ADVERTISEMENT

ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿಷೇಧ ಇಂದಿನಿಂದ

‘ಪ್ಲಾಸ್ಟಿಕ್ ಮುಕ್ತ ಭಾರತ’ ಅಭಿಯಾನಕ್ಕೆ ಪ್ರಧಾನಿಯಿಂದ ಚಾಲನೆ

ಡಿ.ಬಿ, ನಾಗರಾಜ
Published 2 ಅಕ್ಟೋಬರ್ 2019, 5:19 IST
Last Updated 2 ಅಕ್ಟೋಬರ್ 2019, 5:19 IST

ಮೈಸೂರು: ಜೀವ ಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆ–ಮಾರಾಟಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ನಿಷೇಧ ಹೇರಿದೆ. ಅ.2ರ ಗಾಂಧಿ ಜಯಂತಿಯಂದು ಪ್ರಧಾನಿ ಮೋದಿ ‘ಪ್ಲಾಸ್ಟಿಕ್ ಮುಕ್ತ ಭಾರತ’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಂದರ್ಭ, 2014ರ ಅ.2ರ ಗಾಂಧಿ ಜಯಂತಿಯಂದು ಪ್ರಧಾನಿ ಮೋದಿ ‘ಸ್ವಚ್ಛ ಭಾರತ ಅಭಿಯಾನಕ್ಕೆ’ ಚಾಲನೆ ನೀಡಿದ್ದರು. ಸ್ವಚ್ಛತೆಗೆ ಕೈ ಜೋಡಿಸುವಂತೆ ಅವರು ಮಾಡಿದ್ದ ಮನವಿಗೆ, ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇಂದಿಗೂ ಈ ಅಭಿಯಾನ ಮುಂದುವರಿದಿದೆ.

‘ಸ್ವಚ್ಛ ಭಾರತ’ ಅಭಿಯಾನಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿತ್ತು. ಆದರೆ, ಪ್ಲಾಸ್ಟಿಕ್‌ ಹೊರತುಪಡಿಸಿದ ದಿನಚರಿಯನ್ನು ಊಹಿಸಿಕೊಳ್ಳಲು ಆಗದಷ್ಟು ಪ್ಲಾಸ್ಟಿಕ್‌ ಆವರಿಸಿದ್ದು, ಇಂಥ ಹೊತ್ತಿನಲ್ಲಿ ಪ್ಲಾಸ್ಟಿಕ್‌ ಮುಕ್ತ ಭಾರತಕ್ಕೆ ಎಷ್ಟರ ಮಟ್ಟಿಗಿನ ಬೆಂಬಲ ಸಿಗಲಿದೆ? ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ADVERTISEMENT

ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ತಡೆಯುವುದು ಸದ್ಯಕ್ಕೆ ಅಸಾಧ್ಯವಾದರೂ ಅದರ ಬಗ್ಗೆ ಜಾಗೃತಿ ಮೂಡಿಸಿ, ಜನರೇ ಖುದ್ದಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಮಾಡುವ ಪ್ರಯತ್ನ ನಗರದಲ್ಲಿ ತಿಂಗ ಳಿನಿಂದಲೂ ನಡೆದಿದೆ. ಅದಕ್ಕೆ ಸಾರ್ವ ಜನಿಕರಿಂದಲೂ ಬೆಂಬಲ ವ್ಯಕ್ತವಾಗಿದೆ.

ತಿಂಗಳಿನಿಂದಲೂ ಜಾಗೃತಿ ಜಾಥಾ

’ಮೈಸೂರು ಮಹಾನಗರ ಪಾಲಿಕೆ ಆಡಳಿತ ಸಹ ‘ಪ್ಲಾಸ್ಟಿಕ್‌ ಮುಕ್ತ ಮೈಸೂರು’ ನಿರ್ಮಾಣದತ್ತ ಹೆಜ್ಜೆ ಹಾಕಿದೆ. ಒಂದು ತಿಂಗಳಿನಿಂದಲೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಜೇಮ್ಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪಸಿಂಹ, ಮಕ್ಕಳು–ಅಧಿಕಾರಿಗಳು ಪ್ಲಾಸ್ಟಿಕ್‌ ಬಳಸದಂತೆ ಮಾಡುವ ಮನವಿಯುಳ್ಳ ತಲಾ 20 ಸೆಕೆಂಡ್‌ಗಳ ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಈಗಾಗಲೇ ಮೂರ್ನಾಲ್ಕು ಜಾಥಾ ನಡೆಸಲಾಗಿದೆ. ಬೀದಿ ನಾಟಕವನ್ನು ಪ್ರದರ್ಶಿಸಿ ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳನ್ನು ಬಿಂಬಿಸಲಾಗಿದೆ’ ಎಂದು ಹೇಳಿದರು.

ನೈರುತ್ಯ ರೈಲ್ವೆಯ ಮೈಸೂರು ವಿಭಾಗ ಈಗಾಗಲೇ ತನ್ನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ದಂಡ ಪ್ರಯೋಗಕ್ಕೂ ಮುಂದಾಗಿದೆ. ಮಹಾನಗರ ಪಾಲಿಕೆ ಸಹ ಈ ನಿಟ್ಟಿನಲ್ಲೇ ಹೆಜ್ಜೆ ಇಟ್ಟಿದೆ. ಇ–ಕಸ ಸಂಗ್ರಹವನ್ನೂ ಶುರು ಮಾಡಿದೆ. ಪ್ಲಾಸ್ಟಿಕ್‌ ಪರ್ಯಾಯ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.