ADVERTISEMENT

ಬಿಎಸ್‌ವೈ ಅವರದ್ದು ನೂರನೇ ನಾಟಕ: ವಾಟಾಳ್ ನಾಗರಾಜ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 11:09 IST
Last Updated 7 ಜೂನ್ 2021, 11:09 IST
ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಮೈಸೂರು: ರಾಜೀನಾಮೆ ನೀಡುವ ಹೇಳಿಕೆ ಬಿ.ಎಸ್.ಯಡಿಯೂರಪ್ಪ ಅವರ ನೂರನೇ ನಾಟಕ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಬಿಟ್ಟರೆ ಬೇರೆ ಯಾರೂ ಸಮರ್ಥರಿಲ್ಲ. ಉಳಿದವರೆಲ್ಲರೂ ಕೆಲಸಕ್ಕೆ ಬಾರದವರು. ಇಂತಹ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಅವರು ರಾಜೀನಾಮೆ ಹೇಳಿಕೆ ನೀಡುವ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಚಾಡಿ ಹೇಳುವವರು, ಹೊಗಳುವವರು, ಜಯಕಾರ ಹಾಕುವವರು ಅವರ ಸುತ್ತಲೂ ಇದ್ದಾರೆ. ಇವರೊಬ್ಬ ಲೆಕ್ಕಾಚಾರದ ಮನುಷ್ಯ ಹಾಗೂ ಮಹಾದ್ವೇಷಿ. ಆದರೂ, ಬಿಜೆಪಿಯಲ್ಲಿ ಈಗ ಅವರೊಬ್ವರೇ ಶಕ್ತರಾಗಿದ್ದಾರೆ ಎಂದರು.

ADVERTISEMENT

ಆಡಳಿತ ಮತ್ತು ವಿರೋಧ ಪಕ್ಷ ಎರಡೂ ಸತ್ತು ಹೋಗಿವೆ. ಪ್ರಾಮಾಣಿಕತೆಯಿಂದ ರಾಜ್ಯ ನಡೆಸುವವರು ಮೂರೂ ಪಕ್ಷಗಳಲ್ಲಿ ಇಲ್ಲ ಎಂದು ಹೇಳಿದರು.

ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಪಿತೂರಿ

ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ದೊಡ್ಡ ಪಿತೂರಿಯು 6 ತಿಂಗಳಿನಿಂದಲೂ ನಡೆದಿತ್ತು. ಇವರು ಅಧಿಕಾರದಲ್ಲಿ ಇದ್ದರೆ, ಅನೇಕರ ಭೂ ಹಗರಣ ಹೊರಗೆ ಬರುತ್ತಿತ್ತು. ಇವರ ವರ್ಗಾವಣೆಗೆ ಗುಂಪೊಂದು ಒತ್ತಡ ಹೇರಿತ್ತು. ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಆಮ್ಲಜನಕದ ಕೊರತೆಯಿಂದ ರೋಗಿಗಳ ಸಾವು ಸಂಭವಿಸಿದ ನಂತರವೂ ಚಾಮರಾಜನಗರದ ಜಿಲ್ಲಾಧಿಕಾರಿ ಇರಬಹುದು, ಸರ್ಕಾರಕ್ಕೆ ಬೇಡವಾದ ಜಿಲ್ಲಾಧಿಕಾರಿ ಅಧಿಕಾರದಲ್ಲಿ ಇರಬಾರದು ಎಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಎಂದರೆ ಸರ್ಕಾರದ ಏಜೆಂಟರಾ? ರಾಜಕಾರಣಿಗಳ ಗುಲಾಮರಾಗಿ ಇರಬೇಕಾ? ಪ್ರತಿನಿಧಿಗಳಿಗೆ ಕೈಮುಗಿದು ನಿಲ್ಲಬೇಕಾ? ಎಂದು ಹರಿಹಾಯ್ದರು.

ಇಬ್ಬರು ಅಧಿಕಾರಿಗಳ ಕುರಿತು ಮುಖ್ಯ ಕಾರ್ಯದರ್ಶಿಗಳು ನೀಡಿರುವ ವರದಿಯನ್ನು ಬಹಿರಂಗಪಡಿಸಬೇಕು. ವರ್ಗಾವಣೆ ಹಿಂದಿನ ಉದ್ದೇಶವನ್ನು ಜನತೆಗೆ ಹೇಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ತಮ್ಮ ಸ್ವಜಾತಿಯವರಿಗೆ ಉನ್ನತ ಸ್ಥಾನ ನೀಡುವ ಪರಿಪಾಠ ನಿಲ್ಲಬೇಕು. ಹುಡುಗಾಟದಂತೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು.

ಇದೇ ವೇಳೆ ಅವರು ಜಿಲ್ಲಾಧಿಕಾರಿ ಕಚೇರಿ ಮುಂದೆ ರೋಹಿಣಿ ಸಿಂಧೂರಿ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.