ADVERTISEMENT

ಬರವಣಿಗೆ– ಬದುಕು ಗಟ್ಟಿಯಿರುವವರು ಅಪರೂಪ

ಮೈಸೂರು ವಿ.ವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 13:59 IST
Last Updated 11 ನವೆಂಬರ್ 2018, 13:59 IST
ಸಂವಹನ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ನಂದೀಶ ಹಂಚೆ ಅವರಿಗೆ ‘ಸಂವಹನ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ, ಸಾಹಿತಿ ಡಾ.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಡಿ.ಎನ್‌.ಲೋಕಪ್ಪ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ನಟರಾಜ ಶಿಕ್ಷಣ ಪ್ರತಿಷ್ಠಾನದ ಚಿದಾನಂದ ಸ್ವಾಮೀಜಿ, ಸಾಹಿತಿ ಪ್ರೊ.ಎನ್‌.ಎಂ.ತಳವಾರ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಬಿಜೆಪಿ ಮುಖಂಡ ತೋಂಟದಾರ್ಯ ಇದ್ದಾರೆ
ಸಂವಹನ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ನಂದೀಶ ಹಂಚೆ ಅವರಿಗೆ ‘ಸಂವಹನ ಸಿರಿ’ ಪ್ರಶಸ್ತಿ ಪ್ರದಾನ ಮಾಡಿ, ಸಾಹಿತಿ ಡಾ.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟಿನ ಅಧ್ಯಕ್ಷ ಡಿ.ಎನ್‌.ಲೋಕಪ್ಪ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ನಟರಾಜ ಶಿಕ್ಷಣ ಪ್ರತಿಷ್ಠಾನದ ಚಿದಾನಂದ ಸ್ವಾಮೀಜಿ, ಸಾಹಿತಿ ಪ್ರೊ.ಎನ್‌.ಎಂ.ತಳವಾರ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಬಿಜೆಪಿ ಮುಖಂಡ ತೋಂಟದಾರ್ಯ ಇದ್ದಾರೆ   

ಮೈಸೂರು: ಬರವಣಿಗೆ ಹಾಗೂ ಬದುಕಿನಲ್ಲಿಗಟ್ಟಿತನ ಉಳಿಸಿಕೊಂಡಿರುವವರು ಅಪರೂಪವಾಗುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್‌ ಅಭಿಪ್ರಾಯಪಟ್ಟರು.

ಸಂವಹನ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಿರಿಯ ಸಾಹಿತಿ ಡಾ.ರಾಮೇಗೌಡ (ರಾಗೌ) ಅವರಿಗೆ ಸನ್ಮಾನ ಹಾಗೂ ಸಾಹಿತಿ ಡಾ.ನಂದೀಶ ಹಂಚೆ ಅವರಿಗೆ ‘ಸಂವಹನ ಸಿರಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ರಾಗೌ ಅವರು ಬರವಣಿಗೆ ಹಾಗೂ ಬದುಕಿನಲ್ಲಿ ತೂಕವನ್ನು ಉಳಿಸಿಕೊಂಡಿದ್ದಾರೆ.ಇಂತವರು ಸಾಹಿತ್ಯ ಲೋಕದಲ್ಲಿ ಕಡಿಮೆಯಾಗುತ್ತಿದ್ದಾರೆ. ಲೇಖಕರ ವಲಯ ವಿಸ್ತಾರವಾಗುತ್ತಿದೆ. ಆದರೆ, ಘನತೆಯನ್ನು ಉಳಿಸಿಕೊಂಡವರ ಸಂಖ್ಯೆ ಕ್ಷೀಣಿಸುತ್ತಿದೆ. ಬದುಕು–ಬರಹಗಳೆರಡಲ್ಲೂ ಹಿರಿತನ, ಸತ್ವವನ್ನು ಉಳಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಸಂಶೋಧನಾ ಕ್ಷೇತ್ರಕ್ಕೆ ರಾಗೌ ಅವರನ್ನು ಸೀಮಿತಗೊಳಿಸಿದ್ದು ನೋವಿನ ಸಂಗತಿ. ಅಗಾಧ ಸಂಖ್ಯೆಯ ಕವಿತೆಗಳನ್ನು ರಚಿಸಿದ್ದಾರೆ. ನೋವನ್ನು ಮರೆಸುವ, ಮನಸನ್ನು ಹಗುರಗೊಳಿಸುವ ಶಕ್ತಿ ಇದೆ. ರಾಗೌ ಅವರೇ ಹೇಳುವಂತೆ ‘ಮಾತು– ಮೌನಗಳ ನಡುವೆ ತೆರೆದುಕೊಳ್ಳುವ ಆತ್ಮಾವಲೋಕನವೇ ಕಾವ್ಯ’ ಅರ್ಥಪೂರ್ಣವಾದ ವ್ಯಾಖ್ಯಾನ. ಇದು ಇವರ ಕವಿತೆಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದರು.

