ADVERTISEMENT

ಅಡ್ಡಿ: ಕಾರ್ಯಾಚರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:35 IST
Last Updated 10 ಫೆಬ್ರುವರಿ 2011, 9:35 IST

ದೇವದುರ್ಗ: ಪುರಸಭೆ ಆಡಳಿತ ನಿರ್ಣಯದಂತೆ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಶಂಭುಲಿಂಗೇಶ್ವರ ದೇವಸ್ಥಾನವರೆಗಿನ ಮುಖ್ಯ (ಬಜಾರ್)ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಬುಧವಾರ ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ರಸ್ತೆ ತೆರವು ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಸಿದ್ಧರಾಮೇಶ್ವರ ವಾರ್ಡಿನ ಕಟ್ಟಡ ಮಾಲೀಕರು ಅಡ್ಡಿ ಪಡಿಸಿರುವುದರಿಂದ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಚಂದ್ರಶೇಖರ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಿದ್ರಾಮೇಶ್ವರ ವಾರ್ಡಿನ ನಾಗರಿಕರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ 34 ಅಡಿಗಳ ವಿಸ್ತರಣೆಗೆ ಬದಲು 24 ಅಡಿ ಮಾತ್ರ ವಿಸ್ತರಣೆ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದ ನಂತರ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ಸೂಚನೆಯ ಮೇರೆಗೆ ಮುಖ್ಯಾಧಿಕಾರಿಗಳು ಸಿದ್ಧರಾಮೇಶ್ವರ ವಾರ್ಡಿನ ಮುಖ್ಯ ರಸ್ತೆಯಲ್ಲಿ ಬರುವ ಕಟ್ಟಡ ಮಾಲೀಕರಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ವಿಸ್ತರಣೆ ತೆರವು ಕಡ್ಡಾಯವಾಗಿರುವುದರಿಂದ ಒಂದು ವಾರದೊಳಗೆ ಕಟ್ಟಡಗಳನ್ನು ಸ್ವಯಂಕೃತವಾಗಿ ತೆರವುಗೊಳಿಸಲು ಜ. 30 ರಂದು ನೊಟೀಸ್ ಜಾರಿಗೊಳಿಸಿದ ನಂತರ ಬುಧವಾರ ಜೆಸಿಬಿ ಯಂತ್ರವನ್ನು ತೆಗೆದುಕೊಂಡು ವಾರ್ಡಿಗೆ ಹೋದರೆ ಅದಕ್ಕೆ ಪ್ರತಿರೋಧ ಕಂಡು ಬಂದಿತು.

ಬುಧವಾರ ಮುಂಜಾನೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ವಾರ್ಡಿನ ಮುಖ್ಯ ರಸ್ತೆಯಲ್ಲಿ ಬರುವ ಕಟ್ಟಡಗಳನ್ನು ಯಂತ್ರಗಳಿಂದ ತೆರವುಗೊಳಿಸಲು ಆರಂಭಿಸಬೇಕು ಎನ್ನುವಷ್ಟರಲ್ಲಿ ಕಟ್ಟಡ ಮಾಲೀಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಅಧಿಕಾರಿ ಮತ್ತು ಕಟ್ಟಡ ಮಾಲೀಕರ ನಡುವೆ ಕೆಲವು ಕಾಲ ಮಾತಿನ ಚಕಮಕಿ ನಡೆಯಿತು.ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಿಕಿ ಮತ್ತು ಇತರ ಕೆಲವರು ಪುರಸಭೆಯ ನಿರ್ಣಯದಂತೆ 34 ಅಡಿಗಳಿಗೆ ವಿಸ್ತರಣೆ ನಡೆಯಲೇಬೇಕು. ಇದರಲ್ಲಿ ತಾರತಮ್ಯ ಸರಿಯಲ್ಲ ಎಂದು ಮುಖ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಂಡರು.

ಠಾಣೆ ಹತ್ತಿದ ಪ್ರಕರಣ: ಒಬ್ಬರಿಗೊಬ್ಬರ ಮಾತಿನ ಚಕಮಕಿಯಿಂದ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಿಕಿ ಅವರು ಮುಖ್ಯಾಧಿಕಾರಿ ಅವರು ತಮ್ಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ನಂತರ ಕೆಲವರ ಮುಖಂಡತ್ವದಲ್ಲಿ ರಾಜೀ ಸಂಧಾನ ನಡೆದು ದೂರನ್ನು ವಾಪಸ್ ಪಡೆಯಲಾಯಿತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.