ADVERTISEMENT

ಅತಂತ್ರ ಸ್ಥಿತಿಯಲ್ಲಿ ಆರ್‌ಎಲ್‌ಎಸ್ ನಾಲೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 12:25 IST
Last Updated 19 ಜನವರಿ 2011, 12:25 IST

ಮೇಲುಸ್ತುವಾರಿ ಕೊರತೆ


ಲಿಂಗಸುಗೂರ: ತಾಲ್ಲೂಕಿನ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಗಳಲ್ಲಿ ಒಂದಾದ ರಾಂಪೂರ ನವಲಿ ಜಡಿಶಂಕರಲಿಂಗ (ಆರ್ ಎಲ್‌ಎಸ್) ಯೋಜನೆಯು ಒಂದು. ಯೋಜನೆ ಯಡಿ 22 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮೇಲುಸ್ತುವಾರಿ ಮತ್ತು ನಿರ್ವಹಣೆ ಕೊರತೆಯಿಂದ ಮುಖ್ಯನಾಲೆ, ವಿತರಣಾ ಮತ್ತು ಉಪಕಾಲುವೆಗಳು ಅತಂತ್ರ ಸ್ಥಿತಿಗೆ ತಲುಪಿರುವ ಬಗ್ಗೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಸಂಪರ್ಕ ನಾಲೆ, ಪೂರ್ವ ಮತ್ತು ಪಶ್ಚಿಮ ಮುಖ್ಯ ನಾಲೆಗಳ ದುಸ್ಥಿತಿ ಹೇಳತೀರದು. ಮುಖ್ಯ ನಾಲೆಯ ವೀಕ್ಷಣಾ ರಸ್ತೆಗಳು ಮುಳ್ಳುಕಂಟಿಗಳಿಂದ ಮುಚ್ಚಿ ಹೋಗಿವೆ. ಮಣ್ಣಿನ ಏರಿ ಪ್ರದೇಶದ ಮಣ್ಣಿನ ಒಡ್ಡಿನಲ್ಲಿ ಮುಳ್ಳುಕಂಟಿ ಬೆಳೆದು ಬಹುತೇಕ ಕಡೆಗಳಲ್ಲಿ ನಾಲೆಯ ತಳಭಾಗ ಮತ್ತು ಒಳಮೈಯಿಂದ ಬಸಿನೀರು ಸೋರಿಕೆಯಾಗುತ್ತಿದೆ. ತಳಪಾಯದಲ್ಲಿ ಮಣ್ಣು ಸಂಗ್ರಹಗೊಂಡು ಆಪು, ಮುಳ್ಳುಕಂಟಿ ಬೆಳೆದು ನಿಂತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮುಖ್ಯ ನಾಲೆಯೆ ಹೀಗಿರಬೇಕಾದರೆ ವಿತರಣಾ ನಾಲೆ, ಉಪಕಾಲುವೆಗಳ ನಿರ್ವಹಣೆ ಕೇಳುವವರೆ ಇಲ್ಲ. ಹೊಲಗಾಲುವೆಗಳು ಮಣ್ಣು ಪಾಲಾಗಿದ್ದು, ಬಲಿಷ್ಠ ರೈತರ ಅಟ್ಟಹಾಸದಿಂದ ಬಹುತೇಕ ಸಾಮಾನ್ಯ ರೈತರ ಜಮೀನಿಗೆ ನೀರು ತಲುಪದಂತಾಗಿದೆ. ಸಾಮಾನ್ಯ ರೈತರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೂ ನ್ಯಾಯ ದೊರಕದೆ ನೀರಾವರಿ ಸೌಲಭ್ಯ ಕೆಲ ರೈತರಿಗೆ ಬಿಸಿಲ್ಗುದು ರೆಯಾಗಿ ಪರಿಣಮಿಸಿದೆ ಎಂದು ರೈತರಾದ ಮಾನಪ್ಪ, ಕುಪ್ಪಣ್ಣ ಆರೋಪಿಸಿದ್ದಾರೆ.

ಅವೈಜ್ಞಾನಿಕ ನಾಲೆ ನಿರ್ಮಾಣದಿಂದ ಕೆಲ ರೈತರು ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿದ್ದಾರೆ. ಭಾಗಶಃ ರೈತರು ನಾಲೆಗಳ ನಿರ್ವಹಣೆ ಕೊರತೆಯಿಂದ ಸಮರ್ಪಕ ನೀರು ಹರಿಯದೆ ನೀರಾವರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ನೀರು ಹರಿಸಲು ಮುಂದಾಗಬೇಕು ಎಂದು ರೈತ ಮುಖಂಡ ದೇವೇಂದ್ರಪ್ಪ ಆಗ್ರಹಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT