನಿಸಿ, ಮೈಸೂರು ನಗರ ವ್ಯಾಪ್ತಿಯಲ್ಲಿ ‘ಇ’, ‘ಡಿ’ ದರ್ಜೆಯಲ್ಲಿರುವ ಕೆರೆಗಳನ್ನು ‘ಎ’, ‘ಬಿ’ ಹಂತಕ್ಕೆ ತರಲು ತ್ಯಾಜ್ಯ ನೀರು ಸೇರದಂತೆ ಕ್ರಮ ವಹಿಸಬೇಕು’ ಎಂದು ಶಿವರಾಜು ಹೇಳಿದರು. 

‘ಕುಕ್ಕರಹಳ್ಳಿ, ದಳವಾಯಿ, ಹೆಬ್ಬಾಳ, ಲಿಂಗಾಂಬುಧಿ ಕೆರೆಯಲ್ಲಿನ ಮಾಲಿನ್ಯ ನೀರು ಯಥಾಸ್ಥಿತಿಯಲ್ಲಿಯೇ ಇದೆ’ ಎಂದರು.

ಲಕ್ಷ್ಮಣತೀರ್ಥ ಕಲುಷಿತ: ‘ಹುಣಸೂರಿನ ಒಳಚರಂಡಿ ತ್ಯಾಜ್ಯ ನೀರನ್ನು ಕಲ್ಕುಣಿಕೆ ನೀರು ಸಂಸ್ಕರಣಾ ಘಟಕಕ್ಕೆ ಹರಿಯುತ್ತಿದೆ. ಸಣ್ಣ ಎಸ್‌ಟಿಪಿ ಹಾಗೂ ಶಬ್ಬೀರ್ ನಗರದ ತ್ಯಾಜ್ಯ ನೀರು ಲಕ್ಷ್ಮಣತೀರ್ಥ ನದಿ ಸೇರುತ್ತಿದೆ’ ಎಂದು ಹುಣಸೂರು ನಗರಸಭೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. 

‘ನಂಜನಗೂಡು ಪಟ್ಟಣದ ತ್ಯಾಜ್ಯ ನೀರು ಹುಲ್ಲಹಳ್ಳಿ ನಾಲೆಗೆ ಮಿಸ್ಸಿಂಗ್ ಲಿಂಕ್‌ ಮೂಲಕ ಹಾದುಹೋಗುತ್ತಿರುವುದರಿಂದ ನೀರಿನ ಮೂಲಗಳಿಗೆ ಸೇರಿ ಮಲಿನವಾಗುತ್ತಿದೆ’ ಎಂದರು.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದಿನೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಕೃಷ್ಣರಾಜು, ಜಲತಜ್ಞ ಯು.ಎನ್.ರವಿಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಕೆರೆ ಸಂರಕ್ಷಣೆ ಜೊತೆಗೆ ಜಿಲ್ಲಾಡಳಿತವು ವಸ್ತುಪ್ರದರ್ಶನ ಏರ್ಪಡಿಸಿ ಜಾಗೃತಿ ಮೂಡಿಸಬೇಕು.
–ಯು.ಎನ್‌.ರವಿಕುಮಾರ್, ಜಲತಜ್ಞ
ಮಕ್ಕಳು ದೊಡ್ಡವರಾದ ಮೇಲೆ ತಂದೆ– ತಾಯಿಯರನ್ನು ನೋಡಿಕೊಳ್ಳುವಂತೆ ಕೆರೆಗಳನ್ನು ಕಾಪಾಡಬೇಕು. ಕೆರೆ ಒತ್ತುವರಿಯಲ್ಲಿ ನಿರ್ಲಕ್ಷ್ಯ ಬೇಡ.
–ಪಿ.ಶಿವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ.

