ADVERTISEMENT

ಫಂಗಸ್ ರೋಗಕ್ಕೆ ತುತ್ತಾಗುತ್ತಿರುವ ಕಿತ್ತಳೆ :ಇಳುವರಿ ಕುಸಿತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:22 IST
Last Updated 12 ನವೆಂಬರ್ 2019, 16:22 IST
ಕೊಡಗಿನ ಕಿತ್ತಳೆ ಹಣ್ಣು
ಕೊಡಗಿನ ಕಿತ್ತಳೆ ಹಣ್ಣು   

ನಾಪೋಕ್ಲು: ಗ್ರೇನಿಂಗ್ ರೋಗದಿಂದ ವಿನಾಶದ ಅಂಚಿನಲ್ಲಿದ್ದ ಕಿತ್ತಳೆ ಇದೀಗ ಪುನಶ್ಚೇತನಗೊಳ್ಳುವ ಹಾದಿಯಲ್ಲಿದ್ದರೂ ಬೆಳೆಗಾರರಿಗೆ ಈ ಬಾರಿ ನಿರೀಕ್ಷಿತ ಇಳುವರಿ ಲಭಿಸುತ್ತಿಲ್ಲ. ಫಂಗಸ್ ರೋಗಕ್ಕೆ ತುತ್ತಾಗಿ ಹಣ್ಣುಗಳು ಉದುರುತ್ತಿವೆ. ಪೂರ್ಣ ಹಣ್ಣಾಗುವ ಮುನ್ನವೇ ಕಿತ್ತಳೆಯ ಕೊಯ್ಲು ಮಾಡಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ,ರಸ್ತೆಯಂಚಿನಲ್ಲಿ ಕಿತ್ತಳೆ ಮಾರಾಟ ಬಿರುಸು ಪಡೆದುಕೊಂಡಿದೆ.

ರುಚಿ ಹಾಗೂ ಪರಿಮಳಕ್ಕೆ ಹೆಸರುವಾಸಿಯಾಗಿದ್ದ ಕೊಡಗಿನ ಕಿತ್ತಳೆ ಜಿಲ್ಲೆಯ ಹೆಸರಿಗೆ ಮೆರುಗು ನೀಡಿತ್ತು. ಅನೇಕ ಬೆಳೆಗಾರರು ತಮ್ಮ ಕಾಫಿ ತೋಟದಲ್ಲಿ ಕಿತ್ತಳೆ ಬೆಳೆದು ಆದಾಯದ ಮೂಲವನ್ನಾಗಿಸಿಕೊಂಡಿದ್ದರು. ಗ್ರೇನಿಂಗ್ ರೋಗದಿಂದಾಗಿ ಹಲವು ತೋಟಗಳಲ್ಲಿ ಕಿತ್ತಳೆ ಮರಗಳು ಕ್ರಮೇಣ ನಶಿಸಿದವು.

ಪೂರ್ಣ ನಾಶವಾಗುವ ಭೀತಿಯಲ್ಲಿದ್ದ ಕೊಡಗಿನಲ್ಲಿ ಕಿತ್ತಳೆ ಬೆಳೆ ಮತ್ತೆ ಚೇತರಿಸಿಕೊಂಡಿದೆ. ಸುಮಾರು 3000 ಎಕರೆಯಲ್ಲಿ ಕಿತ್ತಳೆ ಬೆಳೆಯಲಾಗುತ್ತಿದ್ದು, ತೋಟಗಾರಿಕಾ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಈ ವರ್ಷ ತೋಟಗಳಲ್ಲಿ ಕಿತ್ತಳೆ ಫಸಲು ಕಂಡುಬಂದರೂ ಮಳೆ-ಮೋಡದ ವಾತಾವರಣದಿಂದ ಕಾಯಿಲೆಗೆ ತುತ್ತಾಗಿ ಹಣ್ಣುಗಳು ಉದುರಿಬೀಳುತ್ತಿವೆ.

ADVERTISEMENT

ಎರಡು ಬಾರಿ ಹಂಗಾಮು: ಕಿತ್ತಳೆಯಲ್ಲಿ ಎರಡು ಸಾರಿ ಹಣ್ಣಿನ ಹಂಗಾಮು ಕಂಡುಬರುತ್ತದೆ. ಮಳೆಗಾಲದ ಕಿತ್ತಳೆಗಿಂತ ಚಳಿಗಾಲದ ಕಿತ್ತಳೆಗೆ ಬೇಡಿಕೆ ಹೆಚ್ಚು. ಕಾಫಿ ಬೆಳೆಗಾರರು ಕಿತ್ತಳೆಯನ್ನು ಗುತ್ತಿಗೆಗೆ ಕೊಡುತ್ತಾರೆ. ವ್ಯಾಪಾರಸ್ಥರು ಕಾಯಿಯ ಸಂದರ್ಭದಲ್ಲಿ ತೋಟಕ್ಕೆ ಭೇಟಿ ನೀಡಿ ಗುತ್ತಿಗೆಗೆ ಇಡೀ ತೋಟವನ್ನು ಒಪ್ಪಂದ ಮಾಡಿಕೊಳ್ಳುತ್ತಾರೆ. ಇದೀಗ ಕಿತ್ತಳೆ ಕೊಡಗಿನ ಪ್ರಮುಖ ನಗರಗಳಲ್ಲಿ ಮಾರಾಟವಾಗುತ್ತಿದೆ. ನೆರೆಯ ಕೇರಳ ರಾಜ್ಯಕ್ಕೂ ರವಾನೆಯಾಗುತ್ತಿದೆ.

