ADVERTISEMENT

ಎಸ್.ಟಿ.ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದ್ದರೆ ತಪ್ಪೇನು: ವಿಶ್ವನಾಥ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 7:27 IST
Last Updated 27 ಡಿಸೆಂಬರ್ 2020, 7:27 IST
ಅಡಗೂರು ಎಚ್‌. ವಿಶ್ವನಾಥ್‌
ಅಡಗೂರು ಎಚ್‌. ವಿಶ್ವನಾಥ್‌   

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟದ ಹಿಂದೆ ಆರ್‌ಎಸ್ಎಸ್‌ ಇದ್ದರೆ ತಪ್ಪೇನು? ಎಂದು ಪ್ರಶ್ನಿಸಿದ ವಿಧಾನಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್, ‘ಆರ್‌ಎಸ್‌ಎಸ್‌ನ್ನು ಈ ದೇಶದಲ್ಲಿ ನಿಷೇಧಿಸಿಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಹೇಳಿದರು.

‌ಇದು ಈಶ್ವರಪ್ಪ ಅಥವಾ ನನಗೆ ಪ್ರತಿಷ್ಠೆಯ ಹೋರಾಟವಲ್ಲ. ಸಮುದಾಯದ ಹೋರಾಟ ಇದಾಗಿದೆ. ಬೇಕಿದ್ದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನಾಯಕತ್ವ ವಹಿಸಿಕೊಳ್ಳಲಿ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು, ಮೇಲ್ವರ್ಗದವರೂ ಬೆಂಬಲ ನೀಡಲಿ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.‌

ಡಿ. 29ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಸಿದ್ದಾರ್ಥನಗರದ ಕನಕಭವನದಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಕುರುಬ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ. ಸಮುದಾಯದ ವಿದ್ಯಾರ್ಥಿಗಳು, ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕುರುಬರ ನಾಯಕತ್ವ ಒಡೆಯಲು ಆರ್‌ಎಸ್‌ಎಸ್‌ ಹುನ್ನಾರ– ಎಂ.ಕೆ.ಸೋಮಶೇಖರ್

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟವು ಕುರುಬರ ನಾಯಕತ್ವ ಒಡೆಯುವ ಆರ್‌ಎಸ್‌ಎಸ್‌ ಹುನ್ನಾರ ಎಂದು ಕಾಂಗ್ರೆಸ್ ಮುಖಂಡ (ಕೆ.ಆರ್.ಕ್ಷೇತ್ರದ ಮಾಜಿ ಶಾಸಕ) ಎಂ.ಕೆ.ಸೋಮಶೇಖರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ಹೋರಾಟ ಯಾರ ವಿರುದ್ಧ ಎಂಬುದನ್ನು ಮೊದಲು ಈಶ್ವರಪ್ಪ ಮತ್ತು ವಿಶ್ವನಾಥ್ ಬಹಿರಂಗಪಡಿಸಬೇಕು. ಅವರದೇ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿದೆ. ರಾಯಣ್ಣ ಬ್ರಿಗೇಡ್‌ನ್ನು ಅರ್ಧದಲ್ಲೆ ಕೈಬಿಟ್ಟಂತೆ ಈ ಹೋರಾಟವನ್ನು ಈಶ್ವರಪ್ಪ ಅರ್ಧದಲ್ಲೇ ಕೈಬಿಡುತ್ತಾರೆ ಎಂದರು.

ಪ್ರವರ್ಗ 2ಎ ವ್ಯಾಪ್ತಿಯಲ್ಲಿ ಶೇ 15ರಷ್ಟು ಮೀಸಲಾತಿ ಪಡೆಯುತ್ತಿರುವ ಕುರುಬ ಸಮುದಾಯವರು ಶೇ 3ರಷ್ಟು ಮಾತ್ರವೇ ಮೀಸಲಾತಿ ಇರುವ ಪರಿಶಿಷ್ಟ ಪಂಗಡಕ್ಕೆ ಹೋದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ಮಾತ್ರವೇ ಲಾಭವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.