ADVERTISEMENT

ಅಡುಗೆ ಅನಿಲ: ಗ್ರಾಹಕರು-ವಿತರಕರ ಜಟಾಪಟಿ

ಪ್ರಜಾವಾಣಿ ವಿಶೇಷ
Published 6 ಮಾರ್ಚ್ 2012, 8:40 IST
Last Updated 6 ಮಾರ್ಚ್ 2012, 8:40 IST

ರಾಯಚೂರು: ಸಾರಿಗೆ ಬಾಡಿಗೆ ದರ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಅಡುಗೆ ಅನಿಲ ಸಾಗಾಣೆ ಟ್ಯಾಂಕರ್ ಮಾಲೀಕರು ರಾಜ್ಯವ್ಯಾಪಿ ಮುಷ್ಕರವನ್ನು ನಾಲ್ಕೈದು ದಿನಗಳಿಂದ ಕೈಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ಗ್ರಾಹಕರ ಪರದಾಟ ಶುರುವಾಗಿದೆ.

ಕಳೆದ ತಿಂಗಳ ಇದೇ ರೀತಿ ಮುಷ್ಕರ ನಡೆದಾಗಲೂ ನಗರದ ಅಡುಗೆ ಅನಿಲ ಸಿಲಿಂಡರ್ ಗ್ರಾಹಕರು ಪರದಾಡಿದ್ದರು. ಆಗಿನ ಪರದಾಟ ಇನ್ನೂ ಮುಗಿದಿಲ್ಲ. ತಿಂಗಳಾನುಗಟ್ಟಲೆ ಮೊದಲೇ ಬುಕ್ ಮಾಡಿದ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ದೊರಕದೇ ಅಡುಗೆ ಅನಿಲ ವಿತರಕ ಸಂಸ್ಥೆ ಮಳಿಗೆ ಎದುರು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಮತ್ತೆ ಅದೇ ಸ್ಥಿತಿಗೆ ಗ್ರಾಹಕರಿಗೆ ಬಂದಿದೆ. ಪ್ಲಾಂಟ್‌ನಿಂದ ಸಿಲಿಂಡರ್‌ಗಳು ಪೂರೈಕೆ ಆಗದೇ ಅಡುಗೆ ಅನಿಲ ಸಿಲಿಂಡರ್ ಎಲ್ಲಿಂದ ಕೊಡಬೇಕು. ನಾಲ್ಕಾರು ದಿನ ತಡೆಯಿರಿ ಎಂದು ಅಡುಗೆ ಅನಿಲ ಸಿಲಿಂಡರ್ ವಿತರಕ ಸಂಸ್ಥೆಯವರು ಗ್ರಾಹಕರನ್ನು ಸಮಾಧಾನ ಪಡಿಸಲು ಮುಂದಾಗಿದ್ದರು. ಅಷ್ಟು ಹೊತ್ತಿಗೆ ಟ್ಯಾಂಕರ್ ಮಾಲೀಕರ ಮುಷ್ಕರ ಕೊನೆಗೊಂಡಿದ್ದರಿಂದ 10-15 ದಿನದಲ್ಲಿ ಸಿಲಿಂಡರ್ ಪೂರೈಕೆ ಆಗಿ ಈಗ ಪರಿಸ್ಥಿತಿ ತಹಬಂದಿಗೆ ಬಂದಿತ್ತು.

ಗ್ರಾಹಕರಷ್ಟೇ ಅಲ್ಲ. ವಿತರಕ ಸಂಸ್ಥೆಯವರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಅಡುಗೆ ಅನಿಲ ಸಾಗಣೆ ಟ್ಯಾಂಕರ್ ಮುಷ್ಕರ ಆರಂಭಗೊಂಡಿದ್ದರಿಂದ ವಿತರಕರು ಮತ್ತು ಗ್ರಾಹಕರು ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಸಿಗುತ್ತದೋ ಇಲ್ಲವೋ ಎಂಬ ಆತಂಕದಿಂದ ವಿತರಕ ಸಂಸ್ಥೆ ಮಳಿಗೆಗೆ ಮೊದಲೇ ಬುಕ್ ಮಾಡಿದ ಗ್ರಾಹಕರು ಅಲೆಯುತ್ತಿರುವುದು ಕಂಡು ಬರುತ್ತಿದೆ.
 
ವಿತರಕ ಸಂಸ್ಥೆಯವರಿಗೆ ಗ್ರಾಹಕರಿಗೆ ಸಮಜಾಯಿಷಿ ನೀಡುವುದು, ಟ್ಯಾಂಕರ್ ಮಾಲೀಕರ ಮುಷ್ಕರದ ಬಗ್ಗೆ ಮನವರಿಕೆ ಮಾಡಿ ಸಮಾಧಾನ ಮಾಡುವ ಕೆಲಸ ಶುರುವಾಗಿದೆ. ಇದೇ ಸ್ಥಿತಿ ತಾಲ್ಲೂಕು ಕೇಂದ್ರಗಳಲ್ಲೂ ಇದೆ.