ಆತಂಕ ತಂದಿಟ್ಟ ಕಾಯಿಲೆ: ಕಿತ್ತಳೆಗೆ ಬೇಡಿಕೆ ಇದ್ದರೂ ಹೆಚ್ಚಿನ ಮಳೆಯಿಂದಾಗಿ ಫಸಲು ಉದುರಿ ನಷ್ಟ ಸಂಭವಿಸುತ್ತಿದೆ ಎಂದು ಇಲ್ಲಿನ ವ್ಯಾಪಾರಸ್ಥರು ಅಳಲು ತೋಡಿಕೊಂಡರು. ಕಾಫಿ ತೋಟಗಳಲ್ಲಿ ನೆರಳಿನ ಮರವಾಗಿ ಬೆಳೆಯುವ ಕಿತ್ತಳೆ ಬಗ್ಗೆ ಬಹುತೇಕ ಕೃಷಿಕರು ಕಾಳಜಿ ವಹಿಸುವುದಿಲ್ಲ. ಆರೈಕೆ ಇಲ್ಲದ ಗಿಡ ಹಳದಿ ಎಲೆ ರೋಗಕ್ಕೆ ತುತ್ತಾಗುತ್ತಿದೆ. ಈ ರೋಗಕ್ಕೆ ತುತ್ತಾದ ಕಿತ್ತಳೆ ಗಿಡ ಚಿಗುರೊಡೆಯುವುದನ್ನು ನಿಲ್ಲಿಸಿ ಒಣಗಿ ಹೋಗುತ್ತದೆ. ಈಗ ಗ್ರೇನಿಂಗ್ ರೋಗ ಹತೋಟಿಗೆ ಬಂದಿದ್ದು ಈ ವರ್ಷ ಉತ್ತಮ ಫಸಲು ನಿರೀಕ್ಷಿಸಿದ್ದರೂ ಮಳೆ ಇಳುವರಿಗೆ ಹೊಡೆತ ನೀಡಿದೆ ಎನ್ನುತ್ತಾರೆ ಅವರು.

ಹವಾಮಾನದ ಏರುಪೇರು ಕಿತ್ತಳೆ ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ. ಗಿಡಗಳಲ್ಲಿ ಒಂದಷ್ಟು ಫಸಲು ಕಾಣಿಸಿಕೊಂಡರೂ ಕೊಯ್ಲು ಮಾಡುವ ಅವಧಿಗೆ ಫಂಗಸ್ ರೋಗ ತಗಲಿ ಹಣ್ಣುಗಳೆಲ್ಲಾ ಉದುರಿ ಹೋಗುತ್ತಿವೆ.

ಬೆಳೆಗಾರರ ಆಸಕ್ತಿ: ಅವಸಾನದ ಅಂಚಿನಲ್ಲಿರುವ ಕೊಡಗಿನ ಕಿತ್ತಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಪ್ರತಿವರ್ಷ ತೋಟಗಾರಿಕಾ ಇಲಾಖೆಯಲ್ಲಿ ಕಿತ್ತಳೆ ಸಸಿಗಳನ್ನು ಅಭಿವೃದ್ದಿಪಡಿಸಿ ಬೆಳೆಗಾರರಿಗೆ ವಿತರಿಸಲಾಗುತ್ತಿದೆ.

ಇಲ್ಲಿನ ಬೇತು ಗ್ರಾಮದ ತೋಟಗಾರಿಕಾ ಸಸ್ಯಕ್ಷೇತ್ರದಲ್ಲಿ ಕಿತ್ತಳೆ ಸಸಿಗಳನ್ನು ಬೆಳೆಸಲಾಗುತ್ತಿದೆ. ಜೊತೆಗೆ ಖಾಸಗಿ ನರ್ಷರಿಗಳಲ್ಲಿಯೂ ಕಿತ್ತಳೆ ಗಿಡಗಳನ್ನು ಬೆಳೆಯಲಾಗುತ್ತಿದ್ದು ಮುಂಗಾರಿನ ಈ ಅವಧಿಯಲ್ಲಿ ಬೆಳೆಗಾರರು ಕಿತ್ತಳೆ ಗಿಡಗಳನ್ನು ಖರೀದಿಸಿ ತೋಟಗಳಲ್ಲಿ ನೆಡುತ್ತಿದ್ದಾರೆ. ಕೊಡಗಿನ ಕಿತ್ತಳೆ ಹಣ್ಣಿಗೆ ಅಧಿಕ ಬೇಡಿಕೆ ಇರುವುದರಿಂದ ಬೆಳೆಗಾರರ ಆಸಕ್ತಿ ಕುಗ್ಗಿಲ್ಲ. ನರ್ಸರಿಗಳಲ್ಲಿ ಗಿಡಗಳನ್ನು ಬೆಳೆದು ರೈತರು ಲಾಭ ಗಳಿಸುತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.