ADVERTISEMENT

ಮೇಯರ್‌ ಚುನಾವಣೆಗೆ ಕೂಡಿಬರದ ಮುಹೂರ್ತ

ಕಾಂಗ್ರೆಸ್‌–ಜೆಡಿಎಸ್‌ ನಡುವೆ ಮುಂದುವರೆದ ‘ಹಗ್ಗಜಗ್ಗಾಟ’

ಮಹಮ್ಮದ್ ನೂಮಾನ್
Published 27 ಅಕ್ಟೋಬರ್ 2018, 19:30 IST
Last Updated 27 ಅಕ್ಟೋಬರ್ 2018, 19:30 IST
.
.   

ಮೈಸೂರು: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿ 53 ದಿನಗಳು ಕಳೆದರೂ ಮೇಯರ್‌, ಉಪಮೇಯರ್ ಚುನಾವಣೆಗೆ ಕಾಲ ಕೂಡಿಬಂದಿಲ್ಲ. ಮೇಯರ್‌ ಪಟ್ಟ ಬಿಟ್ಟುಕೊಡಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಿದ್ಧವಿಲ್ಲದಿರುವುದೇ ಆಯ್ಕೆ ಪ್ರಕ್ರಿಯೆ ತಡವಾಗಲು ಕಾರಣ ಎಂಬ ಮಾತು ಕೇಳಿಬರುತ್ತಿದೆ.

ಪಾಲಿಕೆಗೆ ಆ.31ರಂದು ಚುನಾವಣೆ ನಡೆದು, ಸೆ.3ರಂದು ಫಲಿತಾಂಶ ಪ್ರಕಟಗೊಂಡಿತ್ತು. ಬಿಜೆಪಿ 22 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್‌ 19, ಜೆಡಿಎಸ್‌ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರರು ಗೆಲುವು ಪಡೆದುಕೊಂಡಿದ್ದರು.

ಈ ಬಾರಿ ಮೇಯರ್‌ ಸ್ಥಾನ ‘ಸಾಮಾನ್ಯ ಮಹಿಳೆ’ ಮತ್ತು ಉಪಮೇಯರ್‌ ಸ್ಥಾನ ‘ಬಿಸಿಎ’ಗೆ ಮೀಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಇರುವುದರಿಂದ ಪಾಲಿಕೆಯಲ್ಲೂ ಉಭಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವುದು ಬಹುತೇಕ ಖಚಿತ.

ADVERTISEMENT

ಪಾಲಿಕೆಯ ನೂತನ ಸದಸ್ಯರಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಸರ್ಕಾರ ಇನ್ನೂ ಹೊರಡಿಸಿಲ್ಲ. ಗೆದ್ದ ಅಭ್ಯರ್ಥಿಗಳ ವಿವರವನ್ನು ಪಾಲಿಕೆ ಚುನಾವಣೆ ವಿಭಾಗವು ಈಗಾಗಲೇ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ.

ನಗರಾಭಿವೃದ್ಧಿ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ. ಸೂಚನೆ ಬಂದ ಬಳಿಕ ಮೇಯರ್‌, ಉಪಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಏಕೆ ತಡ?: ಮೇಯರ್‌ ಸ್ಥಾನಕ್ಕಾಗಿ ಮೈತ್ರಿ ಪಕ್ಷಗಳ ನಡುವೆ ‘ಹಗ್ಗಜಗ್ಗಾಟ’ ನಡೆಯುತ್ತಿರುವುದು ಅಧಿಸೂಚನೆ ವಿಳಂಬಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಾಲಿಕೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅವರು ಬಂದ ಬಳಿಕ ಮೇಯರ್‌ ವಿಚಾರ ಅಂತಿಮಗೊಳ್ಳಲಿದೆ ಎಂದು ಹೇಳಲಾಗಿತ್ತು. ಅನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ‘ದಸರಾ ಬಳಿಕ ಮೇಯರ್‌ ಚುನಾವಣೆ ನಡೆಯಲಿದೆ’ ಎಂದು ಹೇಳಿದ್ದರು. ಆದರೆ, ದಸರಾ ಕೊನೆಗೊಂಡು ವಾರ ಕಳೆದರೂ ಚುನಾವಣೆಯ ಅಧಿಸೂಚನೆ ಹೊರಬಿದ್ದಿಲ್ಲ.

‘ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಹೆಚ್ಚು ಸ್ಥಾನ ಗೆದ್ದಿದೆ. ಹೀಗಾಗಿ, ಮೇಯರ್‌ ಸ್ಥಾನ ನಮಗೇ ಬೇಕು’ ಎಂದು ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದರು.

ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ. ಐದೂ ವರ್ಷ ಮೇಯರ್‌ ಸ್ಥಾನವನ್ನು ಜೆಡಿಎಸ್‌ ಇಟ್ಟುಕೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಈ ಹಿಂದೆ ಪ್ರತಿಕ್ರಿಯಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರೂ ಇದೇ ಮಾತನ್ನಾಡಿದ್ದರು.

ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ: ಪಾಲಿಕೆ ಸದಸ್ಯರಾಗಿ ಆಯ್ಕೆಯಾದವರಿಗೆ ಇನ್ನೂ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ನಗರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಉಂಟಾಗಿದೆ.

‘ದಸರಾ ಅವಧಿಯಲ್ಲಿ ಅಧಿಕಾರಿಗಳು ಕೈಗೆ ಸಿಗದ ಕಾರಣ ತೊಂದರೆ ಎದುರಾಗಿತ್ತು. ಇದೀಗ ದಸರಾ ಮುಗಿದಿದೆ. ಆದರೂ ಅಧಿಕಾರ ವಹಿಸಿಕೊಳ್ಳಲು ಆಗಿಲ್ಲ. ಈ ಹಿಂದೆ ಸದಸ್ಯರಾಗಿ ಅನುಭವ ಇರುವವರು ಹೇಗಾದರೂ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಆದರೆ ಹೊಸ ಸದಸ್ಯರಿಗೆ ಕಷ್ಟವಾಗುತ್ತಿದೆ’ ಎಂದು ಪಾಲಿಕೆ ಸದಸ್ಯ ಅಯೂಬ್‌ ಖಾನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.