ADVERTISEMENT

ಆಕರ್ಷಕ ಫಲ–ಪುಷ್ಪ, ಮತ್ಸ್ಯ ವೈವಿಧ್ಯ

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳಕ್ಕೆ ಕೊನೆ ದಿನ ಇಂದು

ನಾಗರಾಜ ಚಿನಗುಂಡಿ
Published 11 ಡಿಸೆಂಬರ್ 2017, 10:16 IST
Last Updated 11 ಡಿಸೆಂಬರ್ 2017, 10:16 IST
ಮೀನುಗಳ ಪ್ರದರ್ಶನ ವಿಭಾಗದಲ್ಲಿ ಚಿತ್ತಾಕರ್ಷಕ ಮೀನು
ಮೀನುಗಳ ಪ್ರದರ್ಶನ ವಿಭಾಗದಲ್ಲಿ ಚಿತ್ತಾಕರ್ಷಕ ಮೀನು   

ರಾಯಚೂರು: ಪ್ರತಿದಿನವೂ ಜನದಟ್ಟಣೆಯಿಂದ ಮುಂದುವರಿದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಆಯೋಜಿತ ಕೃಷಿ ಮೇಳದಲ್ಲಿ ಫಲ–ಪುಷ್ಪ ಅಲಂಕಾರ ಮತ್ತು ವೈವಿಧ್ಯಮಯ ಮತ್ಸ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಇಂದು ಕೊನೆಯ ದಿನ.

ಕೃಷಿ ಮೇಳಕ್ಕೆ ಮೂರು ದಿನ ಭೇಟಿ ನೀಡಿದ ಜನರೆಲ್ಲ ಹೂವು, ಹಣ್ಣುಗಳು ಅಲಂಕಾರ ಮತ್ತು ಮೀನುಗಳ ವೈವಿಧ್ಯತೆ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಶಾಲಾ ಮಕ್ಕಳಿಗೆ ಈ ಪ್ರದರ್ಶನಗಳು ಹೊಸದೊಂದು ಲೋಕವನ್ನು ಪರಿಚಯಿಸುತ್ತಿವೆ. ವಿಶ್ವವಿದ್ಯಾಲಯದ ಆಡಳಿತ ವಿಭಾಗದ ನೂತನ ಕಟ್ಟಡದಲ್ಲಿ ಈ ವಿಶೇಷ ಪ್ರದರ್ಶನಗಳ ವ್ಯವಸ್ಥೆ ಮಾಡಲಾಗಿದ್ದು, ಕೃಷಿ ಮೇಳ ಆರಂಭದ ದಿನದಿಂದಲೂ ಜನದಟ್ಟಣೆಯ ತಾಣವಾಗಿ ಮಾರ್ಪಟ್ಟಿದೆ.

ಜಿಲ್ಲಾ ತೋಟಗಾರಿಕೆ ಇಲಾಖೆಯು ಈ ಫಲ–ಪುಷ್ಪ ಪ್ರದರ್ಶನದ ವ್ಯವಸ್ಥೆ ಮಾಡಿದೆ. ಜಿಲ್ಲಾಡಳಿತ ಕಚೇರಿ ಇರುವ ಸಾತ್‌ಕಚೇರಿ ಮಾದರಿಯೊಂದನ್ನು ಸಿದ್ಧಪಡಿಸಿ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಪ್ರದರ್ಶನದಲ್ಲಿ ಆರಂಭದಲ್ಲೆ ಗಮನ ಸೆಳೆಯುವ ಸಾತ್‌ಕಚೇರಿ ಮುದ ನೀಡುತ್ತದೆ. ವೈವಿಧ್ಯಮಯ ಹಣ್ಣುಗಳು ಮಾದರಿಗಳನ್ನು ಮತ್ತು ಹೂವಿನ ಸಸಿಗಳನ್ನು ಪ್ರದರ್ಶನದಲ್ಲಿ ಇರಿಸಿದ್ದು, ಎಲ್ಲವೂ ಅಚ್ಚರಿ ಮೂಡಿಸುತ್ತವೆ. ಜಿಲ್ಲೆಯಲ್ಲಿ ಬೆಳೆಯುವ ತೋಟಗಾರಿಕೆ ಬೆಳೆಗಳು ಮತ್ತು ಅವುಗಳ ಬೆಳೆದಿರುವ ರೈತರ ಮಾಹಿತಿಯೂ ಕೂಡಾ ಲಭ್ಯವಿದೆ.

