ಸಿದ್ದರಾಮಯ್ಯ , ಎ.ಎಚ್. ವಿಶ್ವನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು: ‘ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂಬ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ತಿರುಗೇಟು ನೀಡಿದರು. ‘ಇದು ದುರಹಂಕಾರದ ಪರಮಾವಧಿ’ ಎಂದು ಟೀಕಿಸಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಯಾವಾಗಲೂ ನಾನೇ ನಾನೇ ಅಂತಾರೆ. ದೇವರಾಜ ಅರಸುಗಿಂತಲೂ ಒಳ್ಳೆಯ ಆಡಳಿತ ಕೊಟ್ಟಿದ್ದು ನಾನೇ ಎನ್ನುತ್ತಾರೆ. ನಾನೇ ನಾನೇ ಎನ್ನುವ ಅಹಂ, ದುರಹಂಕಾರ ಸಿದ್ದರಾಮಯ್ಯ ಕುಟುಂಬದಲ್ಲಿ ವಂಶವಾಹಿಯಂತೆ ಹರಿದುಬಂದಿದೆ. ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಮನುಷ್ಯ ದ್ವೇಷಿಗಳಂತೆ ಮಾತನಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ‘ಈ ರೀತಿ ಮಾತನಾಡುವವರಿಗೆ ನಮ್ಮ ಕಡೆ ಎಚ್ಎಂ ಎನ್ನುತ್ತಾರೆ. ಅಂದರೆ ‘ಹುಚ್ ಮುಂಡೇದು’ ಅಂತ’ ಎಂದರು.
‘ಯತೀಂದ್ರ ಇನ್ನೂ ಬೆಳೆಯುವ ಹುಡುಗ. ಈಗಲೇ ಈ ಥರದ ದುರಹಂಕಾರದ ಮಾತು ಸರಿಯಲ್ಲ. ನಾಲ್ವಡಿ ಅವರದ್ದಿರಲಿ, ಸಿದ್ದರಾಮಯ್ಯ ಆಡಳಿತವು ದೇವರಾಜ ಅರಸು, ಎಸ್.ಎಂ. ಕೃಷ್ಣ ಆಡಳಿತಕ್ಕೂ ಸಮವಿಲ್ಲ. ಈ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೆಂಬುದನ್ನು ಸಿದ್ದರಾಮಯ್ಯ ಮೊದಲು ಹೇಳಲಿ’ ಎಂದು ಸವಾಲು ಹಾಕಿದರು.
‘ಮಹಾರಾಜರು ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಹಿಂದೆ ಕೇಳಿದ್ದರು. ಈಗ ಸಿದ್ದರಾಮಯ್ಯ ಅವರೇನು ಅವರ ಅಪ್ಪನ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡುತ್ತಿದ್ದಾರಾ? ಯತೀಂದ್ರ ದೌಲತ್‌ಗಿರಿಯನ್ನು ಮೊದಲು ಬಿಡಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಮನಾದ ಯಾವ ರಾಜಕಾರಣಿಯೂ ಈ ದೇಶದಲ್ಲೇ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.