ಮೈಸೂರು: ‘ಯೋಗ ತರಬೇತಿ ನೀಡುವ ಶಾಲೆಗಳಿಗೆ ವಿಧಿಸುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮರು ಪರಿಷ್ಕರಿಸಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಗುರುವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚಿಸಿದ ಅವರು, ಜಿಎಸ್‌ಟಿ ಕಡಿತಗೊಳಿಸಲು ಕೋರಿದ್ದಾರೆ.
‘ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಯೋಗ ಈಗ ಎಲ್ಲೆಡೆ ಹೆಚ್ಚು ಪ್ರಚಲಿತವಾಗಿದೆ. ಯೋಗದ ಬಗ್ಗೆ ಪ್ರಚಾರ ಮತ್ತು ಪೋಷಣೆ ಅಂತರರಾಷ್ಟ್ರೀಯ ಮಟ್ಟದಲ್ಲೂ ನಡೆಯುತ್ತಿದೆ. ಮೈಸೂರು ವಿಶ್ವದ ಯೋಗ ರಾಜಧಾನಿ ಎಂದೇ ಖ್ಯಾತಿ ಗಳಿಸಿದೆ. ಯೋಗವು ದೈಹಿಕ ಕಸರತ್ತು ಮಾತ್ರವಲ್ಲ, ಮಾನಸಿಕ, ಆಧ್ಯಾತ್ಮಿಕ ಸ್ಥಿತಿಗತಿಯನ್ನು ಹೆಚ್ಚಿಸುತ್ತಿದೆ. ಇದರ ಅಭ್ಯಾಸವು ಆರೋಗ್ಯಕರ ಜೀವನಶೈಲಿಯಾಗಿದೆ. ಹೀಗಾಗಿ, ಕಲಿಸುವವರಿಗೆ ಪ್ರೋತ್ಸಾಹ ಅಗತ್ಯವಿದೆ’ ಎಂದು ಹೇಳಿದ್ದಾರೆ.
‘ಸಣ್ಣ ಮತ್ತು ಸಮುದಾಯ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಅಥವಾ ಅತಿ ಕಡಿಮೆ ಶುಲ್ಕದಲ್ಲಿ ಯೋಗ ತರಬೇತಿ ನೀಡುತ್ತಿವೆ. ಈ ಯೋಗಶಾಲೆಗಳನ್ನು ಫಿಟ್‌ನೆಸ್ ಸೆಂಟರ್ ಅಥವಾ ಜಿಮ್‌ಗಳ ಸಾಲಿನಲ್ಲಿ ಸೇರಿಸಿ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರಿಂದ ಈ ಯೋಗ ಸಂಸ್ಥೆಗಳಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ’ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
‘ಮನವಿ ಸ್ವೀಕರಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ’ ಎಂದು ಯದುವೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.