ADVERTISEMENT

ಮೈಸೂರು ಜಿಲ್ಲೆಯಲ್ಲಿ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 16:16 IST
Last Updated 6 ಆಗಸ್ಟ್ 2021, 16:16 IST
ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದು, ಶನಿವಾರ ಮತ್ತು ಭಾನುವಾರ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್‌ ಬೀಳಲಿದೆ
ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದು, ಶನಿವಾರ ಮತ್ತು ಭಾನುವಾರ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್‌ ಬೀಳಲಿದೆ   

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ ಲಾಕ್‌ಡೌನ್‌ ತೆರವಾಗಿ ಜನಜೀವನ, ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲೇ ಮತ್ತೆ ನಿರ್ಬಂಧದ ಕರಿನೆರಳು ಬಿದ್ದಿದೆ.

ನೆರೆಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ (ಶನಿವಾರ ಮತ್ತು ಭಾನುವಾರ) ಜಾರಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಕೇರಳದ ಜತೆ ಗಡಿ ಹಂಚಿಕೊಂಡಿರುವುದರಿಂದ ಮೈಸೂರಿಗೂ ಅನ್ವಯವಾಗಿದೆ.

ಶುಕ್ರವಾರ ರಾತ್ರಿಯಿಂದಲೇ ಕರ್ಫ್ಯೂ ಜಾರಿಯಾಗಿದ್ದು, ಸೋಮವಾರ ಬೆಳಿಗ್ಗೆ 5ರ ವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ವಹಿವಾಟು ಹೊರತುಪಡಿಸಿ, ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ.

ADVERTISEMENT

ಕೋವಿಡ್‌ ಎರಡನೇ ಅಲೆ ಕಡಿಮೆಯಾದ ಬಳಿಕ ಅನ್‌ಲಾಕ್‌ ಪ್ರಕ್ರಿಯೆ ಹಂತಹಂತವಾಗಿ ನಡೆದಿತ್ತು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಮೈಸೂರಿನಲ್ಲಿ ಕೊನೆಯದಾಗಿ ಅನ್‌ಲಾಕ್‌ ಪ್ರಕ್ರಿಯೆ ನಡೆದಿತ್ತು. ಇದೀಗ ಹೊಸದಾಗಿ ನಿರ್ಬಂಧ ವಿಧಿಸಿರುವುದು ದಿನಗೂಲಿ ನೌಕರರು, ವ್ಯಾಪಾರಿಗಳನ್ನು ಚಿಂತೆಗೆ ದೂಡಿದೆ.

ಮೈಸೂರು ನಗರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿದ್ದ ಅವಧಿಯಲ್ಲೇ ವಾರಾಂತ್ಯ ಲಾಕ್‌ಡೌನ್‌ ಜಾರಿಯಾಗಿದೆ. ಇದರಿಂದ ಹೋಟೆಲ್‌ ಸೇರಿದಂತೆ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಉದ್ಯಮಗಳಿಗೆ ನಷ್ಟದ ಭೀತಿ ಆವರಿಸಿದೆ.

ಪ್ರವಾಸಿತಾಣ– ಇಂದು ನಿರ್ಧಾರ: ‘ಮೈಸೂರಿನ ಪ್ರವಾಸಿ ತಾಣಗಳು ತೆರೆದಿರಬೇಕೋ ಅಥವಾ ಮುಚ್ಚಬೇಕೋ ಎಂಬುದರ ಕುರಿತು ಆಗಸ್ಟ್ 7 ರ ಮಧ್ಯಾಹ್ನದ ಒಳಗಡೆ ಸಂಪೂರ್ಣ ವರದಿ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

‘ಲಾಕ್‌ಡೌನ್‌ನಿಂದ ಜನರಿಗೆ ತೊಂದರೆಯಾಗಿದೆ. ಹೀಗಾಗಿ, ಸಂಪೂರ್ಣ ಮುಚ್ಚುವುದು ಕಷ್ಟ. ಜನರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಎಲ್ಲರಿಗೂ ಅನುಕೂಲವಾಗುವ ರೀತಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಮೃಗಾಲಯ ಪ್ರವೇಶ ನಿರ್ಬಂಧ

‘ವಾರಾಂತ್ಯ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಆ.7 ಮತ್ತು 8 ರಂದು ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಉದ್ಯಾನವನವನ್ನು ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧಿಸಲಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಟೆಲ್ ಮಾಲೀಕರ ಸಂಘದ ವಿರೋಧ

ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿರುವ ಕ್ರಮವನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ ತೀವ್ರವಾಗಿ ವಿರೋಧಿಸಿದೆ.

‘ಮೈಸೂರಿನಲ್ಲಿ ಸುಮಾರು 1,500 ಮಂದಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದು, 25,000 ಕ್ಕೂ ನೌಕರರು ಇದ್ದಾರೆ. ವಾರಾಂತ್ಯ ಕರ್ಫ್ಯೂ ಜಾರಿಯಿಂದ ಉದ್ಯಮಕ್ಕೆ ನಷ್ಟ ಉಂಟಾಗಲಿದೆ’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಳೆದ ಒಂದೂವರೆ ವರ್ಷದಿಂದ ನಮ್ಮ ಉದ್ಯಮ ಈಗಾಗಲೇ ನೆಲಕಚ್ಚಿದೆ. ಅದನ್ನು ಇನ್ನಷ್ಟು ಪಾತಾಳಕ್ಕೆ ತಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವೇ ಅಲ್ಲ. ಪದೇ ಪದೇ ನಿರ್ಬಂಧ ವಿಧಿಸಿ ಜನರನ್ನು ಸಂಕಷ್ಟಕ್ಕೆ ದೂಡುವ ಬದಲು ಸರ್ಕಾರ ಪರ್ಯಾಯ ಕ್ರಮಗಳ ಜಾರಿಗೆ ಚಿಂತನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.