ADVERTISEMENT

ಸಾಮಾನ್ಯವಾಗಿ ಎಲ್ಲರೂ ಸೀತಾಫಲ ನೋಡಿರಬಹುದು. ಪ್ರದರ್ಶನದಲ್ಲಿ ರಾಮಫಲ ಕೂಡಾ ಇದೆ. ದೊಡ್ಡ ಗಾತ್ರದ ಪರಂಗಿ ಹಣ್ಣು, ದಾಳಿಂಬೆ ಹಣ್ಣು, ಒಂದೇ ಅಂಗುಲ ಬೆಳೆಯುವ ಮೆಣಸಿನಕಾಯಿ, ವಿವಿಧ ನಮೂನೆಯ ಲಿಂಬೆಹಣ್ಣುಗಳು, ಕೆಲವು ತರಕಾರಿಗಳು ಪ್ರದರ್ಶನದಲ್ಲಿವೆ. ಮಣ್ಣಿನ ಅಗತ್ಯವಿಲ್ಲದೆ ಬೆಳೆ ಬೆಳೆಯುವುದಕ್ಕೆ ಸಾಧ್ಯ ಎನ್ನುವ ಹೈಡ್ರೊಪೋನಿಕ್‌ ಕೂಡಾ ಪ್ರಮುಖವಾಗಿ ನೋಡಬಹುದು. ಹೈಡ್ರೊಪೋನಿಕ್‌ ಪದ್ಧತಿಯಲ್ಲಿ ಬರೀ ನೀರು ಬಳಸಿ ಬೆಳೆ ಬೆಳೆಯಬಹುದಾಗಿದೆ.

ಮೆಣಸಿನಕಾಯಿಂದ ನಿರ್ಮಿಸಿದ ಕೋಳಿ, ಕಲ್ಲಂಗಡಿ ಹಣ್ಣಿನಲ್ಲಿ ಜ್ಞಾನಪೀಠ ಪುರಸ್ಕೃತರ ಚಿತ್ರಗಳು, ಗೋಬಿಯಿಂದ ಕುರಿ ಮಾದರಿಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ. ಶಿವಮೊಗ್ಗದ ಹರೀಶಕುಮಾರ್‌ ಅವರು ತೋಟಗಾರಿಕೆ ಇಲಾಖೆಯ ಕೋರಿಕೆ ಮೇರೆಗೆ ಈ ಅಲಂಕಾರಗಳನ್ನು ರಾಯಚೂರಿನಲ್ಲಿ ಮಾಡಿದ್ದಾರೆ.

ಮೈಮರೆಸುವ ಮತ್ಸ್ಯಲೋಕ: ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ನೆಲಮಹಡಿಯಲ್ಲಿ 60 ಕ್ಕೂ ಹೆಚ್ಚು ನಮೂನೆಯ ಮೀನುಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಒಂದಕ್ಕಿಂತ ಒಂದು ಸುಂದರವಾದ ಮೀನುಗಳು ನೋಡುಗರನ್ನು ಮೈಮರೆಸುತ್ತವೆ. ಊಹೆಗೂ ಮೀರಿದ ವರ್ಣಗಳು, ಆಕಾರಗಳು ಮತ್ತು ಪುಕ್ಕಗಳನ್ನು ಹೊಂದಿರುವ ಮೀನುಗಳಿವೆ. ಕೆಲವು ನಿಧಾನವಾಗಿ ಚಲಿಸಿದರೆ, ಕೆಲವು ಸದಾ ಓಡಾಡುತ್ತಲೇ ಇರುತ್ತವೆ.