ಕಾವೇರಿ ನದಿ ಪಾತ್ರ ಕಲುಷಿತ

‘ರಂಗನತಿಟ್ಟು ಪಕ್ಷಿಧಾಮದಿಂದ ಸತ್ತೆಗಾಲ ಸೇತುವೆ ವರೆಗಿನ 50 ಕಿ.ಮೀ ಉದ್ದದ ಕಾವೇರಿ ನದಿ ಪಾತ್ರವನ್ನು ಕಲುಷಿತವೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದೆ’ ಎಂದು ಪರಿಸರ ಅಧಿಕಾರಿಗಳು ಗಮನಕ್ಕೆ ತಂದರು.

‘ಕೆರೆಗಳ ಮಾಲಿನ್ಯ ತಡೆಯದಿದ್ದರೆ ಕಾವೇರಿ ನದಿ ಪಾತ್ರ ಇನ್ನೂ ಕಲುಷಿತಗೊಳ್ಳುತ್ತದೆ. ಕೆಸರೆ ‍ಪ್ರದೇಶದಲ್ಲಿ 30 ಎಂಎಲ್‌ಡಿ ಸಾಮರ್ಥ್ಯದ ಕಲುಷಿತ ನೀರು ಶುದ್ಧೀಕರಣ ಘಟಕಕ್ಕೆ ತ್ಯಾಜ್ಯ ನೀರಿನ ಒಳ ಹರಿವು ಇಲ್ಲವಾಗಿದೆ. ಮಳೆ ನೀರು ಚರಂಡಿ ಮೂಲಕ 70 ಎಂಎಲ್‌ಡಿ ತ್ಯಾಜ್ಯ ನೀರು ವಿರಿಜಾ ನಾಲೆ ಮೂಲಕ ಕಾವೇರಿ ನದಿ ಸೇರುತ್ತಿದೆ’ ಎಂದು ಪಿ.ಶಿವರಾಜು ಆತಂಕ ವ್ಯಕ್ತಪಡಿಸಿದರು.

‘ಬನ್ನೂರಿನ ಚಾಮನಹಳ್ಳಿಯಲ್ಲಿರುವ 2.25 ಎಂಎಲ್‌ಡಿ ಸಾಮರ್ಥ್ಯದಿಂದ ಎಸ್‌ಟಿಪಿ ಘಟಕವನ್ನು 3.8 ಎಂಎಲ್‌ಡಿ ಸಾಮರ್ಥ್ಯಕ್ಕೆ ಉನ್ನತೀಕರಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಶೇ 90ರಷ್ಟು ಪೂರ್ಣಗೊಂಡಿದ್ದರೂ ತ್ಯಾಜ್ಯ ನೀರು ನದಿ ಸೇರುತ್ತಿದೆ’ ಎಂದರು. 

‘ರಾಜಕಾಲುವೆಗಳು ಮೋರಿಗಳಲ್ಲ’

‘ಕೆರೆಗಳನ್ನು ಸಂಪರ್ಕಿಸುವ ರಾಜಕಾಲುವೆಗಳನ್ನು ಒಳಚರಂಡಿ ತ್ಯಾಜ್ಯ ಹರಿಯುವ ಮೋರಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ಜಲತಜ್ಞ ಯು.ಎನ್‌.ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

‘ಕಬಿನಿ ಹಾಗೂ ಕಾವೇರಿ ನದಿ ಪಾತ್ರದ ಎತ್ತರ ಭೂಮಿ ಆಧರಿಸಿ ಕೆರೆ ಜಾಲ ವ್ಯಾಪಿಸಿದೆ. ಕಣಿವೆ ಕೊಲ್ಲಿಗಳಲ್ಲಿ ಒಳಚರಂಡಿ ನೀರು ಸೇರುತ್ತಿದೆ. ರಿಂಗ್ ರಸ್ತೆಯಲ್ಲಿರುವ ತಿಪ್ಪಯ್ಯನಕೆರೆ ಶುದ್ಧೀಕರಿಸಬೇಕು. ಲಿಂಗಾಂಬುಧಿ ಕೆರೆಗೆ ತ್ಯಾಜ್ಯ ನೀರು ಸೇರುವುದನ್ನು ತಡೆಯಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.