ನಂದೀಶ ಹಂಚೆ ಅವರನ್ನು ಕುರಿತು ಮಾತನಾಡಿದ ಅವರು, ‘ಕಲುಷಿತ ವಾತಾವರಣದ ನಡುವೆ ಹಾಗೂ ತಾರುಣ್ಯದ ಭರದಲ್ಲಿ ಗುಣ ಪಕ್ಷಪಾತ ಮಾಡುವ ಗಟ್ಟಿತನವನ್ನು ಹಂಚೆ ಉಳಿಸಿಕೊಂಡಿದ್ದಾರೆ. ಖಚಿತತೆ ಹಾಗೂ ಸ್ಪಷ್ಟ ಅಭಿಪ್ರಾಯ ಇವರ ಬರಹಗಳಲ್ಲಿ ಎದ್ದು ಕಾಣುತ್ತದೆ’ ಎಂದು ವಿಶ್ಲೇಷಿಸಿದರು.

ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಮಾತನಾಡಿದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಮಾತನಾಡಿ, ಮೈಸೂರಿನ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು. ಮೈಸೂರು ಮೆಟ್ರೊಪಾಲಿಟನ್‌ ನಗರವಾಗುವ ಲಕ್ಷಣಗಳು ಕಾಣುತ್ತಿವೆ. ಇದರಿಂದ ಮೈಸೂರು ತನ್ನತನ ಕಳೆದುಕೊಳ್ಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂತೆಯೇ, ಮೈಸೂರು ವಿಶ್ವವಿದ್ಯಾಲಯಕ್ಕೆ ಕೂಡಲೇ ಕುಲಪತಿ ನೇಮಿಸಬೇಕು. ಈ ಕುರಿತು ಮೈಸೂರಿನವರೇ ಆದ ಉನ್ನತ ಶಿಕ್ಷಣ ಸಚಿವರು ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು.‌

ಕಾರ್ಯಕ್ರಮ ಉದ್ಘಾಟಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಸಂವಹನ ಟ್ರಸ್ಟ್‌ ಉತ್ತಮ ಸಾಹಿತ್ಯ ಕಾರ್ಯಗಳನ್ನು ನಡೆಸುತ್ತಿದೆ. ಉತ್ತಮರನ್ನು ಗುರುತಿಸಿ ಸನ್ಮಾನಿಸುತ್ತಿದೆ ಎಂದು ಹೇಳಿದರು.

ನಟರಾಜ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಿಜೆಪಿ ಮುಖಂಡ ತೋಂಟದಾರ್ಯ ಅಧ್ಯಕ್ಷತೆವಹಿಸಿದ್ದರು. ಟ್ರಸ್ಟಿನ ಅಧ್ಯಕ್ಷ ಡಿ.ಎನ್‌.ಲೋಕಪ್ಪ ಅತಿಥಿಗಳನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.