ADVERTISEMENT

ರಿಂಗಣಿಸಿದ ಯಶೋಧರಮ್ಮ ದಾಸಪ್ಪ ನೆನಪು

‘ಮರೆಯಲಾಗದ ಮಹನೀಯರು’ ಕಾರ್ಯಕ್ರಮಕ್ಕೆ ಕಿಕ್ಕಿರಿದು ಸೇರಿದ ಜನಸಾಗರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 2:21 IST
Last Updated 2 ಫೆಬ್ರುವರಿ 2021, 2:21 IST
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ವತಿಯಿಂದ ‘ಮರೆಯಲಾಗದ ಮಹನೀಯರು’ ಸರಣಿಯಲ್ಲಿ ನಡೆದ ‘ಯಶೋಧರಮ್ಮ ದಾಸಪ್ಪ ಒಂದು ನೆನಪು ಕಾರ್ಯಕ್ರಮ’ದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ನಾಗರತ್ಮಮ್ಮ ಜವರೇಗೌಡ, ಮಾಣಿಕ್ಯ ಶಾಮಣ್ಣಶೆಟ್ಟಿ, ಪ್ರೇಮಾವತಿ ಆರ್‌.ಜಿ.ಮಧುರವೇಲು ಅವರನ್ನು ಸನ್ಮನಿಸಲಾಯಿತು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ವತಿಯಿಂದ ‘ಮರೆಯಲಾಗದ ಮಹನೀಯರು’ ಸರಣಿಯಲ್ಲಿ ನಡೆದ ‘ಯಶೋಧರಮ್ಮ ದಾಸಪ್ಪ ಒಂದು ನೆನಪು ಕಾರ್ಯಕ್ರಮ’ದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ನಾಗರತ್ಮಮ್ಮ ಜವರೇಗೌಡ, ಮಾಣಿಕ್ಯ ಶಾಮಣ್ಣಶೆಟ್ಟಿ, ಪ್ರೇಮಾವತಿ ಆರ್‌.ಜಿ.ಮಧುರವೇಲು ಅವರನ್ನು ಸನ್ಮನಿಸಲಾಯಿತು   

ಮೈಸೂರು: ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಯಶೋಧರಮ್ಮ ದಾಸಪ್ಪ ಅವರ ನೆನಪುಗಳು ರಿಂಗಣಿಸಿದವು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ವತಿಯಿಂದ ‘ಮರೆಯಲಾಗದ ಮಹನೀಯರು’ ಸರಣಿಯಲ್ಲಿ ನಡೆದ ‘ಯಶೋಧರಮ್ಮ ದಾಸಪ್ಪ ಒಂದು ನೆನಪು ಕಾರ್ಯಕ್ರಮ’ದಲ್ಲಿ ಪ್ರೇಕ್ಷಕರಿಂದ ಸಭಾಂಗಣ ತುಂಬಿ ಹೋಗಿತ್ತು. ಸಭಾಂಗಣದ ಹೊರಗೆ ನಿಂತು ಕಾರ್ಯಕ್ರಮ ಆಲಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಯಶೋಧರಮ್ಮ ಅವರು ಶಿವಪುರದ ಧ್ವಜ ಸತ್ಯಾಗ್ರಹ ಸೌಧದಲ್ಲಿ ರಾಷ್ಟ್ರಧ್ವಜವನ್ನು ಸಂರಕ್ಷಿಸಿದ ಪ್ರಕರಣವನ್ನು ವಿವರಿಸುವ ಮೂಲಕ ಸಭಿಕರನ್ನು ಸೆಳೆದರು.

ADVERTISEMENT

ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರು, ಯಶೋಧರಮ್ಮ ಅವರ ಜೀವನ ಸಾಧನೆಗಳನ್ನು ಕುರಿತು ಮಾತನಾಡಿದರು. ಚಿಂತಕರಾದ ಲೀಲಾ ಅಪ್ಪಾಜಿ ಅವರು ಪ್ರಧಾನ ಭಾಷಣ ಮಾಡಿದರು.

ಪಾನನಿರೋಧಕ್ಕೆ ಆಗ್ರಹಿಸಿ ಯಶೋಧರಮ್ಮ ಅವರು ಸಚಿವ ಪದವಿಗೆ ರಾಜೀನಾಮೆ ನೀಡಿದ ಪ್ರಸಂಗ, ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಮನೆಯನ್ನೇ ಬಿಟ್ಟುಕೊಟ್ಟ ವಿಚಾರಗಳನ್ನು ಕುರ್ಚಿಯಿಂದ ಕದಲದೇ ಪ್ರೇಕ್ಷಕರು ಆಲಿಸಿದರು.

ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ‘ಮಹಾತ್ಮ ಗಾಂಧೀಜಿ ರಾಷ್ಟ್ರಪಿತರೋ ಅಥವಾ ರಾಷ್ಟ್ರದ್ರೋಹಿಯೋ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅನೈತಿಕ ರಾಜಕಾರಣದ ಫಲ’ ಎಂದು ಕಿಡಿಕಾರಿದರು.

‘ವೋಟ್‌ ಬ್ಯಾಂಕ್‌ ರಾಜಕಾರಣಕ್ಕೆ ಎಲ್ಲ ಪಕ್ಷಗಳೂ ನೀಚ ರಾಜಕಾರಣ ಮಾಡಿದ್ದರ ಫಲವೇ ಇದು’ ಎಂದು ವಿಶ್ಲೇಷಿಸಿದ ಅವರು, ರಾಜಕಾರಣಿಗಳು ಲಜ್ಜೆಗೆಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌ಎಡ ಪಂಥೀಯ ಹಾಗೂ ಬಲ ಪಂಥೀಯ ಎನ್ನುವ ರೋಗ ರಾಜಕಾರಣಿಗಳನ್ನು ಮಾತ್ರವಲ್ಲ ಸಾಹಿತಿಗಳನ್ನೂ ಬಿಟ್ಟಿಲ್ಲ. ಒಂದೊಂದು ಪಕ್ಷಕ್ಕೆ ಸೇರಿದವರ ಹಾಗೆ ಸಾಹಿತಿಗಳು ಮಾತನಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

ನಾಗರತ್ಮಮ್ಮ ಜವರೇಗೌಡ, ಮಾಣಿಕ್ಯ ಶಾಮಣ್ಣಶೆಟ್ಟಿ, ಪ್ರೇಮಾವತಿ ಆರ್‌.ಜಿ.ಮಧುರವೇಲು ಅವರನ್ನು ಸನ್ಮನಿಸಲಾಯಿತು.

ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಅಧ್ಯಕ್ಷ ವಾಸು, ಯಶೋಧರಪ್ಪ ದಾಸಪ್ಪ ಅವರ ಕುಟಂಬಸ್ಥರಾದ ಸರೋಜಮ್ಮ ತುಳಸಿದಾಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.