ADVERTISEMENT

ಚಿನ್ನಕ್ಕಾಗಿ ನೇಪಾಳ ದಂಪತಿಯ ‘ಮಾಸ್ಟರ್ ಪ್ಲಾನ್’

ಗಂಡನನ್ನು ಶೌಚಾಲಯದಲ್ಲಿ ಕೂಡಿ, ಹೆಂಡತಿಯ ಆಭರಣ ಕಿತ್ತರು * ಕೆಲಸಕ್ಕೆ ಸೇರಿದ ಹತ್ತೇ ದಿನಗಳಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 20:25 IST
Last Updated 2 ಜನವರಿ 2019, 20:25 IST
   

ಬೆಂಗಳೂರು: ಹತ್ತು ದಿನಗಳ ಹಿಂದಷ್ಟೇ ಎಚ್‌ಎಂಟಿ ಲೇಔಟ್ 5ನೇ ಅಡ್ಡರಸ್ತೆಯ ಮನೆಯೊಂದಕ್ಕೆ ಕೆಲಸಕ್ಕೆ ಸೇರಿದ್ದ ನೇಪಾಳದ ದಂಪತಿ, ಮಂಗಳವಾರ ಮಧ್ಯಾಹ್ನ ಐವರು ಸಹಚರರನ್ನು ಮನೆಗೆ ಕರೆಸಿಕೊಂಡು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ.

ಈ ಸಂಬಂಧ ಮನೆ ಮಾಲೀಕ ಆದಿತ್ಯ ನಾರಾಯಣ ಸ್ವಾಮಿ ಅವರು ಮಂಗಳವಾರ ಆರ್‌.ಟಿ.ನಗರ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳ ದೃಶ್ಯ ಆಧರಿಸಿ ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಶೌಚಾಲಯದಲ್ಲಿ ಕೂಡಿದರು: ‘ನಾನು, ಪತ್ನಿ ಹಾಗೂ ಪೋಷಕರು ಹಲವು ವರ್ಷಗಳಿಂದ ಇದೇ ಮನೆಯಲ್ಲಿ ನೆಲೆಸಿದ್ದೇವೆ. ದೇವನಹಳ್ಳಿ ತಾಲ್ಲೂಕಿನ ಭಟ್ರಹಳ್ಳಿಯಲ್ಲಿ ನಮ್ಮದೇ ಸಾಯಿ ಬಾಬಾ ದೇವಸ್ಥಾನವಿದೆ. ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಿದ್ದರಿಂದ ಡಿ.31ರ ರಾತ್ರಿಯೇ ಪೋಷಕರು ದೇವಸ್ಥಾನಕ್ಕೆ ಹೋಗಿ ಅಲ್ಲೇ ಉಳಿದುಕೊಂಡಿದ್ದರು’ ಎಂದು ಆದಿತ್ಯ ನಾರಾಯಣ ಸ್ವಾಮಿ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ನಾನು ಹಾಗೂ ಪತ್ನಿ ದೇವಸ್ಥಾನಕ್ಕೆ ಹೊರಡಲು ನಿರ್ಧರಿಸಿದ್ದೆವು. ಇದಕ್ಕಾಗಿ ಪೂಜಾ ಸಾಮಗ್ರಿಗಳನ್ನು ಜೋಡಿಸಿಕೊಂಡು ಬೆಳಿಗ್ಗೆಯಿಂದಲೇ ತಯಾರಿ ನಡೆಸಿದ್ದೆವು. ಈ ವೇಳೆ ಮನೆಗೆಲಸದ ಸುರೇಶ್ ಹಾಗೂ ಆತನ ಪತ್ನಿ ಸುನೀತಾ ಅಂಗಳದಲ್ಲೇ ಕುಳಿತಿದ್ದರು. ‘ಎಷ್ಟು ಗಂಟೆಗೆ ದೇವಸ್ಥಾನಕ್ಕೆ ಹೊರಡುತ್ತೀರಾ’ ಎಂದು ಪದೇ ಪದೇ ಕೇಳುತ್ತಲೇ ಇದ್ದರು. ಮಧ್ಯಾಹ್ನ ಹೋಗುವುದಾಗಿ ಅವರಿಗೆ ತಿಳಿಸಿದ್ದೆವು.’

