ADVERTISEMENT

ಎಚ್‌ಸಿಜಿ ಕ್ಯಾನ್ಸರ್ ಸಂಸ್ಥೆ: ಚಿಕಿತ್ಸೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 7:18 IST
Last Updated 3 ಡಿಸೆಂಬರ್ 2012, 7:18 IST

ರಾಯಚೂರು: ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಜಾಗತಿಕ ಮಟ್ಟದಲ್ಲಿ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಿಸ್ ಸಂಸ್ಥೆ(ಎಚ್‌ಸಿಜಿ)ಯು ರಾಯಚೂರಿನ ಬಾಲಂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗವನ್ನು ಆರಂಭಿಸುತ್ತಿದ್ದು, ತಿಂಗಳಲ್ಲಿ ಒಂದು ಬಾರಿ ಎಚ್‌ಸಿಜಿ ಸಂಸ್ಥೆಯ ತಜ್ಞ ವೈದ್ಯರಾದ ಡಾ.ಸುಬ್ರಮಣ್ಯರಾವ್ ಅವರು ಭೇಟಿ ನೀಡಿ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ ಎಂದು ಎಚ್‌ಸಿಜಿ ಸಂಸ್ಥೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಸಮಾಲೋಚಕ ಡಾ.ಮಹೇಶ ಬಂಡೆಮೇಗಲ್ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗೆ ಸಂಬಂಧಿಸಿದಂತೆ ರಿತು ಇತ್ತೀಚಿನ ಮುಂದುವರಿದ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ ಉತ್ತಮ ಚಿಕಿತ್ಸೆ ನೀಡುವಲ್ಲಿ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕ್ಯಾನ್ಸರ್ ಕೇರ್‌ಚಿಕಿತ್ಸೆಯಲ್ಲಿ ಪರಿಣಿತ ಸಂಸ್ಥೆ ಎಂಬ ಹೆಸರು ಹೊಂದಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದೇಶದ ವಿವಿಧ ಕಡೆ 25 ಕೇಂದ್ರ ಹೊಂದಿದೆ. ಕ್ಯಾನ್ಸರ್ ಕೇರ್ ಚಿಕಿತ್ಸೆ, ಇಮೇಜಿಂಗ್, ಪ್ರಯೋಗಾಲಯ, ಕ್ಲಿನಿಕಲ್ ಟ್ರಯಲ್ಸ್ ಮತ್ತು ಸಂಶೋಧನಾ ಸೇವೆಗೆ ಗಮನ ನೀಡಿದೆ ಎಂದರು.

ಕ್ಯಾನ್ಸರ್ ರೋಗ ಗುಣಪಡಿಸಲು ಅತ್ಯುತ್ತಮ ಗುಣಮಟ್ಟದ ಕ್ಯಾನ್ಸರ್ ಕೇರ್‌ನ ಚಿಕಿತ್ಸೆಗಾಗಿ ಅನ್ವೇಷಣೆಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ದೊರಕಿಸುತ್ತಿದೆ ಎಂದರು.

ಸಂಸ್ಥೆಯ ಡಾ. ಸುಬ್ರಮಣ್ಯರಾವ್ ಅವರು ಪ್ರತಿ ತಿಂಗಳು ಒಂದು ಭಾರಿ ಭೇಟಿ ಮಾಡುವರು. ದೂರದ ಬೆಂಗಳೂರಿಗೆ ಬರಲು ಆಗದೇ ಇರುವವರು, ಇಲ್ಲಿಯೇ ಚಿಕಿತೆ ಪಡೆಯಬಯಸುವವರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನತೆಗೆ ಈ ಆರೋಗ್ಯ ಸೇವೆ ದೊರಕಿಸಲು ಪ್ರಯತ್ನ ಮಾಡಲಾಗಿದೆ ಎಂದರು.

ಬೆಂಗಳೂರಿನಲ್ಲಿ ಹೊರ ರೋಗಿ ವಿಭಾಗಕ್ಕೆ ಪ್ರವೇಶ ಶುಲ್ಕ 500 ನಿಗದಿಪಡಿಸಲಾಗಿದೆ. ಬಾಲಂಕು ಸಂಸ್ಥೆಯು ಇಲ್ಲಿ ರೂ. 200 ನಿಗದಿಪಡಿಸಿ ಜನತೆಗೆ ಸೇವೆ ದೊರಕಿಸುವ ಪ್ರಯತ್ನ ಮಾಡಿದೆ ಎಂದು ಬಾಲಂಕು ಆಸ್ಪತ್ರೆ ಸಂಸ್ಥೆಯ ವೀರಣ್ಣ ಮುದಗಲ್ ಹೇಳಿದರು.

ಯುರೋ ಅನ್ಕಾಲಜಿಸ್ಟ್ ಡಾ.ಶ್ರೀವತ್ಸ,  ಸರ್ಜಿಕಲ್ ಅಂನ್ಕಾಲಜಿಸ್ಟ್ ಡಾ.ಸುಬ್ರಮಣ್ಯರಾವ್ ಅವರು ಮಾತನಾಡಿ, ದಕ್ಷಿಣ ಏಷ್ಯಾದಲ್ಲಿಯೇ ಒಂದೇ ಸೂರಿನಡಿ ಕ್ಯಾನ್ಸರ್ ರೋಗಕ್ಕೆ ಗುಣಕಾರಿ ಚಿಕಿತ್ಸೆ ನೀಡುವ ದೊಡ್ಡ ಸಂಸ್ಥೆ ಎಚ್‌ಸಿಜಿ ಸಂಸ್ಥೆಯಾಗಿದೆ. ಯುರೋಪ್ ದೇಶದ ಜನತೆಯೂ ಈ ಸಂಸ್ಥೆಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ.

ಬಡವರು, ಅಸಹಾಯಕರಿಗೆ ಆದ್ಯತೆ ಸೇವೆ ಲಭ್ಯ. ಬಿಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸೆ ವ್ಯವಸ್ಥೆ ಇದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಬಾಯಿ, ಗಂಟಲು ಕ್ಯಾನ್ಸರ್ ಪ್ರಕರಣ ವರದಿಯಾದರೆ ನಗರ ಮತ್ತು ಪಟ್ಟಣ, ಮಹಾನಗರಗಳಲ್ಲಿ ಯಕೃತ್, ಮೂತ್ರಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್ ಪ್ರಕರಣ ವರದಿಯಾಗಿವೆ ಎಂದು ವಿವರಿಸಿದರು.ಸಂಸ್ಥೆಯ ಡಾ.ಉಮೇಶ ಮಾತನಾಡಿ, ವರ್ಷದಲ್ಲಿ 25 ಕೇಂದ್ರಗಳಲ್ಲಿ ಸುಮಾರು 30 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.