ADVERTISEMENT

ಅಂಗನವಾಡಿ ನೌಕರರಿಂದ ಪ್ರತಿಭಟನಾ ರ್‍ಯಾಲಿ

ಐಸಿಡಿಎಸ್ ಯೋಜನೆ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 6:49 IST
Last Updated 11 ಜನವರಿ 2014, 6:49 IST

ರಾಯಚೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು(ಐಸಿಡಿಎಸ್) ಖಾಸ­ಗೀಕ­ರಣ ಮಾಡಬಾರದು, ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₨15,000 ಎಂಬುದು ಸೇರಿದಂತೆ  23 ಬೇಡಿಕೆ ಈಡೇರಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರ­ದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ಸಿಐಟಿಯು ಸಂಯೋಜಿತ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಐಟಿಯುಸಿ ಸಂಯೋಜಿತ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

ನಗರದ ರೈಲ್ವೆ ಸ್ಟೇಷನ್ ರಸ್ತೆ ಹತ್ತಿರ ಇರುವ ಸಾರ್ವಜನಿಕ ಉದ್ಯಾನದಿಂದ ಪ್ರತಿಭಟನಾ ರ್‍ಯಾಲಿ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಐಸಿಡಿಎಸ್ ಮಿಶನ್ ಎಂಬ ಪ್ರಕ್ರಿಯೆ ಕೈ ಬಿಡಬೇಕು, ಈ ಯೋಜನೆ­ಯನ್ನು ಎನ್‌.ಜಿ.ಓ. ಗಳು, ಕಾರ್ಪೊರೇಟ್ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಸೇರಿದಂತೆ ಬೇರೆಯವರಿಗೆ ವಹಿಸಬಾ­ರದು. ಯಾವುದೇ ಸ್ವರೂಪ­ದಲ್ಲಿಯೂ ಖಾಸಗೀಕರಣ ಮಾಡಬಾ­ರದು. ಬದಲಾಗಿ ಐಸಿಡಿಎಸ್‌ನ್ನು ಕ್ರಮಬದ್ಧ­ಗೊಳಿಸಿ ಅದನ್ನೊಂದು ಇಲಾಖೆ­ಯನ್ನಾಗಿಸಬೇಕು ಎಂದು ಒತ್ತಾಯ ಮಾಡಿದರು.

ಕರ್ನಾಟಕ 12 ಜಿಲ್ಲೆಗಳಲ್ಲಿ ಐಸಿಡಿಎಸ್ ಯೋಜನೆ ಖಾಸಗೀಕರಣ ಪ್ರಸ್ತಾಪ ಕೈ ಬಿಡಬೇಕು, ಎಲ್ಲ ಕೆಲಸಗ­ಳನ್ನು ಈಗಿರುವ ಅಂಗನವಾಡಿ ಕಾರ್ಯ­ಕರ್ತೆಯರಿಗೆ ಕೊಟ್ಟು ಕೆಲಸ ಕಾಯಂಗೊ­ಳಿಸಬೇಕು, ಎಲ್ಲ ಅಂಗನವಾಡಿಗಳನ್ನು ಮೇಲ್ದರ್ಜೇಗೇರಿಸಿ ಕಾಯಂ ಶಿಶು ವಿಹಾ-­ರ­ಗಳನ್ನಾಗಿಸಬೇಕು, ಶಾಲಾ ಪೂರ್ವ ಶಿಕ್ಷಣವನ್ನು ಶಿಕ್ಷಣ ಹಕ್ಕು ಕಾಯ್ದೆ–2009ರ ಅಡಿಯಲ್ಲಿ ತರಬೇಕು, ಅಂಗನ­ವಾ­ಡಿಗಳನ್ನು ಶಾಲಾ ಪೂರ್ವ ಶಿಕ್ಞಣ ಜಾರಿ ಮಾಡುವ ನೋಡಲ್ ಕೇಂದ್ರಗಳ­ನ್ನಾಗಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಸಂಘಟನೆ ಮುಖಂಡರಾದ ಶೇಕ್ಷಾ ಖಾದ್ರಿ, ಎಚ್ ಪದ್ಮಾ, ವರಲಕ್ಷ್ಮೀ, ಡಿ.ಎಸ್ ಶರಣಬಸವ, ಕೆ.ಜಿ ವಿರೇಶ,ಯಂಕಪ್ಪ ಕೆಂಗಲ್, ಚನ್ನಬಸಪ್ಪ, ಗಿರಿಯಪ್ಪ ಪೂಜಾರಿ, ಜಿಲಾನಿ,ಗೋಕುರಮ್ಮ, ಅನಸೂಯಾ ಹಾಗೂ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸಂಧ್ಯಾ, ಪಾರ್ವತಿ ಮಂಚಲಾಪುರ, ರಂಗಮ್ಮ ಅನ್ವರ್, ಶಕುಂತಲಾ ದೇಸಾಯಿ, ಲಕ್ಷ್ಮೀ ನಗನೂರು, ಮರಿಯಮ್ಮ, ಬಸಮ್ಮ ಲಿಂಗಸುಗೂರು ಮುಂತಾದವರು ಪ್ರತಿಭಟನೆ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.