‘11.45ರ ಸುಮಾರಿಗೆ ನಾನು ಸ್ನಾನ ಮಾಡಲು ಮೊದಲ ಮಹಡಿಯ ಕೋಣೆಗೆ ಹೋಗಿದ್ದೆ. ಈ ವೇಳೆ ಪತ್ನಿ ಚೀರಿಕೊಂಡ ಶಬ್ದ ಕೇಳಿಸಿತು. ತಕ್ಷಣ ಕೆಳಗಿಳಿದು ಬಂದೆ. ಮಂಕಿ ಕ್ಯಾಪ್ ಧರಿಸಿದ್ದ ಐವರು, ಪತ್ನಿಯ ತಲೆಯನ್ನು ಬಲವಾಗಿ ನೆಲಕ್ಕೆ ಅದುಮಿದ್ದರು. ನನ್ನನ್ನು ನೋಡುತ್ತಿದ್ದಂತೆಯೇ, ‘ಹತ್ತಿರ ಬಂದರೆ ಕೊಲೆ ಮಾಡುತ್ತೇವೆ’ ಎಂದು ಬೆದರಿಸಿದರು. ಪತ್ನಿಯ ರಕ್ಷಣೆಗೆ ಮುಂದಾದ ನನ್ನನ್ನು ಮೂವರು ಹಿಡಿದುಕೊಂಡು, ಸ್ನಾನದ ಕೋಣೆಗೆ ತಳ್ಳಿ ಹೊರಗಿನಿಂದ ಚಿಲಕ ಹಾಕಿದರು.’

‘ಆನಂತರ ಪತ್ನಿಗೆ ಚಿತ್ರಹಿಂಸೆ ಕೊಟ್ಟು, ಮಾಂಗಲ್ಯ ಸರ ಸೇರಿದಂತೆ 250ಗ್ರಾಂನ ಚಿನ್ನವನ್ನು ಬಿಚ್ಚಿಕೊಂಡಿದ್ದಾರೆ. ಒನ್‌–ಪ್ಲಸ್ ಮೊಬೈಲನ್ನೂ ತೆಗೆದುಕೊಂಡು ಹೊರಟು ಹೋಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಪತ್ನಿ ಕೋಣೆಯ ಬಾಗಿಲು ತೆಗೆದಳು. ಹೊರಗೆ ಹೋಗಿ ನೋಡಿದಾಗ, ಆ ಐದು ಮಂದಿಯ ಜತೆಗೆ ಮನೆಗೆಲಸದ ದಂಪತಿಯೂ ಹೊರಟು ಹೋಗಿದ್ದರು. ಆಭರಣ ದೋಚುವ ಉದ್ದೇಶದಿಂದಲೇ ಅವರಿಬ್ಬರೂ ಕೆಲಸಕ್ಕೆ ಸೇರಿಕೊಂಡಂತಿದೆ. ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ನೇಪಾಳದ ಮದನ್‌ ವಿಚಾರಣೆ

ನೇಪಾಳದ ಮದನ್ ಎಂಬುವರು ಎರಡು ವರ್ಷಗಳಿಂದ ಆರ್‌ಬಿಐ ಕಾಲೊನಿಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ನೆಲೆಸಿದ್ದಾರೆ. ಫಿರ್ಯಾದಿಗೆ ಇತ್ತೀಚೆಗೆ ಅವರ ಪರಿಚಯವಾಗಿತ್ತು. ತಮ್ಮ ಮನೆಗೆ ಕೆಲಸದವರ ಅವಶ್ಯಕತೆ ಇರುವುದಾಗಿ ಆದಿತ್ಯ ನಾರಾಯಣ ಸ್ವಾಮಿ ಹೇಳಿದಾಗ, ತಮ್ಮ ದೇಶದವರೇ ಆದ ಸುರೇಶ್ ಹಾಗೂ ಸುನೀತಾ ದಂಪತಿಯನ್ನು ಮದನ್ 2018ರ ಡಿ.21ರಂದು ಅವರ ಮನೆಗೆ ಕಳುಹಿಸಿಕೊಟ್ಟಿದ್ದರು. ಇದೀಗ ಪೊಲೀಸರು ಮದನ್ ಅವರನ್ನು ವಿಚಾರಣೆ ನಡೆಸಿ ದಂಪತಿಯ ಪೂರ್ವಾಪರ ಕಲೆಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.