ADVERTISEMENT

ಬಿಜೆಪಿಯವರು ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ?: ಯತೀಂದ್ರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 10:31 IST
Last Updated 11 ಜೂನ್ 2025, 10:31 IST
ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ   

ಮೈಸೂರು: ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಕಾಲ್ತುಳಿತ ಪ್ರಕರಣಗಳು ನಡೆದಾಗ ಏನು ಕ್ರಮ ಕೈಗೊಂಡಿದ್ದಾರೆ? ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ?’ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿ ಬುಧವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು ‘ ಕುಂಭಮೇಳದಲ್ಲಿ ಕಾಲ್ತುಳಿತ ಆದಾಗ, ಅವರದ್ದೇ ಮೈತ್ರಿ ಪಕ್ಷ ಅಧಿಕಾರದಲ್ಲಿ ಇರುವ ತಿರುಪತಿಯಲ್ಲಿ ಕಾಲ್ತುಳಿತ ಆದಾಗ ರಾಜೀನಾಮೆ ಕೇಳಿದ್ದರ? ಅಲ್ಲಿಗೆ ಹೋಗಿ ಮುತ್ತಿಗೆ ಹಾಕಿದ್ದರ? ಸುಮ್ಮನೆ ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ ಕಾಲ್ತುಳಿತ ಪ್ರಕರಣ ದುರದೃಷ್ಟಕರ. ಮೇಲ್ನೋಟಕ್ಕೆ ಘಟನೆಗೆ ಯಾರು ಹೊಣೆಯೋ ಅವರೆಲ್ಲರ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ. ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ವರದಿ ಆಧರಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ ‘ ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ತಪ್ಪೇನಿದೆ? ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆಯೇ ಕಾರ್ಯಕ್ರಮ ನಡೆಸಿದ್ದಾರೆ. ಪೊಲೀಸರು ಸರಿಯಾಗಿ ಬಂದೋಬಸ್ತ್‌ ಮಾಡಿಲ್ಲ. ಹೀಗಾಗಿ ತನಿಖೆ ನಡೆಯಲಿ. ಯಾರ ಪಾತ್ರ ಇದೆ ಎಂಬುದು ಗೊತ್ತಾಗಲಿ. ತನಿಖೆಯ ವರದಿ ಬರುವ ಮುನ್ನವೇ ಇವರೇ ಅಪರಾಧಿ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ ಘಟನೆಯಿಂದ ಸಿದ್ದರಾಮಯ್ಯರ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಅದೆಲ್ಲ ವಿಪಕ್ಷಗಳ ಸೃಷ್ಟಿ. ದೆಹಲಿಯಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಮುಖ್ಯವಾಗಿ ಜಾತಿಗಣತಿ ಬಗ್ಗೆ ಚರ್ಚೆಯಾಗಿದೆ. ಮುಖ್ಯಮಂತ್ರಿಗಳಿಗೆ ಹೈಕಮಾಂಡ್ ಯಾವುದೇ ಗಡುವು ಕೊಟ್ಟಿಲ್ಲ. ಐದು ವರ್ಷವೂ ಅವರು ಅಧಿಕಾರದಲ್ಲಿ ಇರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.