ಕಿಸ್ಸಿಂಗ್‌ ಗುರಾಮಿ, ಲಾಯಿನ್‌ ಫೇಸ್‌ ಫೀಶ್‌, ಬಣ್ಣದ ಗಪ್ಪೆ ಮೀನು, ಹಳದಿ ರಿಗಲ್‌, ಸಿಲ್ವರ್‌ ಡಾಲರ್ ಮೀನು, ನಿಯೋನ್‌ ಟೆಟ್ರಾ, ಪರ್ಲ್‌ ಗೌರಾಮಿ, ಫೈಟರ್‌ ಫಿಶ್‌, ಮೊಲಿ, ಗಪಿ, ಮಾರ್ಬಲ್‌ ಮೊಲಿ... ಹೀಗೆ ಹೆಸರಿಗೆ ತಕ್ಕಂತೆ ವೈವಿಧ್ಯಮಯ ಮೀನುಗಳು ಸುಂದರ ಭಾವವನ್ನು ತುಂಬುತ್ತವೆ. ಬಳಕುವ ಮೀನುಗಳನ್ನು ನೋಡುತ್ತಲೇ ನಿಲ್ಲಬೇಕೆನ್ನುವ ಆಸೆ ಹುಟ್ಟುತ್ತದೆ. ಆದರೆ, ಪ್ರದರ್ಶನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿರುವುದರಿಂದ ನೋಡುತ್ತಾ ನಿಲ್ಲುವುದಕ್ಕೆ ಆಗುವುದಿಲ್ಲ.

‘ಹೂವುಗಳ ಅಲಂಕಾರ ನೋಡಿದ್ದು ತುಂಬಾ ಖುಷಿಯಾಯಿತು. ರಾಯಚೂರಿನಲ್ಲಿ ಇಷ್ಟು ಹೂವು ನೋಡುವುದಕ್ಕೆ ಸಾಧ್ಯವಿಲ್ಲ. ಪ್ರದರ್ಶ ನದಲ್ಲಿ ಹೂವು, ಹಣ್ಣುಗಳು ಮತ್ತು ಮೀನುಗಳನ್ನು ನೋಡಿದ್ದನ್ನು ಜೀವನವಿಡೀ ಮರೆಯುವುದಿಲ್ಲ’ ಎಂದು ಶಕ್ತಿನಗರದಿಂದ ಬಂದಿದ್ದ ಗೃಹಿಣಿ ಶಾಮಲಾ ಖುಷಿ ವ್ಯಕ್ತಪಡಿಸಿದರು.

‘ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದಾರೆ. ಫಲ–ಪುಷ್ಪ ಪ್ರದರ್ಶನದಲ್ಲಿ ಪ್ರತಿಯೊಂದನ್ನು ಜನರು ಮೆಚ್ಚಿದ್ದಾರೆ. ಅದೇ ರೀತಿಯನ್ನು ಹೂವು– ಹಣ್ಣುಗಳ ಮಾಹಿತಿಯನ್ನು ಒದಗಿಸುತ್ತಿದ್ದೇವೆ’ ಎಂದು ತೋಟಗಾರಿಕೆ ಕ್ಲಿನಿಕ್‌ ವಿಭಾಗದ ವಿಷಯತಜ್ಞ ಅಮರೇಶ ಆಶಿಹಾಳ ‘ಪ್ರಜಾವಾಣಿ’ಗೆ ತಿಳಿಸಿದರು.

*

ಪ್ರತಿವರ್ಷ ಒಂದು ಮಾದರಿ ಪ್ರಮುಖವಾಗಿಟ್ಟುಕೊಂಡು ಫಲಪುಷ್ಪ ಪ್ರದರ್ಶನ ಮಾಡು ತ್ತೇವೆ. ಕಳೆದ ವರ್ಷ ಆರ್‌ಟಿಪಿಎಸ್‌ ಮಾದರಿ ನಿರ್ಮಿಸಿದ್ದು ಕೂಡಾ ಜನರಿಗೆ ಇಷ್ಟವಾಗಿತ್ತು.

-ಮಹೇಶ ಇಲಾಖೆಯ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.