ವಿತರಕರ ಹೇಳಿಕೆ: ಕಳೆದ ತಿಂಗಳು ಮುಷ್ಕರ ನಡೆದಿದ್ದರಿಂದ ತೊಂದರೆ ಆಗಿತ್ತು. ಈಗ ಸುಧಾರಿಸಿಕೊಳ್ಳಲಾಗುತ್ತಿದೆ. ಈಗ ಮತ್ತೆ ಟ್ಯಾಂಕರ್ ಮಾಲೀಕರ ಮುಷ್ಕರ ಆರಂಭವಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ತಾವು ಮಾಡಿದ ಮನವಿಗೆ ಸ್ಪಂದಿಸಿದ ಇಂಡೇನ್ ಗ್ಯಾಸ್ ಸಂಸ್ಥೆಯ ಬೆಳಗಾವಿ ಪ್ಲಾಂಟ್‌ನ ಅಧಿಕಾರಿಗಳು ಹೈದರಾಬಾದ್ ಪ್ಲಾಂಟ್‌ನಿಂದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ರಾಯಚೂರಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಇಂಡೇನ್ ಅಡುಗೆ ಅನಿಲ ಗ್ರಾಹಕರಿಗೆ ಶೀಘ್ರ ಪೂರೈಕೆಗೆ ಗಮನಹರಿಸಲಾಗಿದೆ ಎಂದು ಇಂಡೇನ್ ಅಡುಗೆ ಅನಿಲ ವಿತರಕ ಸಂಸ್ಥೆ ಸುಮಂತ ಫ್ಲೇಮೋಜೆನ್ ಮಾಲೀಕ ವಿ ಸತ್ಯಪಾಲ್ ಹೇಳಿದರು.

ಎಚ್‌ಪಿ ಮತ್ತು ಬಿಪಿ ಅಡುಗೆ ಅನಿಲ ಸಾಗಣೆ ಟ್ಯಾಂಕರ್ ಮುಷ್ಕರದಿಂದ ನಮ್ಮ ಎಚ್‌ಪಿ ಗ್ಯಾಸ್ ಗ್ರಾಹಕರಿಗೆ ಮತ್ತು ನಮಗೂ ತೊಂದರೆ ಆಗಿದೆ. ಮುಷ್ಕರ ನಡೆದಿರುವ ವಿಚಾರ ಗ್ರಾಹಕರಿಗೂ ಗೊತ್ತಿದೆ. ಅಡುಗೆ ಅನಿಲ ಇಲ್ಲದೇ ಸಮಸ್ಯೆಗೆ ಸಿಲುಕಿದ್ದಾರೆ. ಪರಿಸ್ಥಿತಿ ವಿವರಿಸಿ ಸಮಾಧಾನ ಪಡಿಸಿ ಕಳುಹಿಸುತ್ತಿದ್ದೇವೆ. ನಗರದಲ್ಲಿ 13 ಸಾವಿರ ಎಚ್‌ಪಿ ಗ್ಯಾಸ್ ಗ್ರಾಹಕರಿದ್ದಾರೆ. ನಿತ್ಯ ಒಂದು ಲೋಡ್ ಬರುತ್ತಿತ್ತು. ನಾಲ್ಕು ದಿನದಿಂದ ಬಂದ್ ಆಗಿದೆ. 

ಈಗ ಕಂಪೆನಿಯವರು ಮತ್ತು ಟ್ಯಾಂಕರ್ ಮಾಲೀಕರು ಮಾತುಕತೆ ನಡೆಸಿದ್ದಾರೆ. ಬಿಕ್ಕಟ್ಟು ಪರಿಹಾರ ಆದರೆ ನಿತ್ಯ ಲೋಡ್ ಬರುತ್ತದೆ. ಬಿಕ್ಕಟ್ಟು ಪರಿಹಾರಗೊಂಡ ಬಳಿಕ ನಿತ್ಯ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಸಿದರೂ ಈಗಿನ ಪರಿಸ್ಥಿತಿ ಸುಧಾರಿಸಲು ಕನಿಷ್ಠ 15 ದಿನಗಳಾದರೂ ಬೇಕಾಗುತ್ತದೆ ಎಂದು ಎಚ್‌ಪಿ ಗ್ಯಾಸ್ ವಿತರಕರಾದ ಶೇಷಗಿರಿರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.