ADVERTISEMENT

`ಎಪಿಎಲ್ ಅನಿಲರಹಿತ ಪಡಿತರ ಚೀಟಿಗೆ ಸೀಮೆ ಎಣ್ಣೆ ಸ್ಥಗಿತ'

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:05 IST
Last Updated 7 ಸೆಪ್ಟೆಂಬರ್ 2013, 6:05 IST

ರಾಯಚೂರು: ರಾಯಚೂರು ಜಿಲ್ಲೆಯ ಅನೌಪಚಾರಿಕ ಪಡಿತರ ಪ್ರದೇಶಗಳಾದ ರಾಯಚೂರು ನಗರ ಮತ್ತು ಸಿಂಧನೂರು ನಗರ ಪ್ರದೇಶಗಳಲ್ಲಿರುವ ಎಪಿಎಲ್ ಅನಿಲರಹಿತ ಪಡಿತರ ಚೀಟಿಗಳಿಗೆ ಸೆಪ್ಟೆಂಬರ್ -2013ರಿಂದ ಸೀಮೆ ಎಣ್ಣೆ ಹಂಚಿಕೆ ನಿಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರದೇಶದ ನಾನ್ ಗ್ಯಾಸ್ ಪಡಿತರ ಚೀಟಿದಾರರಿಗೆ ಗ್ಯಾಸ್ ಸಂಪರ್ಕ ಪಡೆಯಲು ಕೋರಲಾಗಿದೆ. ಸದ್ಯ ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯದಾದ್ಯಂತ ರೂ.16.20  ದರದಲ್ಲಿ ಪಡಿತರ ಸೀಮೆ ಎಣ್ಣೆ ವಿತರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಆಗಸ್ಟ್ ತಿಂಗಳಿಂದಲೇ ಇದು ಅನ್ವಯ ಆಗಿದೆ. ಹೆಚ್ಚಿನ ಮೊತ್ತದ ಹಣ ಕೇಳಿದರೆ ಗ್ರಾಹಕರು ದೂರು ನೀಡಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶದಲ್ಲಿರುವ ಎಪಿಎಲ್ ಅನಿಲರಹಿತ ಪಡಿತರ ಚೀಟಿಗಳಿಗೆ 2013ರ ಸೆಪ್ಟೆಂಬರ್ ತಿಂಗಳಲ್ಲಿ ತಲಾ 3 ಲೀಟರ್‌ನಂತೆ ಸೀಮೆ ಎಣ್ಣೆ ವಿತರಿಸಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಗ್ರಾಮೀಣ ಎಪಿಎಲ್ ಪಡಿತರ ಚೀಟಿಗಳಿಗೂ ಸಹ ಹಂತ ಹಂತವಾಗಿ ಸೀಮೆ ಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗುವುದು ಎಂದರು.

ಈ ಪಡಿತರ  ಚೀಟಿದಾರರು ಗ್ಯಾಸ್ ಸಂಪರ್ಕ ಪಡೆಯಬೇಕು. ರಾಜೀವಗಾಂಧಿ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರು ಎಲ್‌ಪಿಜಿ ಸಂಪರ್ಕ ಅವಕಾಶವಿದೆ. ಇದನ್ನು ಉಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಸೆಪ್ಟೆಂಬರ್ ತಿಂಗಳಲ್ಲಿ  ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಹಾಗೂ ಲಿಂಗಸುಗೂರು, ದೇವದುರ್ಗ ಮತ್ತು ಮಾನ್ವಿ ತಾಲ್ಲೂಕಿನ ನಗರ ಪ್ರದೇಶದಲ್ಲಿರುವ ಒಂದು ಮತ್ತು ಎರಡು ಸದಸ್ಯರನ್ನು ಹೊಂದಿರುವ ಅಂತ್ಯೋದಯ ಹಾಗೂ ಬಿಪಿಎಲ್ ಅನಿಲರಹಿತ ಪಡಿತರ ಚೀಟಿಗಳಿಗೆ ತಲಾ 3 ಲೀಟರ್‌ನಂತೆ ಹಾಗೂ 3ಕ್ಕಿಂತ ಹೆಚ್ಚು ಸದಸ್ಯರು ಹೊಂದಿರುವ ಪಡಿತರ ಚೀಟಿದಾರರಿಗೆ 5 ಲೀಟರ್ ಸೀಮೆ ಎಣ್ಣೆ ವಿತರಿಸಲಾಗುವುದು ಎಂದು ಹೇಳಿದರು.

ಹೊಸದಾಗಿ ಎಪಿಎಲ್ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಪಡಿತರ ಚೀಟಿಗಳನ್ನು ಪರಿಶೀಲಿಸಿ ಎಪಿಎಲ್ ಅನಿಲ ಪಡಿತರ ಚೀಟಿಗಳನ್ನು ಮಾತ್ರ ವಿತರಣೆ ಮಾಡಲಾಗುವುದು. ಆನ್‌ಲೈನ್ ಮೂಲಕ ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದಿದ್ದರೆ ಪಡಿತರ ಚೀಟಿಯಲಲಿ ಎಲಿಜಿಬಲ್ ಫಾರ್ ಗ್ಯಾಸ್ ಕನೆಕ್ಷನ್ ಎಂದು ಮುದ್ರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಆದೇಶಿಸಿದ್ದಾರೆ ಎಂದು ತಿಳಿಸಿದರು.

ಸೀಮೆ ಎಣ್ಣೆ ಪಡೆಯುತ್ತಿದ್ದ ಎಲ್ಲ ವರ್ಗದ ಪಡಿತರ ಚೀಟಿದಾರರು ಯುಐಡಿ ಮತ್ತು ಇಐಡಿ ನಂಬರ್‌ಗಳನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಾಯಿಸಬೇಕು. 18 ವರ್ಷ ಮೇಲ್ಪಟ್ಟ ಮಹಿಳೆ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರಾಗುತ್ತಾರೆ.  ಪಡಿತರ ಚೀಟಿತಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆ ಇಲ್ಲದೇ ಇದ್ದರೆ ಪುರುಷರು ಮುಖ್ಯಸ್ಥರಾಗುತ್ತಾರೆ. ಈ ಮಾಹಿತಿಯನ್ನು ಪಡಿತರ ಚೀಟಿದಾರರು ನ್ಯಾಯ ಬೆಲೆ ಅಂಗಡಿಯವರಿಗೆ ನೀಡಬೇಕು. ಇಲ್ಲದೇ ಇದ್ದರೆ ಹಂತ ಹಂತವಾಗಿ ಸೀಮೆ ಎಣ್ಣೆ ವಿತರಣೆ ತಡೆ ಹಿಡಿಯಲಾಗುವುದು ಎಂದು ವಿವರಿಸಿದರು.

ಸದ್ಯಕ್ಕೆ ರಾಯಚೂರು, ಸಿಂಧನೂರು, ಲಿಂಗಸುಗೂರು, ಮಾನ್ವಿ ಮತ್ತು ದೇವದುರ್ಗದಲ್ಲಿ ಮಾತ್ರ ಪಡಿತರ ಚೀಟಿದಾರರಿಂದ ಈ ಮಾಹಿತಿ ಸಲ್ಲಿಕೆಗೆ ಅವಕಾಶವಿದೆ. ಮುಂಬರುವ ದಿನದಲ್ಲಿ ಜಿಲ್ಲೆಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಗುರುರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.