ಸಿಂಧನೂರು: ತಾಲ್ಲೂಕಿನ ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ, ಅಂದಾಜು 60 ಕೋಟಿ ವೆಚ್ಚದ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರಜಾಜಾಗ್ರತಿ ಸಂಘಟನೆ ಮತ್ತು ದಲಿತ ವಿಮೋಚನಾ ಸೇನೆ ತಾಲ್ಲೂಕು ಘಟಕಗಳು ಬುಧವಾರ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಸಾಂಕೇತಿಕ ಧರಣಿ ನಡೆಸಿದವು.
ಬಹುಕೋಟಿ ಮೊತ್ತದ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರನ್ನು ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು. ಗೊರೇಬಾಳ ಮತ್ತು 13 ಹಳ್ಳಿಗಳು , ದಡೆಸ್ಗೂರು ಮತ್ತು 17 ಹಳ್ಳಿಗಳು, ಆರ್.ಹೆಚ್.ಕ್ಯಾಂಪ್ ಮತ್ತು 25 ಹಳ್ಳಿಗಳು, ಭೋಗಾಪುರ ಮತ್ತು 13 ಹಳ್ಳಿಗಳು ಹಂತ 1 ಹಾಗೂ ಭೋಗಾಪುರ ಮತ್ತು 13 ಹಳ್ಳಿಗಳು ಹಂತ 2 ರಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆದರೂ ಎಇಇ ಬಿ.ಆರ್.ಗೌಡೂರು ಹಾಗೂ ಇಲಾಖೆಯ ಕೆಲ ಸಿಬ್ಬಂದಿಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಂಜೂರಾದ ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರಿದರು.
ಭ್ರಷ್ಟಾಚಾರ ನಡೆಸಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಪುನರ್ವಸತಿ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ಹಾಗೂ 2012-–13ನೇ ಸಾಲಿನಲ್ಲಿ ಸ್ಕೇರ್‌ಸಿಟಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ಮೇಲಧಿಕಾರಿಗಳು ಶೀಘ್ರ ತನಿಖೆ ನಡೆಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ತಹಸೀಲ್ದಾರ್ ಅವರ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಧರಣಿಯಲ್ಲಿ ಪ್ರಜಾಜಾಗ್ರತಿ ಸಂಘಟನೆಯ ಅಧ್ಯಕ್ಷ ಎಚ್.ಜಗದೀಶ ವಕೀಲ, ದಲಿತ ವಿಮೋಚನಾ ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ವಿರುಪಣ್ಣ ನಂದವಾಡಗಿ, ಮುಖಂಡರಾದ ಅಮರೇಶ ಗಿರಿಜಾಲಿ, ಶ್ರೀನಿವಾಸ.ವೈ, ರಾಜೇಶಗೌಡ, ವೀರೇಶ ಗೋಮರ್ಸಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.