ಸರ್ಕಾರಿ ಆಸ್ಪತ್ರೆ
ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿಗಾಗಿ ಸಮಸ್ಯೆ ಎದುರಾಗಿದ್ದು, ಡಯಾಲಿಸಿಸ್ ಪ್ರಕ್ರಿಯೆ ಮೇಲೂ ವ್ಯತಿರಿಕ್ತ ಪರಿಣಾಮ ಆಗುತ್ತಿದೆ ಎಂದು ಆರೋಪಿಸಲಾಗಿದೆ.
ಕೆಲ ಸಿಬ್ಬಂದಿಯು ನೀರಿನ ಕೊರತೆಯನ್ನು ತಿಳಿಸಿ, ಚಿಕಿತ್ಸೆಗೆ ಸಹಕರಿಸದೇ ಇರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಹರಿದಾಡಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುವುದರಿಂದ ನೀರಿನ ಸಮಸ್ಯೆ ಎದುರಾಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ಹೇಳುವುದು ವಿಡಿಯೊದಲ್ಲಿದೆ. ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿಯು, ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಆಸ್ಪತ್ರೆಗಳೆಲ್ಲಾ ಅನಾರೋಗ್ಯಕ್ಕೆ ಒಳಗಾಗಿವೆ. ಎಚ್.ಡಿ. ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ನೀರು, ವಿದ್ಯುತ್ ಇಲ್ಲದಿರುವುದರಿಂದ ಡಯಾಲಿಸಿಸ್ ರೋಗಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಕುರಿತು ಮುತುವರ್ಜಿ ವಹಿಸಬೇಕಾದ ಆರೋಗ್ಯ ಇಲಾಖೆ ಮತ್ತು ಸಚಿವರು ಗಾಢ ನಿದ್ರೆಗೆ ಜಾರಿದ್ದರಿಂದ ಅಸಹಾಯಕ ರೋಗಿಗಳು ಪರದಾಡುವಂತಾಗಿದೆ ಎಂದು ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.